Previous ಬಸವ ಬಸವಾ ಎಂದು ಭಸಿತಮಂ ಧರಿಸಿದರೆ ಜ್ಯೋತಿ ಬೆಳುಗುತಿದೆ Next

ನೆನಹು, ಸಾಯಂಕಾಲದ ಚುಟುಕು ಪ್ರಾರ್ಥನೆ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ನೆನಹು - ಬಸವ ಸ್ಮರಣೆ (ಲಿಂಗಾಯತ ಪ್ರಾರ್ಥನೆ ),

ಪೀಠಿಕೆ

ಅಂತ‌ಃ ಪ್ರೇರಣೆಯೋ? ಬಸವಾದೇಶವೋ? ಕಾರ್ಯಕ್ರಮಗಳಿದ್ದ ಕಾರಣ ದಿ. 26-6-1995 ರಿಂದ 30-6-1995ರ ವರೆಗೆ ಹುಬ್ಬಳ್ಳಿ -ಧಾರವಾಡಗಳಲ್ಲಿದ್ದೆ. ಅಕ್ಕಮಹಾದೇವಿ ಆಶ್ರಮದಲ್ಲಿ ಇರುವಾಗ ಒಂದು ದಿನ ರಾತ್ರಿ (28.6.1995) ನಿದ್ರೆಯಲ್ಲಿರುವಾಗಲೇ ಒಂದು ಆದೇಶವಾಯಿತು. ಅದೆಂದರೆ ಸಂಜೆ 7.00 ಗಂಟೆಗೆ ಸರಿಯಾಗಿ ಏಕೆ ಬಸವ ಭಕ್ತರೆಲ್ಲರೂ ಒಂದು ಸಂಕ್ಷಿಪ್ತ ಪ್ರಾರ್ಥನೆ ಮಾಡಬಾರದು? ಎಂಬುದು. ಯಾರಾರು ಎಲ್ಲೆಲ್ಲೇ ಇರಲಿ ಅಲ್ಲಿ ಸರಿಯಾಗಿ 7.00 ಗಂಟೆಗೆ ಈ ಪ್ರಾರ್ಥನೆ ಮಾಡಬೇಕು.

ಈ ಆಚರಣೆಯ ಆದೇಶ ದೊರೆಯುತ್ತಲೇ ಅನೇಕ ಶರಣರ ಬಳಿ ಪ್ರಸ್ತಾಪಿಸಿದೆ, ಚರ್ಚಿಸಿದೆ. ಪೂಜ್ಯ ಗುರುಗಳು ಪ್ರವಚನ ಮಾಡುತ್ತಿದ್ದ ಹಿರಿಯೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದಿ.1-7-1995 ರಂದು ಹೋಗಬೇಕಿತ್ತು. ಆಗ ಪೂಜ್ಯ ಅಪ್ಪಾಜಿಯವರೊಡನೆ ಚರ್ಚಿಸಿ, ಬಸವ ಧರ್ಮದ ಪರಮೋಚ್ಚ ಪೀಠಾಧೀಶರಾದ ಅವರ ಅನುಮತಿ ಪಡೆದು ಬಸವ ಪಂಚಮಿ ದಿ. 1-8-1995ರಿಂದ ಎಲ್ಲರೂ ಎಲ್ಲ ಕಡೆಯಲ್ಲಿ ಆಚರಣೆಗೆ ತರಲು ಸೂಚನಾ ಪತ್ರ ಕಳಿಸಬೇಕೆಂದು ಆಲೋಚಿಸಿದೆ. ಆ ಆಲೋಚನೆ ಪೂರ್ಣಗೊಳ್ಳುವ ಮುನ್ನವೇ ಪೂಜ್ಯರು ದಿ. 30-6-1995 ರಂದು ಮೃಣ್ಮಯ ಶರೀರವನ್ನು ವಿಸರ್ಜಿಸಿ ಲಿಂಗೈಕ್ಯರಾದರು. ಆದ್ದರಿಂದ ಪೂಜ್ಯರ ಪಾರ್ಥಿವ ಶರೀರಕ್ಕೆ ಅಂತಿಮ ಸಂಸ್ಕಾರ ಮಾಡುವ ಮುನ್ನ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಈ ವಿಷಯವನ್ನು ಘೋಷಿಸಿದ್ದೇನೆ ಮತ್ತು ದಿ. 2-7-1995 ರಂದು ಸಂಜೆ 7.00 ಗಂಟೆಗೆ ಪ್ರಥಮ ಪ್ರಾರ್ಥನೆ ಆರಂಭಿಸಿ ನಿತ್ಯವೂ ನಡೆಸಿಕೊಂಡು ಬರಲಾಗುತ್ತಿದೆ.

ನೆನಹು ಎಂಬ ಸೂಕ್ತಹೆಸರು

ಸಂಜೆಯ ಸಮಯದಲ್ಲಿ ಮಾಡುವ ಈ ಗುರು ಬಸವ – ಲಿಂಗದೇವ ಸ್ಮರಣೆಗೆ ಏನು ಹೆಸರನ್ನಿಡೋಣ ಎಂದು ಆಲೋಚಿಸುವಾಗಲೇ ಧರ್ಮಪಿತರ ಈ ವಚನ ತಟ್ಟನೆ ನೆನಪಿಗೆ ಬಂದಿತು.

ಎನಗೆ ನಿಮ್ಮನೆನಹಾದಾಗಲೇ ಉದಯ
ಎನಗೆ ನಿಮ್ಮ ಮರಹಾದಾಗಲೇ ಅಸ್ತಮಾನ
ಎನಗೆ ನಿಮ್ಮನೆನಹವೇ ಜೀವನ
ಎನಗೆ ನಿಮ್ಮನೆನಹವೇ ಪ್ರಾಣ, ಕಾಣಾ ತಂದೆ!
ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆಯನೊತ್ತಯ್ಯ
ವದನದಲ್ಲಿ ಷಡಕ್ಷರಿಯ ಬರೆಯಯ್ಯ, ಕೂಡಲಸಂಗಮದೇವ.

ಆದ್ದರಿಂದ ನೆನಹು ಎಂದು ಇಡಲಾಗಿದೆ. ಇದರಲ್ಲಿ ಸೃಷ್ಟಿಕರ್ತನ ನೆನಹು ಮತ್ತು ಆ ಸೃಷ್ಟಿಕರ್ತ ಲಿಂಗದೇವನನ್ನು ತೋರಿಸಿಕೊಟ್ಟ ಧರ್ಮಗುರುವಿನ ನೆನಹು ಇದೆ.

ಈ ನೆನಹುವಿನಲ್ಲಿ 3 ಭಾಗವಿದೆ. 1. ದೇವ ಸ್ಮರಣೆ - ಗುರು ಸ್ಮರಣೆ, 2.ದೇವಸ್ತುತಿ, ಸಂಕಲ್ಪ 3. ಷಟ್‌ಸೂತ್ರ ಘೋಷಣೆ - ಉಗ್ರಡಣೆ, ಎಲ್ಲ ಸೇರಿ 10 ರಿಂದ 15 ನಿಮಿಷದ ಅವಧಿ ಹಿಡಿಯುವುದು. ಒಬ್ಬರು ಹೇಳಿಸಿ ಇನ್ನಿತರರು ಪುನರುಚ್ಚರಿಸಿದರೆ 20 ರಿಂದ 30 ನಿಮಿಷಮಾತ್ರ.

ಏನುಮಾಡಬೇಕು?

ಅವಕಾಶವಿದ್ದರೆ 5 ನಿಮಿಷ ಮೊದಲಿಗೆ ಕೈ ಕಾಲು ಮುಖಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ಭಸ್ಮವನ್ನು ಧರಿಸಿಕೊಳ್ಳಬೇಕು. ಇದಕ್ಕೆ ಅವಕಾಶವಿಲ್ಲದಿದ್ದರೆ ಹಾಗೆಯೇ ಭಸ್ಮಧರಿಸಿಕೊಳ್ಳಬೇಕು. ಮನೆಯಲ್ಲಾದರೆ ಎಲ್ಲರೂ ಒಂದು ಕಡೆ, ಶ್ರೀ ಗುರು ಬಸವಣ್ಣನವರ ಭಾವಚಿತ್ರವನ್ನು ಇಟ್ಟಿರುವ ಸ್ಥಳದಲ್ಲಿ ಪಡಸಾಲೆಯಲ್ಲಿ ಸಮಾವೇಶವಾಗಬೇಕು. ಸ್ವಂತ ವಾಹನಗಳಲ್ಲಿ ಚಲಿಸುತ್ತಿದ್ದರೆ ಅದನ್ನು ನಿಲ್ಲಿಸಿ ಪ್ರಾರ್ಥನೆಗೆ ಅಣಿಯಾಗಬೇಕು. ಶರಣರು, ಲಿಂಗಾಯತರೇ ವಾಹನ ತೆಗೆದುಕೊಂಡು ಪ್ರವಾಸ ಹೋಗುತ್ತಿದ್ದಾಗ ಅದನ್ನು ನಿಲ್ಲಿಸಿ ಪ್ರಾರ್ಥನೆ ಮಾಡಬೇಕು. ಸಾರ್ವಜನಿಕ ವಾಹನಗಳಾದ ಬಸ್ಸು, ಟ್ರೇನ್ ಇದ್ದಾಗ ತಾವು ತಾವೇ ಮಾಡಿಕೊಳ್ಳಬೇಕು. ಆಟವಾಡುವ ಮಕ್ಕಳು 5 ನಿಮಿಷ ಮೊದಲಿಗೆ ಆಟ ನಿಲ್ಲಿಸಿ ಬಂದು ಕೈಕಾಲು ಮುಖ ತೊಳೆದು ಪ್ರಾರ್ಥನೆಗೆ ಅಣಿಯಾಗಬೇಕು.

ಒಬ್ಬರೇ ಇದ್ದಾಗ ತಾವಷ್ಟೇ ಅಂದುಕೊಳ್ಳಬೇಕು. ಮೂವರಿಗಿಂತಲೂ ಜಾಸ್ತಿ ಇದ್ದಾಗ ಒಬ್ಬರು ಹೇಳಿ ಇನ್ನೊಬ್ಬರು ಪುನರುಚ್ಚರಿಸಬೇಕು. ಧರ್ಮಪಿತರು ಹೇಳುವಂತೆ ದೇವನನ್ನು ಸುತ್ತಿಸಲು ನಾಚಿಕೊಳ್ಳಬಾರದು.

ಆಳಿಗೊಂಡಿಹರೆಂದು ಅಂಜಲದೇಕೆ?
ನಾಸ್ತಿಕವಾಡಿಹರೆಂದು ನಾಚಲದೇಕೆ?
ಆರಾದೊಡಾಗಲಿ ಶ್ರೀ ಮಹಾದೇವಂಗೆ ಶರಣೆನ್ನಿ

ಸ್ಥಳಾವಕಾಶ ಸಿಕ್ಕರೆ ಒಂದು ಬಟ್ಟೆಯನ್ನು ಹಾಸಿಕೊಂಡು ಕುಳಿತುಕೊಳ್ಳಬಹುದು, ಇಲ್ಲವೇ ಕುರ್ಚಿಯ ಮೇಲೆ ಕುಳಿತುಕೊಳ್ಳಬಹುದು, ಕಡೆಗೆ ಒಂದು ಕಡೆ ನಿಂತುಕೊಂಡಾದರೂ ಮಾಡಬೇಕು.

ಇಂಥ, ಪರಮ ಪ್ರಭು ಸೃಷ್ಟಿಕರ್ತ ಲಿಂಗದೇವನ ಮತ್ತು ಧರ್ಮಕರ್ತ ಬಸವಣ್ಣನವರ ಸ್ಮರಣೆಯನ್ನು ಸಂಜೆ 7.00ಕ್ಕೆ ನಿಯಮಿತವಾಗಿ, ಕಡ್ಡಾಯವಾಗಿ, ಸ್ವಇಚ್ಛೆಯಿಂದ ಯಾವಾಗಬೇಕೋ ಆಗ ಮಾಡಿ ಪುನೀತರಾಗಿ,

ಭಾಗ - ೧ ಸ್ಮರಣೆ

೧. ಗುರು ಬಸವ ಸ್ತುತಿ

ಓಂ ಶ್ರೀ ಗುರು ಬಸವ ಲಿಂಗಾಯ ನಮಃ

ಬಸವಂ ಪ್ರಣವಾಕಾರಂ
ಬಸವಂ ಶರಣಾಗತ ರಕ್ಷಕ ವರಲೋಲಂ
ಬಸವಂ ಜನ್ಮ ಕುಠಾರಂ |
ಬಸವಂ ನಮಾಮಿ ಶ್ರೀಗುರು ಬಸವೇಶಂ ||

೨. ಲಿಂಗದೇವ ಸ್ತುತಿ

ಪ್ರಣವಾರೂಢನು ಪ್ರಣವ ಸ್ವರೂಪನು
ಪ್ರಣವ ಪಕೃತಿ ಸಂಜ್ಞನು
ಪ್ರಣವ ಷಡಂಗ ಸಮರಸ ನಮ್ಮ
ಕೂಡಲ ಸಂಗಮ ದೇವರು.

೩ ಬೇಡಿಕೆ

ಇವನಾರವ ಇವನಾರವ ಇವನಾರವ ನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ
ಕೂಡಲ ಸಂಗಮ ದೇವ ನಿಮ್ಮ ಮಹಾಮನೆಯ
ಮಗನೆಂದೆನಿಸಯ್ಯಾ.

೪ ಸಂಕಲ್ಪ

ಬಸವ ಗುರುವಿನ ತತ್ವ ಲೋಕದಿ ಹಬ್ಬಲಿ
ಮನುಜ ಕಲ್ಪಿತ ಜಾತಿ ಹೆರೆತೊಲಗಿ ಹೋಗಲಿ
ವಿಶ್ವ ಮಾನವ ಪ್ರೀತಿ ಹೊನಲಾಗಿ ಹರಿಯಲಿ
ಸೃಷ್ಟಿಕರ್ತನ ಕರುಣೆ ಎಮ್ಮ ಕಾಪಾಡಲಿ
ಲಿಂಗದೇವನ ಕರುಣೆ ಎಮ್ಮಕಾಪಾಡಲಿ.

೫ ಸಮರ್ಪಣೆ

ಶ್ರೀ ಗುರು ಬಸವಂಗೆ ಶರಣಾಗಿಹೆ
ಲಿಂಗದೇವನಿಗೆ ಶರಣಾಗಿಹೆ
ಶರಣಗಣಕ್ಕೆ ಶರಣಾಗಿಹೆ
ಕರುಣ ಪ್ರಸಾದ ಸ್ವೀಕರಿಸಿಹೆ
ಗಣ ಪದವಿಯನ್ನು ನಾ ಹೊಂದಿಹೆ

ಭಾಗ - ೨ ದೇವ ಸ್ತೋತ್ರ

ಹೇ ಪರಮಾತ್ಮ ಲೋಕದ ಮಿತ್ರ
ನೀನೇ ಸರ್ವಕು ಕಾರಣ ಕರ್ತ ||ಪ||

ಜಗವನು ರಚಿಸಿದ ತಂದೆಯು ನೀನು
ಸೊಗದಿಂ ಪಾಲಿಪ ತಾಯಿಯು ನೀನು
ದುರಿತ ಸಂಕುಲ ಮುಸುಕುತ ಬರಲು
ಪಾರು ಮಾಡುವ ಕರುಣಿಯು ನೀನು

ವಿಘ್ನ ನಿವಾರಕ ಶಕ್ತಿಯು ನೀನೆ
ಬುದ್ದಿ ಪ್ರದಾಯಕ ದೇವನು ನೀನೆ
ವಿದ್ಯಾಸಂಪದ ಶಾಂತಿ ಸೌಖ್ಯಗಳ
ಮಹಾದಾತನು ನೀನೆ

ವೇದಾಂತಿಗಳು ಪರಬ್ರಹ್ಮನೆಂಬರು
ಆಗಮಿಕರು ಪರಶಿವನೆಂಬರು
ಅಲ್ಲಹ ಯಹೋವ ಸುಪ್ರೀಮ್ ಗಾಡ್
ಲಿಂಗದೇವಾ ನಿನ್ನಯ ಹೆಸರು

ಮರೆವಿನ ತಿಮಿರದಿ ಮನವು ಮುಲುಗುತ
ಮುಂದಡಿ ಇಡದೆಯೆ ಬಳಲುತಿರೆ
ಅರಿವಿನ ಬೆಳಕನು ಪಥದಲಿ ಚೆಲ್ಲುತ
ಮುಂದಡಿ ಇಡಿಸುವ ಗುರು ನೀನು

ಅಂದಿನ ಅನ್ನವ ನೀಡುವ ನೀನು
ಬಂಧನ ಹರಿಸುವ ಭವಹರ ಭಾನು
ಬಾಳಲಿ ನಡೆಯಲು ಆತ್ಮ ಬಲವ
ನೀಡುವ ಮಂಗಲ ಶಕ್ತಿಯು ನೀನು

ನಿನ್ನನ್ನಲ್ಲದೆ ಯಾರನು ಬೇಡೆನು
ಬನ್ನವ ಕಳೆಯುವ ಚಿನ್ಮಯನೆ
ಎಮ್ಮಯ ಜೀವನ ಸರ್ವ ಸಂಪದದಿ
ಬೆಳಗಲು ಕರುಣಿಸು ಸಚ್ಚಿದಾನಂದ

ಲಿಂಗದೇವಾಷ್ಟಕ

1.
ಶರಣ ಜನ ಪೂಜಿತ ಶ್ರೀ ಲಿಂಗದೇವ
ಮರಣಭಯ ದೂರಕ ಶ್ರೀ ಲಿಂಗದೇವ
ಸೃಷ್ಟಿಕರ್ತ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

2.
ಸರ್ವಕಾರಣ ಶ್ರೀ ಲಿಂಗದೇವ
ಸರ್ವಶಕ್ತ ಶ್ರೀ ಲಿಂಗದೇವ
ಸರ್ವವ್ಯಾಪಿ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

3.
ನಿರಾಕಾರ ನಿರ್ಗುಣ ಶ್ರೀ ಲಿಂಗದೇವ
ನಿರ್ಮಲ ಚೇತನ ಶ್ರೀ ಲಿಂಗದೇವ
ಪ್ರಣವ ಸ್ವರೂಪ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

4.
ವಿಶ್ವತಃ ಚಕ್ಷು ಶ್ರೀ ಲಿಂಗದೇವ
ವಿಶ್ವತೋ ಬಾಹು ಶ್ರೀ ಲಿಂಗದೇವ
ವಿಶ್ವತಃ ಪಾದ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

5.
ಮಾತಾಪಿತರಹಿತ ಶ್ರೀ ಲಿಂಗದೇವ
ಜಗದಾರಾಧ್ಯ ಶ್ರೀ ಲಿಂಗದೇವ
ಲೋಕರಕ್ಷಕ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

6.
ಜ್ಯೋತಿಸ್ವರೂಪ ಶ್ರೀ ಲಿಂಗದೇವ
ಕಾರುಣ್ಯನಿಧಿ ಶ್ರೀ ಲಿಂಗದೇವ
ಮಂಗಳರೂಪಿ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

7.
ಜನನ ಮರಣ ರಹಿತ ಶ್ರೀ ಲಿಂಗದೇವ
ಭವತಾಪಹಾರಕ ಶ್ರೀ ಲಿಂಗದೇವ
ಮುಕ್ತಿದಾತ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

8.
ಹೃತ್ಕಮಲವಾಸಿ ಶ್ರೀ ಲಿಂಗದೇವ
ಗುರುಬಸವ ರೂಪಿತ ಶ್ರೀ ಲಿಂಗದೇವ
ಇಷ್ಟಲಿಂಗರೂಪಿ ಶ್ರೀ ಲಿಂಗದೇವ
ಪೂಜಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

ಭಾಗ - ೩ ಉಗ್ಘಡಣೆ

ಲಿಂಗಾಯತ ಧರ್ಮದ ಷಟ್‌ಸೂತ್ರ ಘೋಷಣೆ

1. ನಮ್ಮಧರ್ಮ ಗುರು - ವಿಶ್ವಗುರು ಬಸವಣ್ಣನವರು
2. ನಮ್ಮಧರ್ಮ ಸಂಹಿತೆ - ಸಮಾನತೆ ಸಾರುವ ವಚನ ಸಾಹಿತ್ಯ
3. ನಮ್ಮಧರ್ಮಲಾಂಛನ - ಸೃಷ್ಟಿಕರ್ತ ಲಿಂಗದೇವನ ಕುರುಹಾದ ಇಷ್ಟಲಿಂಗ
4. ನಮ್ಮಧರ್ಮಕ್ಷೇತ್ರ - ಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮ, ಶರಣ ಭೂಮಿ ಬಸವ ಕಲ್ಯಾಣ
5. ನಮ್ಮಧರ್ಮ ಧ್ವಜ - ಷಟ್ಕೋನ ಇಷ್ಟಲಿಂಗ ಸಹಿತ ಬಸವ ಧ್ವಜ
6. ನಮ್ಮಧರ್ಮದ ಧೈಯ - ಜಾತಿ ವರ್ಣವರ್ಗ ರಹಿತ ಧರ್ಮ ಸಹಿತ ಶರಣ ಸಮಾಜ ನಿರ್ಮಾಣ, ಕಲ್ಯಾಣ ರಾಜ್ಯ ನಿರ್ಮಾಣ

ಮಂಗಲ ವಚನ

ಜಯ ಬಸವರಾಜ ಭಕ್ತಜನ ಸುರಭೂಜ
ಜಯತು ಮಹಕಾರಣಿಕ ಲಿಂಗದೇವನ ಘನತೇಜ |
ಜಯತು ಕರುಣಾಸಿಂಧು ಭಜಕಜನ ಬಂಧು
ಜಯ ಇಷ್ಟದಾಯಕ ರಕ್ಷಿಸು ಶ್ರೀ ಗುರು ಬಸವಾ
ರಕ್ಷಿಸು ಶ್ರೀ ಗುರು ಬಸವಾ ರಕ್ಷಿಸು ಶ್ರೀ ಗುರು ಬಸವಾ |

ಜಯ ಘೋಷ

ಜಯ ಗುರು ಬಸವೇಶ ಹರಹರ ಮಹಾದೇವ
ವಿಶ್ವಗುರು ಬಸವೇಶ್ವರ ಮಹಾತ್ಮಾ..............ಜೈ |
ಸಕಲ ಶರಣ ಸಂತೋಂಕಿ........ ........... ಶರಣು ಶರಣಾರ್ಥಿ ಎಂದು ಕೈ ಮುಗಿಯಬೇಕು.

ಪರಿವಿಡಿ (index)
Previous ಬಸವ ಬಸವಾ ಎಂದು ಭಸಿತಮಂ ಧರಿಸಿದರೆ ಜ್ಯೋತಿ ಬೆಳುಗುತಿದೆ Next