ಲಿಂಗಪೂಜೆ | ಬಿಡು ಬಾಹ್ಯದೊಳು ಡಂಭವ |
ಲಿಂಗಾಯತ ಪ್ರಾರ್ಥನೆ |
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
ಬಸವಂ ಪ್ರಣವಾಕಾರಂ
ಬಸವಂ ಶರಣಾಗತ ರಕ್ಷಕ ವರಲೋಲಂ
ಬಸವಂ ಜನ್ಮ ಕುಠಾರಂ |
ಬಸವಂ ನಮಾಮಿ ಶ್ರೀಗುರು ಬಸವೇಶಂ ||
ಪ್ರಣವಾರೂಢನು ಪ್ರಣವ ಸ್ವರೂಪನು
ಪ್ರಣವ ಪಕೃತಿ ಸಂಜ್ಞನು
ಪ್ರಣವ ಷಡಂಗ ಸಮರಸ ನಮ್ಮ
ಕೂಡಲ ಸಂಗಮ ದೇವರು.
ಇವನಾರವ ಇವನಾರವ ಇವನಾರವ ನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ
ಕೂಡಲ ಸಂಗಮ ದೇವ ನಿಮ್ಮ ಮಹಾಮನೆಯ
ಮಗನೆಂದೆನಿಸಯ್ಯಾ.
ಬಸವ ಗುರುವಿನ ತತ್ವ ಲೋಕದಿ ಹಬ್ಬಲಿ
ಮನುಜ ಕಲ್ಪಿತ ಜಾತಿ ಹೆರೆತೊಲಗಿ ಹೋಗಲಿ
ವಿಶ್ವ ಮಾನವ ಪ್ರೀತಿ ಹೊನಲಾಗಿ ಹರಿಯಲಿ
ಸೃಷ್ಟಿಕರ್ತನ ಕರುಣೆ ಎಮ್ಮ ಕಾಪಾಡಲಿ
ಲಿಂಗದೇವನ ಕರುಣೆ ಎಮ್ಮಕಾಪಾಡಲಿ.
ಶ್ರೀ ಗುರು ಬಸವಂಗೆ ಶರಣಾಗಿಹೆ
ಲಿಂಗದೇವನಿಗೆ ಶರಣಾಗಿಹೆ
ಶರಣಗಣಕ್ಕೆ ಶರಣಾಗಿಹೆ
ಕರುಣ ಪ್ರಸಾದ ಸ್ವೀಕರಿಸಿಹೆ
ಗಣ ಪದವಿಯನ್ನು ನಾ ಹೊಂದಿಹೆ
ಸಾಂಬಸದಾಶಿವ ಸಾಂಬಸದಾಶಿವ (೫ ಸಲ)
ಶ್ರೀ ಗುರು ಬಸವ ಲಿಂಗಾಯ ನಮಃ (೧೬ ಸಲ)
ಓಂ ಗುರು ದೇವ ಓಂ ಗುರು ದೇವ ಓಂ ಗುರು ದೇವ ಓಂ ಸದ್ಗುರು ದೇವ || (೫ ಸಲ)
ಓಂ ಬಸವ ಓಂ ಬಸವ ಓಂ ಬಸವ ಓಂ ಗುರು ಬಸವ || (೫ ಸಲ)
ಕನಿಷ್ಟ 5 ನಿಮಿಷಗಳವರೆಗಾದರೂ ಮೌನವಾಗಿ ಮನಸ್ಸಿನಲ್ಲಿಯೇ ಧ್ಯಾನಮಾಡಿ, ಅನಂತರ ಓಂ ಶ್ರಿ ಗುರುಬಸವ ಲಿಂಗಾಯ ನಮಃ ಎಂದು ಮೃದುವಾಗಿ ನುಡಿದು ಕಣ್ಣುಗಳನ್ನು ತೆರೆಯಬೇಕು.
ಹೇ ಪರಮಾತ್ಮ ಲೋದಕ ಮಿತ್ರ
ನೀನೇ ಸರ್ವಕು ಕಾರಣ ಕರ್ತ ||ಪ||
ಜಗವನು ರಚಿಸಿದ ತಂದೆಯು ನೀನೆ
ಸೊಗದಿಂ ಪಾಲಪ ತಾಯಿಯು ನೀನೆ
ದಿರಿತ ಸಂಕುಲ ಮುಸುಕುತ ಬರಲು
ಪಾರು ಮಾಡುವ ಕರುಣಿಯು ನೀನೆ
ವಿಘ್ನ ನಿವಾರಕ ಶಕ್ತಿಯು ನೀನೆ
ಬುದ್ದಿ ಪ್ರದಾಯಕ ದೇವನು ನೀನೆ
ವಿದ್ಯಾಸಂಪದ ಶಾಂತಿ ಸೌಖ್ಯಗಳ
ಮಹಾದಾತನು ನೀನೆ
ವೇದಾಂತಿಗಳು ಪರಬ್ರಹ್ಮನೆಂಬರು
ಆಗಮಿಕರು ಪರಶಿವನೆಂಬರು
ಅಲ್ಲಹ ಯಹೋವ ಸುಪ್ರೀಮ್ ಗಾಡ್
ಲಿಂಗದೇವಾ ನಿನ್ನಯ ಹೆಸರು
ಮರೆವಿನ ತಿಮಿರದಿ ಮನವು ಮುಲುಗುತ
ಮುಂದಡಿ ಇಡದೆಯೆ ಬಳಲುತಿರೆ
ಅರಿವಿನ ಬೆಳಕನು ಪಥದಲಿಚೆಲ್ಲುತ
ಮುಂದಡಿ ಇಡಿಸುವ ಗುರು ನೀನು
ಅಂದಿನ ಅನ್ನವ ನೀಡುವ ನೀನು
ಬಂಧನ ಹರಿಸುವ ಭವಹರ ಭಾನು
ಬಾಳಲಿ ನಡೆಯಲು ಆತ್ಮ ಬಲವ
ನೀಡುವ ಮಂಗಲ ಶಕ್ತಯು ನೀನೆ
ನಿನ್ನನ್ನಲ್ಲದೆ ಯಾರನು ಬೇಡೆನು
ಬನ್ನವ ಕಳೆಯುವ ಚಿನ್ಮಯನೆ
ಎಮ್ಮಯ ಜೀವನ ಸರ್ವ ಸಂಪದದಿ
ಬೆಳಗಲು ಕರುಣಿಸು ಸಚ್ಚಿದಾನಂದ
ಶ್ರೀ ಮಹಾಕಾರಣಿಕ ಪ್ರಣವರೂಪಿ ಬಸವಗುರು
ಕಾಮಿತಾರ್ಥ ಫಲವನೀವ ದೇವಕಂದ ಬಸವಗುರು ||
ದೇವನ ಕರುಣೆ ಧರಿಸಿಕೊಂಡು ಇಳಗೆ ಬಂದು ಬಸವಗುರು
ಭವದ ತಿಮಿರ ಕಳೆಯುವಂಥ ಭಾನುವಾದೆ ಬಸವಗುರು ||
ಈರು ಆರು ನೂರುವರುಷ ನಡೆಯುತಿರಲು ಬಸವಗುರು
ಭರತಭೂಮಿಯಲ್ಲಿ ಮರೆವು ವ್ಯಾಪಿಸಿತ್ತು ಬಸವಗುರು ||
ವರ್ಣಭೇದ ವರ್ಗಭೇದ ತುಂಬಿ ತುಳುಕೆ ಬಸವಗುರು
ಪೂರ್ಣಜ್ಞಾನ ವಿರದ ಜನತೆ ಬಳಲುತಿತ್ತು ಬಸವಗುರು ||
ಪಂಕದಲ್ಲಿ ಬಿದ್ದ ಮುಗ್ದ ಪಶುವಿನಂತೆ ಬಸವಗುರು
ಶಂಕೆಯಲ್ಲಿ ಮನುಜಕುಲವು ತೊಳಲುತಿತ್ತು ಬಸವಗುರು || 10 ||
ಮರುಕದಿಂದ ಮೇಲಕ್ಕೆತ್ತಿ ಧೈರ್ಯವಿತ್ತೆ ಬಸವಗುರು
ಕರುಣಹೃದಯಿ ತ್ಯಾಗಮಯಿ ಬಿರುದ ತಾಳ್ದೆ ಬಸವಗುರು ||
ಬಾಗೇವಾಡಿ ಮಾದಿರಾಜ ಮುದ್ದು ತನುಜ ಬಸವಗುರು
ಅಗ್ರಪುರುಷ ಶರಣಶ್ರೇಷ್ಟ ಅಂಘ್ರಿಪರುಷ ಬಸವಗುರು ||
ತಾಯಿ ಮಾದಲಾಂಬೆಯುದರದಲದಲ್ಲಿ ಬಂದೆ ಬಸವಗುರು
ತಾಯಿ ತಂದೆ ದೇವನೆಂದು ಅವನಿಗೊಲಿದೆ ಬಸವಗುರು ||
ವೇದಶಾಸ್ರ್ತ ಪುರಾಣಗಳ ಒರೆಗೆ ಇಕ್ಕಿ ಬಸವಗುರು
ಸ್ವಾದಸಹಿತ ವಚನ ಸುಧೆಯ ಜಗಕೆ ಇತ್ತೆ ಬಸವಗುರು ||
ಕೊರಳಬಳಸಿ ಇದ್ದ ಜಾತಿಪಾಶ ಕಿತ್ತೆ ಬಸವಗುರು
ಅರಿವಿನಿಂದ ಬೆರೆದ ಧೀರನಿಲುವ ತಳೆದ ಬಸವಗುರು || 20 ||
ಗಾಂಪನಂತೆ ಮೂಢತನದ ಬಲೆಗೆ ಸಿಗದೆ ಬಸವಗುರು
ಸಂಪ್ರದಾಯಕ್ಕಿಂತ ಸತ್ಯ ಶ್ರೇಷ್ಟವೆಂದೆ ಬಸವಗುರು ||
ಹೆತ್ತ ತಾಯಿ ತಂದೆಯರನು ತೊರೆದೆ ನೀನು ಬಸವಗುರು
ಸ್ತುತ್ಯ ಮಾರ್ಗ ಹಿಡಿದು ವಿಶ್ವಜ್ಯೋತಿಯಾದೆ ಬಸವಗುರು ||
ಕೂಡಲದಾ ಕ್ಷೇತ್ರದಲ್ಲಿ ತಪವಗೈದೆ ಬಸವಗುರು
ಹಾಡಿ ಮೆರೆದೆ ದೇವನ ಕರುಣೆಧರಿಸಿಕೊಂಡು ಬಸವಗುರು ||
ಜಗದ ಗುರುಗಳಾರು ನಿನಗೆ ಗುರುಗಳಲ್ಲ ಬಸವಗುರು
ಜಗದ ಒಡೆಯ ಲಿಂಗದೇವನ ಕರುಣೆ ಪಡೆದೆ ಬಸವಗುರು ||
ದೇವನಾಜ್ಞೆ ಹೊತ್ತು ಕಲ್ಯಾಣವ ಸೇರ್ದೆ ಬಸವಗುರು
ಪಾವನಿಸಿದೆ ಪಾದವಿಟ್ಟು ಪುಣ್ಯ ಪುರುಷ ಬಸವಗುರು || 30 ||
ಮಂಗಳಾತ್ಮೆ ನೀಲಗಂಗ ಮಡದಿಯಾಗೆ ಬಸವಗುರು
ಲಿಂಗಪಥದ ಕಾರ್ಯದಲ್ಲಿ ವ್ರತವತೊಟ್ಟೆ ಬಸವಗುರು ||
ಜ್ಙಾನನಿಧಿ ಸತಿರತ್ನವ ಕೈಯ ಪಿಡಿದು ಬಸವಗುರು
ಸನ್ನುತಾಂಗ ಶರಣನಾಗಿ ದೇವನ ನೆರೆದೆ ಬಸವಗುರು ||
ಸತಿಯ ಹಿಡಿದು ಬ್ರಹ್ಮಚರ್ಯ ವ್ರತವತೊಟ್ಟೆ ಬಸವಗುರು
ಸತಿಯಳನ್ನೆ ತಾಯಿಯೆಂದ ನಿಜವಿರಕ್ತ ಬಸವಗುರು ||
ಆತ್ಮಲೇಸು ಜಗದ ಲೇಸು ಮುಖ್ಯವೆಂದ ಬಸವಗುರು
ಆತ್ಮದರಿವು ಮೂಡದವನು ವ್ಯರ್ಥವೆಂದೆ ಬಸವಗುರು ||
ಮತ್ರ್ಯದೊಳಗೆ ಮಹಾಮನೆಯ ಕಟ್ಟಿಮೆರೆದೆ ಬಸವಗುರು
ಸತ್ಯಶೀಲರನ್ನು ನಿನ್ನ ಬಳಿಗೆ ಸೆಳೆದೆ ಬಸವಗುರು || 40 ||
ಅನುಭವದಾ ಮಂಟಪವನು ರಚಿಸಿ ನೀನುಬಸವಗುರು
ಅನುಭವವೇ ದೇವನೊಲಿಪ ಮಾರ್ಗವೆಂದ ಬಸವಗುರು ||
ಜನ್ಮದಿಂದ ಯಾರು ಶ್ರೇಷ್ಟರಲ್ಲವೆಂದೆ ಬಸವಗುರು
ಮಾನ್ಯತೆಯು ಜ್ನಾನದಿಂದ ಎಂದು ಸಾರಿ ಬಸವಗುರು ||
ಅಪ್ಪಬೊಪ್ಪ ಎಂದು ಕರೆದೆ ಅಂತ್ಯಜರನು ಬಸವಗುರು
ಒಪ್ಪವಾದ ಬಾಳನಿತ್ತು ರೂಪವಿತ್ತೆ ಬಸವಗುರು ||
ನಿರಾಕಾರದೆವನನ್ನು ಅರಿಯಿರೆಂದು ಬಸವಗುರು
ಅರುಹ ತೋರ್ವ ಕುರುಹುವನ್ನು ಕರಕೆ ಇತ್ತೆ ಬಸವಗುರು ||
ವಚನಶಾಸ್ತ್ರ ಸುಧೆಯನಿತ್ತ ಯುಗಪುರುಷ ಬಸವಗುರು
ಶುಚಿತ್ವದ ನವಪಥವನು ರಚಿಸಿ ಕೊಟ್ಟ ಬಸವಗುರು || 50 ||
ಶುದ್ದಿ ಬೇರೆ ಶಿಚಿಯು ಬೇರೆ ಎಂದುಸಾರಿ ಬಸವಗುರು
ಶುದ್ದಗೈದೆ ಪತಿತ ಕುಲವ ದೀಕ್ಷೆ ನೀಡಿ ಬಸವಗುರು ||
ದಯವ ತೊರೆದರದು ಧರ್ಮವಾಗದೆಂದೆ ಬಸವಗುರು
ನ್ಯಾಯನಿಷ್ಟೆ ಎರಡು ದೇವನ ನಯನವೆಂದೆ ಬಸವಗುರು ||
ದೇವನೊಬ್ಬ ನಾಮ ಹಲವು ಇದುವು ಸತ್ಯ ಬಸವಗುರು
ಭಾವಶುದ್ದಿಯಿಂದ ಬೇರೆ ಮುಕ್ತಿಯಿಲ್ಲ ಬಸವಗುರು ||
ಕಾಯಕದಾ ಮಾಟದಲ್ಲಿ ಕೂಟ ಕಂಡ ಬಸವಗುರು
ಕಾಯಕವೇ ಕೈಲಾಸ ಸೂತ್ರವಿತ್ತ ಬಸವಗುರು ||
ಮನುಜರಲ್ಲಿ ಜಾತಿಭೇದ ಸಲ್ಲದೆನುತ ಬಸವಗುರು
ಮಾನವೀಯ ಪ್ರೇಮ ತೋರ್ದ ಶಿವಾಚಾರಿ ಬಸವಗುರು || 60 ||
ರೂಢಿಯೊಳಗೆ ಮೂಢತನವು ಕಾಡುತಿರಲು ಬಸವಗುರು
ಧೃಡತೆಯಿಂದ ಹಿಡಿದೆ ಗಣಾಚಾರದಲಗ ಬಸವಗುರು ||
ತಾನು ಭಕ್ತ ಲೋಕವೆಲ್ಲ ದೇವನೆಂದ ಬಸವಗುರು
ತಾನು ಉರಿದು ಬೆಳಕನಿತ್ತ ತ್ಯಾಗದೀಪ್ತಿ ಬಸವಗುರು ||
ಕಲ್ಯಾಣದ ಬಿಜ್ಜರಸನ ಮಂತ್ರಿಯಾದೆ ಬಸವಗುರು
ಚೆಲ್ಲವರಿದೆ ಪವಾಡಗಳ ಜಗದ ಹಿತಕೆ ಬಸವಗುರು ||
ಪ್ರಥಮ ಗುರುವೆ ಪ್ರಮಥ ಗುರುವೆ ಆದಿಗುರು ಬಸವಗುರು
ಮಥನಗೈದು ಲಿಂಗಾಯತ ಧರ್ಮ ಕೊಟ್ಟ ಬಸವಗುರು ||
ಸದ್ಗುರುವೆ ಮಹಾಗುರುವೇ ದೇವಗುರು ಬಸವಗುರು
ಚಿದ್ಗುರುವೆ ಜಗದ್ಗುರುವೆ ಪ್ರಾಣದೊಡೆಯ ಬಸವಗುರು || 70 |
ಎಮ್ಮಗಳನು ಸಲುಹಲಿಕ್ಕೆ ಮಣಿಹ ಹೊತ್ತೆ ಬಸವಗುರು
ಗಮ್ಯನಯ್ಯ ನೀನು ಭಕುತಿ ಅಸ್ತ್ರವಿರಲು ಬಸವಗುರು ||
ಲಕ್ಷಯೋನಿಯೊಳಗೆ ನಾನು ತಿರುಗಿ ಬಂದೆ ಬಸವಗುರು
ರಕ್ಷಿಸಯ್ಯ ಜೀಯ ಎಂದು ಪಾದಹಿಡಿದೆ ಬಸವಗುರು ||
ಮರಳಿ ಮರಳಿ ಬರಲು ಅರೆ ಮರೆವಿನಲ್ಲಿ ಬಸವಗುರು
ಕರುಣೆ ತೋರಿ ಬೆಳಕನಿತ್ತು ಮುಂದೆ ನಡೆಸು ಬಸವಗುರು ||
ಸಕಲಶಕ್ತಿ ನೀನೆ ಎಂದು ಪಾದಕ್ಕೊಲಿದೆ ಬಸವಗುರು
ಕಾಕು ಗುಣದ ಕೊಳೆಯ ಕಳೆದು ಶೋಕಹರಿಸು ಬಸವಗುರು ||
ಹೃದಯ ಬಟ್ಟಲಲ್ಲಿ ಭಕ್ತಿರಸವ ತುಂಬು ಬಸವಗುರು
ಸ್ವಾದ ಸವಿಯಲಿಕ್ಕೆ ಒಡೆಯ ನೀನು ಬಾರೋಬಸವಗುರು ||80 ||
ಬೆಳೆವ ಹೃದಯದೊಳಗೆ ಇರುವ ಕಳೆಯತೆಗೆಯೋ ಬಸವಗುರು
ಸುಳಿಯರಳಿಸಿ ಬೆಳೆಸುತದನು ಫಲವ ಕೋಡಿಸೊಬಸವಗುರು ||
ಮನದ ಮಲೀನ ಪಾತ್ರೆಯನ್ನು ತೊಳೆಯೋ ನೀನುಬಸವಗುರು
ಊನವಿಲ್ಲದಮಲ ಕರುಣೆ ಪೂರಯಿಸೋ ಬಸವಗುರು ||
ಅತ್ತಲಿತ್ತ ಹರಿಯದಂಥ ಚಿತ್ತ ನೀಡೋ ಬಸವಗುರು
ಮುತ್ತಿನಂಥ ಮನವನಿತ್ತು ಎತ್ತಿಕೊಳ್ಳೊ ಬಸವಗುರು ||
ಗುರುವು ನೀನು ನರನು ನಾನು ದೇವನ ತೋರೊ ಬಸವಗುರು
ಪರಮ ಪುಣ್ಯ ಪುರುಷನೀನು ದಿವ್ಯಯೋಗಿ ಬಸವಗುರು ||
ಎನ್ನ ಕರ್ಣದಲ್ಲಿ ತುಂಬು ನಿನ್ನ ನಾಮ ಬಸವಗುರು
ಮುನ್ನ ತೊಡೆಯುತೆನ್ನ ತಪ್ಪ ಚಿನ್ನ ಮಾಡೊ ಬಸವಗುರು||90 ||
ನಿನ್ನ ಕರುಣೆಯನ್ನು ಇತ್ತು ಎನ್ನ ಕಾಯೊ ಬಸವಗುರು
ಅನತವಾಗದಂಥ ಹಮ್ಮು ಈಯದಿರೋ ಬಸವಗುರು ||
ನಿನ್ನ ನಾಮ ಪಠಿಸುತಿರಲು ಭವವು ಎಲ್ಲಿ ಬಸವಗುರು
ಬನ್ನ ಓಡಿ ಭಕ್ತಿ ತುಂಬಿ ದಿವ್ಯವೆಲ್ಲ ಬಸವಗುರು ||
ವಿಳಾಸವಾದೆ ಸರುವವ್ಯಾಪಿ ಪರಮನಿಗೆ ಬಸವಗುರು
ಕಳುಹೆ ನಿನಗೆ ಬಿನ್ನಹವನು ದೇವನೊಲಿವ ಬಸವಗುರು ||
ಆರು ಹಂತವೇರಿ ನೀನು ಐಕ್ಯನಾದೆ ಬಸವಗುರು
ಧಾರುಣಿಯನು ಸಲುಹಲಿಕ್ಕೆ ಭಕ್ತನಾದೆ ಬಸವಗುರು ||
ಪಂಚಪರುಷ ಸಿದ್ದಿ ಪಡೆದ ಸಾರ್ವಭೌಮ ಬಸವಗುರು
ಮಿಂಚುತಿರುವೆ ಬೆಳಕಾಗಿ ಎಮ್ಮ ಮನದಿ ಬಸವಗುರು || 100 ||
ಮಂತ್ರ ಪುರುಷ ತಂತ್ರಸಾರ ಭ್ರಾಂತಿದೂರ ಬಸವಗುರು
ಮಂಥುವನ್ನು ಹರಿವ ಪ್ರಣವ ಶಕ್ತಿ ನೀನು ಬಸವಗುರು ||
ನಿತ್ಯವಾದ ವಿಶ್ವಧರ್ಮ ಲೋಕಕಿತ್ತೆ ಬಸವಗುರು
ಸತ್ತುಚಿತಾನಂದ ಪ್ರಿಯೆ ಮಾತೆಗೊಲಿದೆ ಬಸವಗುರು ||
ಬಸವ ಅರಸ ಬಸವ ಲಿಂಗ ಬಸವ ಪ್ರಭುವೆ ಪಾಹಿಮಾಂ
ಬಸವ ತಂದೆ ಬಸವ ಬಂಧು ಬಸವಗುರುವೆ ರಕ್ಷಮಾಂ ||
ಬಸವಗುರುವೆ ಬಸವಗುರುವೆ ಬಸವಗುರುವೆ ಪಾಹಿಮಾಂ
ಬಸವಗುರುವೆ ಬಸವಗುರುವೆ ಬಸವಗುರುವೆ ರಕ್ಷಮಾ || 108 ||
ಬಸವನಾಮಾಮೃತವು ನಿತ್ಯದಿ
ವೊಸೆದು ನಾಲಿಗೆ ಮೇಲೆ ನೆಲೆಸಿರೆ
ಯಶದಿ ಹರಿವವು ಕರ್ಮಬಂಧನ ಭೀತಿ ಮೃತ್ಯುಗಳು |
ನಾಶವಪ್ಪನು ಭವದ ಶತ್ರುವು
ಈಶನೊಲಿಮೆಯು ಹರಿದು ಬಪ್ಪುದು
ಶಾಶ್ವತದ ಸುಖ ಸಿದ್ದಿಯಹುದೈ ಬಸವನೆಂದೆನಲು ||
ಓಂ ಗುರು ಬಸವ ಪ್ರಭು ವರಗುರು ಶರಣವಿಭು
ಆಶ್ರಿತಜನ ಸಂರಕ್ಷಕ ಸದ್ಗುರು ಬಸವ ಪ್ರಭು
ವರಗುರುಶರಣವಿಭು || ಪ ||
ಶರಣಲೋಲನು ನೀ ಪರಮ ಪುರುಷನು ನೀ
ಕರುಣಾ ಸಿಂಧು ನೀ ದೀನರ ಬಂಧು ನೀ ||
ಸುಭಗ ಗಾತ್ರನು ನೀ ಪ್ರೇಮನೇತ್ರನು ನೀ
ಪರಮಚರಿತನು ನೀ ಜ್ಞಾನ ಭರಿತನು ನೀ || || 1 ||
ಭವಭಯ ತಾರಕನೆ ನವಪಥದಾಯಕನೆ
ಹರಗಣತಾರೆಗಳಾ ನಡುವಿನ ಚಂದಿರನೆ ||
ಮಾತಾಪಿತನು ನೀ ಬಂಧು ಬಳಗವು ನೀ
ಭಕ್ತಜನ ಮನೋರಾಜಿತ ಮಂತ್ರ ಪುರುಷನು ನೀ || 2 ||
ಮೋಹರಹಿತನು ನೀ ಮಮತಾಸಹಿತನು ನೀ
ಮಯಾದೂರಕ ನೀ ಮುಕುತಿಯದಾಯಕ ನೀ ||
ಮನುಕುಲ ಜ್ಯೋತಿಯು ನೀ ಕ್ರಾಂತಿಯ ವೀರನು ನೀ
ಶಾಂತಿಹೊನಲನು ಹರಿಸಲು ಬಂದ ಸಚ್ಚಿದಾನಂದ ಸುತ ನೀ||3 ||
ಜಯಬಸವರಾಜ ಭಕ್ತಜನ ಸುರಭೊಜ
ಜಯತು ಮಹಾಕಾರಣಿಕ ಲಿಂಗದೇವನ ಘನತೇಜ
ಜಯತು ಕರುಣಾಸಿಂಧು ಭಜಕ ಜನ ಬಂಧು
ಜಯ ಇಷ್ಟದಾಯಕ ರಕ್ಷಿಸು ಶ್ರೀ ಗುರು ಬಸವ
ರಕ್ಷಿಸು ಶ್ರೀ ಗುರು ಬಸವ ರಕ್ಷಿಸು ಶ್ರೀ ಗುರು ಬಸವ
ಜಯಗುರು ಬಸವೇಶ ಹರಹರಮಹಾದೇವ
ವಿಶ್ವಗುರು ಬಸವೇಶ್ವರ ಮಹಾತ್ಮಾಕಿ ಜೈ.
ಸಕಲ ಶರಣ ಸಂತನಕಿ ಜೈ.
ದೇವ ಸ್ತುತಿ
ಕರುನಾಳು ಹೃತ್ಕಮಲವಾಸ ಹೇ ಜಗದೀಶ ಹೇ ಜಗದೀಶ
ಪೊರೆಯೋ ದುರಿತವಿದೂರ ಸಚ್ಚಿದಾನಂದ ಸಚ್ಚಿದಾನಂದ ||
ಭವತಾಪದೊಳಗೆ ಬೆಂದುನೊಂದೆನು ನಾನು
ಭವಹರನೇ ಪಿಡಿದೆತ್ತಿ ಪಾಲಿಸೆನ್ನನು ನೀನು || 1 ||
ಕಾಮಕ್ರೋಧಗಳನ್ನು ಒಡಲಿಂದ ತೊಲಗಿಸು
ಸುಮನ ಸದ್ಗುಣಗಳ ಭರದಿಂದ ಕರುಣಿಸು || 2 ||
ತಂದೆಯು ನೀನೆ ತಾಯಿಯು ನೀನೆ
ಬಂಧುವು ಬಳಗವು ಭಾಗ್ಯವು ನೀನೆ || 3 ||
ಪರಮಾತ್ಮ ನೀನು ಜೀವಾತ್ಮ ನಾನು
ಹರನೇ ನಿನ್ನೊಲುಮೆ ಮಮ ಬಾಳ ಬಲುಮೆ || 4 ||
ತನು ಮನ ಧನವು ತವ ಪಾದಕ್ಕನುವು
ಎನಗೆ ನೀಡಭವಾ ಕರುಣೆಯ ಬಲವಾ || 5 ||
ಹೃದಯ ಮಂದಿರವು ಆಗಿಹುದು ತೆರವು
ಮುದದಿ ಪೂರಯಿಸೊ ದೇವಾ ನಿನ್ನೊಲವ || 6 ||
ಚಿನುಮಯ ಗುರುವೆ ಜಗವ ತುಂಬಿರುವೆ
ನೆನೆಸಿದಲ್ಲರುವೆ ಸಚ್ಚಿದಾನಂದ ಪ್ರಭುವೆ || 7 ||
ದೇವನ ಚಿಂತೆ
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಬುವ ಚಿಂತೆ
ಎನಗೆ ನಮ್ಮ ಕೂಡಲಸಂಗನ ನೆನೆವುದೆ ಚಿಂತೆ
ಪಾದಕಮಲದ ತುಂಬಿ
ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಮನದಲದಲ್ಲಿ ನಿಮ್ಮ ನೆನಹು ತುಂಬಿ
ಕೂಡಲಸಂಗಮದೇವಾ ನಿಮ್ಮ
ಚರಣಕಮಲದೊಳಾನು ತುಂಬಿ.
ಲಿಂಗಪೂಜೆ | ಬಿಡು ಬಾಹ್ಯದೊಳು ಡಂಭವ |