Previous ಮಾತಾಡು ಮಾತನಾಡೋ ಲಿಂಗಯ್ಯ ಭಾವಲಿಂಗದ ನಿಜವನ್ನು Next

ಕರದೊಳಗೆ ಕಾಣಿಪುದು ಪರವಸ್ತುವಿದನರಿಯ

- ✍ ಸರ್ಪಭೂಷಣ ಶಿವಯೋಗಿಗಳು.

ಇಷ್ಟಲಿಂಗ ಪೂಜೆ

ಕರದೊಳಗೆ ಕಾಣಿಪುದು ಪರವಸ್ತುವಿದನರಿಯ
ದರೆ ಮರುಳರೊಲರಸಿ ತೊಳಲಿ ಬಳಲುವರು. || ಪ ||

ಗೋವಿನೊಳಗಿಹ ಘೃತವು ಗೋವಿನಂಗದ ರುಜೆಯ
ಗೋವಿನಿಂ ಪೊರಮಟ್ಟು ಕೆಡಿಸುವಂತೆ
ಜೀವಭಾವವ ಕಳೆಯಲಾ ವಿಮಲಚಿದ್ಬಿಂದು
ಪಾವರಿಸಿ ಪೊರಗಿಷ್ಟಲಿಂಗ ತಾನಾಗಿ || ೧ ||

ಕಾಷ್ಠದೊಡಲಿನ ಶಿಖಿಯು ಕಾಷ್ಠದಿಂದುಜ್ವಲಿಸಿ
ಕಾಷ್ಠವನೆ ಸುಟ್ಟು ತಾ ಬೆಳಗುವಂತೆ |
ಶ್ರೇಷ್ಠ ಚಿತ್ಕಳೆಯು ಪೊರಮಟ್ಟು ಜಡಭಾವವನು
ನಿಟ್ಟುರಿಸಲದು ಪ್ರಾಣಲಿಂಗ ತಾನಾಗಿ || ೨ ||

ಮನೆಯ ಸೊಡರಿನ ಬೆಳಗು ಮನೆಯ ಬಾಗಿಲೊಳೈದಿ
ಮನೆಯಂಗಣದ ಮರ್ಬ ನೂಂಕುವಂತೆ |
ತನುತಮವ ಕಳೆಯಲ್ಕೆ ಚಿನ್ನಾದ ಮುಚ್ಚಳಿಸು
ತನುಪಮಾದ್ವಯ ಭಾವಲಿಂಗ ತಾನಾಗಿ || ೩ ||

ಮುಂದೆ ಬಡಿಸಿರ್ದೆಡೆಯನುಳಿದು ಭಿಕ್ಷುಕ ಮನೆಗ
ಳೊಂದು ನೂರಾರ್ವೊಕ್ಕು ಬಳಲ್ವನಂತೆ |
ಸಂದೇಹವೇಕೆ ? ಗೋಮುಖ ಗೋಳಕವು ಪೀಠ
ವೆಂದು ಕಳೆ ನಾದ ಬಿಂದುವೆ ರೂಪಧರಿಸಿ || ೪ ||

ಲಿಂಗಪೀಠಮದಿಷ್ಟ ಗೋಮುಖವೆನಲು ಪ್ರಾಣ |
ಲಿಂಗಗೋಳವದುವೆ ಭಾವಲಿಂಗ
ಲಿಂಗಮಿವ ಮೂರ ಕರ ಮನ ಭಾವದೊಳಗಿರಿಸಿ
ತುಂಗ ಗುರುಸಿದ್ಧ ವಿವರಿಸಿಕೊಟ್ಟ ನಿಜವೆ || ೫ ||

ಪರಿವಿಡಿ (index)
Previous ಮಾತಾಡು ಮಾತನಾಡೋ ಲಿಂಗಯ್ಯ ಭಾವಲಿಂಗದ ನಿಜವನ್ನು Next