ಹೊತ್ತಾರೆ ನಾನೆದ್ದು ಯಾರಾರ ನೆನೆಯಲಿ
|
|
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ಹೊತ್ತಾರೆ ನಾನೆದ್ದು ಯಾರಾರ ನೆನೆಯಲಿ
ಹೊತ್ತಾರೆ ನಾನೆದ್ದು ಯಾರಾರ ನೆನೆಯಲಿ
ಮುಕುತಿ ಪಡೆದವರ ನೆನೆಯುವೆ
ಮುಕುತಿ ಪಡೆದವರ ನೆನೆಯುವೆ | ಗುರುದೇವಾ
ಸಚ್ಚಿದಾನಂದನ ನೆನೆಯುವೆ || ಪ ||
ಕರುಣೆಯ ನಿಧಿಯಾಗಿ ಮಮತೆಯ ಸುಧೆಯಾಗಿ
ಕರ್ಮವ ಹರಿಪ ಗುರುವಾಗಿ... | ಧರೆಗಿಳಿದ
ವರಗುರು ಬಸವನಾ ನೆನೆಯುವೆ | || ೧ ||
ಮೃಣ್ಮಯದ ಕಾಯವ ಚಿನುಮಯ ಮಾಡುವ
ಚೆನ್ನಾರ ಚೆಲುವ ಘನಲಿಂಗ.... | ದೇವನ
ಮನಮುಟ್ಟಿ ನೆನೆದು ತಣಿಯುವೆ | || ೨ ||
ತನುಮನಧನಗಳ ಘನಶಿವಗೆ ಅರ್ಪಿಸಿ
ಚಿನುಮಯಳಾದ ಮಹಾದೇವಿ... | ಯಕ್ಕನ
ನೆನೆದು ಜೀವನವ ಸವಿಗೊಳಿಪೆ | || ೩ ||
ಯೋಗದ ತವರಾಗಿ ತ್ಯಾಗದ ಕುರುಹಾಗಿ
ಭೋಗ ಜೀವನವ ತೃಣವೆನಿಸಿ... | ಘನವಾದ
ಯೋಗಿ ಅಲ್ಲಮನ ನೆನೆಯುವೆ | || ೪ ||
ಜ್ಞಾನದ ಸಿರಿಯಾಗಿ ಅಜ್ಞಾನದರಿಯಾಗಿ
ಕಾಮಕ್ರೋಧವನಳಿದ ಘನಮಹಿಮ..... | ಗುರುವಾದ
ಚನ್ನಬಸವಣ್ಣನ ನೆನೆಯುವೆ | || ೫ ||
ಶುದ್ಧಾತ್ಮ ತಾನಾಗಿ ಕುದ್ರ ಮಾಯೆಯ ಗೆಲಿದು
ಬದ್ಧ ಜೀವನದ ಭವಗೆಲಿದು...| ಶಿವವಾದ
ಸಿದ್ಧರಾಮೇಶನ ನೆನೆಯುವೆ || ೬ ||
ಮಾಚಿದೇವಯ್ಯಗಳ ಹಡಪದಪ್ಪಣ್ಣಗಳ
ಮೋಚಿ ಕಾಯಕದ ಹರಳಯ್ಯ..... | ಮಾರಯ್ಯ
ಬಾಚಯ್ಯನವರ ನೆನೆಯುವೆ | || ೭ ||
ತಾಯಿ ನೀಲಮ್ಮಗಳ ಅಕ್ಕ ನಾಗಮ್ಮಗಳ
ಭಾಮೆ ಮುಕ್ತಾಯಕ್ಕ ಸತ್ಯಕ್ಕೆ.... | ಲಿಂಗಮ್ಮ
ನಿತ್ಯ ಶರಣೆಯರಾ ನೆನೆಯುವೆ | || ೮ ||
ಮಮಕರದ ಕಮಲಕ್ಕೆ ಲಿಂಗದೇವನನಿತ್ತು
ಚಿನ್ಮಯಗೊಳಿಸಿದ ಶ್ರೀ ಗುರು.... | ಲಿಂಗಾನಂದ
ಘನಗುರುವ ನೆನೆದು ಹಾಡುವೆ | || ೯ ||
ಘನವರಿತು ಅನುವಾಗಿ ಜೀವನವು
ಶಿವವಾಗಿ ಶರಣಸತಿಯರಾಗಿ ಶರಣಾದ... | ಎಲ್ಲರ
ವರ ಸಚ್ಚಿದಾನಂದನ ನೆನೆಯುವೆ || ೧೦||