Previous ಬಸವಣ್ಣ ಸ್ವರ ವಚನಗಳು ಧರ್ಮಗುರು ವಂದನ ಗೀತೆಗಳು Next

ಧ್ವಜವಂದನ ಗೀತೆಗಳು

*

ಸಂಕಲ್ಪ ಗೀತೆ

ಕರ್ತನ ಸೃಷ್ಟಿಯೊಳ್ ಹುಟ್ಟಿಹ ನಾನು
ಕರ್ತಗೆ ನಿಷ್ಠೆಯಿಂ ವಂದಿಪೆನು |ಪ|

ಬಸವನ ಸ್ಮರಿಸಿ ಲೋಕದ ಲೇಸಿಗೆ
ಪೈಜೆಯ ತೊಟ್ಟು ದುಡಿಯುವೆನು |ಅ.ಪ|

ಭಕ್ತಿಯ ಜಲದೊಳು ಮೈ ತೊಳೆಯುವೆನು
ಜ್ಞಾನದ ವಸ್ತವ ಧರಿಸುವೆನು
ದೀನ ದಲಿತರ ಸೇವೆಯ ಗೈಯಲು
ಗಂಧದ ಬಾಳನು ಸವೆಸುವೆನು |1|

ಮಾನವರೆಲ್ಲರೂ ದೇವನ ಮಕ್ಕಳು
ಎನ್ನುತ ಧ್ವಜವನ್ನು ಹಾರಿಪೆನು
ಗುರು ಬಸವಣ್ಣನ ವಚನದ ಸೌರಭ
ಹರಡಲು ಕಂಕಣ ಕಟ್ಟುವೆನು |2|

ಧರ್ಮದ ಕವಚವ ಧರಿಸುವೆನು
ತತ್ವದ ಖಡ್ಗವ ಹಿಡಿಯುವೆನು
ಕರ್ತನ ಕಮಟವಾದೀ ಜಗದೊಳು
ಕಲ್ಯಾಣ ರಾಜ್ಯವ ಕಟ್ಟುವೆನು |3|

ಧ್ವಜ ಗೀತೆ

ಹೇ ಶರಣ ಬಂಧುಗಳೇ, ಬಸವ ಧ್ವಜವು ಹಾರುತಿದೆ
ಶಾಂತಿ ಧ್ವನಿ ಮೊಳಗುತಿದೆ ; ಬನ್ನಿ ಬನ್ನಿ ಬನ್ನಿರೆಲ್ಲ ಭೇದ ಭಾವ ತೊಡೆದೀಗ |ಪ|

ಜಾತೀಯತೆಯ ತಿಮಿರ ತೊಡೆದು ಧಾರ್ಮಿಕತೆಯ ತತ್ವ ಹಿಡಿದು
ಬಸವ ಪತಾಕೆಯ ತತ್ವದೊಡನೆ ಮೆರೆಸುತ
ಧರ್ಮವೆಮದು ಸದ್ಧರ್ಮ ಧರ್ಮವೆಮದು ಮಾನವ ಧರ್ಮ
ಧರ್ಮವೆಮದು ರಾಷ್ಟ್ರ ಧರ್ಮ ಧರ್ಮವೆಮದು ವಿಶ್ವಧರ್ಮ |1|

ಬಸವಾದಿ ಪ್ರಮಥರ ದಿವ್ಯ ಪರಂಪರೆಯವರು
ಮನುಕುಲದ ಸ್ವಾತಂತ್ರ ಕೆ ದುಡಿವೆವೆಂಬ ಛಲದವರು
ಎಮ್ಮ ಬಾಳ ಕಣಕಣವು ಬಸವ ಪಾದಕರ್ಪಣ
ಎಮ್ಮ ಚೆನ್ನ ತನುಮನವು ನಾಡ ಗುಡಿಗೆ ತರ್ಪಣ |2|

ಜಾತಿ ಮತ ಪಂಥಗಳ ಕೀಳು ಭಾವ ಅಳಿಸುವಾ
ಭಿನ್ನ ಭೇದ ಮರೆತು ಬಾಳ್ವ ಪ್ರೇಮ ಭಾವ ಬೆಳೆಸುವಾ
ಶಾಂತಿ ಸ್ನೇಹ ಪ್ರೇಮ ಸಮತೆ ಅಂಗವಿಸಿ ಬಾಳುವಾ
ಬಸವ ಧರ್ಮ ಪ್ರಣತೆಯುರಿಗೆ ಬಾಳ ತೈಲ ಎರೆಯುವಾ |3|

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

*
ಪರಿವಿಡಿ (index)
Previous ಬಸವಣ್ಣ ಸ್ವರ ವಚನಗಳು ಧರ್ಮಗುರು ವಂದನ ಗೀತೆಗಳು Next