ಧರ್ಮಗುರು ವಂದನ ಗೀತೆಗಳು | ಧರ್ಮಗುರು ಪುಷ್ಪವೃಷ್ಟಿ |
ಧರ್ಮಗುರು ಬಸವಣ್ಣನ ನೆನೆಯೋಣ
|
ಶ್ರೀಕಾರ ರೂಪಾಗಿ ಓಂಕಾರ ಉಸಿರಾಗಿ
ಲೋಕಕೆ ಗುರುವಾಗಿ ಬೆಳಕನು ತೋರುವ,
ಬಸವಣ್ಣನ ನೆನೆಯೋಣ, ಶ್ರೀ ಗುರು ಬಸವಣ್ಣನ ನೆನೆಯೋಣ || ಪ ||
ಸೃಷ್ಟಿಕರ್ತನು ತಾನು ಪರಮ ಕರುಣೆಯ ತೋರಿ
ಜಗದ ಉದ್ದಾರಕ್ಕೆ ಕಳುಹಿದ ಶ್ರೀ ಗುರು ಬಸವಣ್ಣನ ನೆನೆಯೋಣ || 1 ||
ಬಾಗೇವಾಡಿಯೊಳುದಿಸಿ ಕಲ್ಯಾಣದೊಳು ನೆಲೆಸಿ
ಕೂಡಲ ಸಂಗಮದೊಳು ಬಯಲಾದ ಶ್ರೀ ಗುರು... || 2 ||
ಅಜ್ಞಾನ ಸಾಗರದಿ ತೆರೆ ಕೊಬ್ಬಿ ಮೊರವಾಗ
ಸುಜ್ಞಾನ ನಾವೆಯನು ತಂದೆಮ್ಮ ದಾಟಿಸುವ || 3 ||
ಮರ್ತ್ಯವೇ ಶಿವಲೋಕ ಕಾಯಕವೇ ಕೈಲಾಸ
ಎಂದು ಸಾರಿ ಇಳೆಯ ಬಾಳ ಹಿರಿಮೆಯ ತೋರ‍್ದ || 4 ||
ಅರಿದೊಡೆ ಶರಣನು ಮರೆದೊಡೆ ಮಾನವ
ಮರೆಯದೆ ಪೂಜಿಸು ಸೃಷ್ಟಿಕರ್ತನ ಎಂದ || 5 ||
ಕಾಯ ವೀಣೆಯ ಮಾಡಿ ನರವ ತಂತಿಯ ಮಾಡಿ
ಉರದಿಂದ ಹಾಡುತ ದೇವನನ್ನು ಒಲಿಸಿದ || 6 ||
ನರವಿಂಧ್ಯದೊಳಗೆ ಹುಲುಗಿಳಿಯು ನೀನಾಗು
ಭಕುತಿಯ ಪಂಜರದಿ ಅಭಯವ ಪಡೆಯೆಂದ || 7 ||
ಮರ್ತ್ಯಲೋಕವಿದುವು ಕರ್ತನ ಕಮ್ಮಟವು
ಇಲ್ಲಿ ಸಲ್ಲುವವರು ಅವನಲ್ಲೂ ಸಲುವರೆಂದ || 8 ||
ಇವನಾರು ಇವನಾರು ಭೇದವನೆಣಿಸದೆ
ಎಲ್ಲರು ನನ್ನವರು ಎನ್ನಲು ಕಲಿಸಿರುವ || 9 ||
ಭಕ್ತಿಯ ಭೂಮಿಯೊಳು ಅರಿವಿನ ಮಾಮರದಿ
ನಿಷ್ಪತ್ತಿ ಹಣ್ಣಾಗಿ ದೇವನಿಗೆ ಎಡೆಯಾದ || 10 ||
ಆನಂದ ವರ್ಷದಿ ಧರೆಗಿಳಿದು ತಾ ಬಂದು
ನಳನಾಮ ವರ್ಷದಿ ದೇವನೊಳು ಬೆರೆದಂಥ || 11 ||
ಶರಣ ಗಣ ಮಣಿಯಾಗಿ ಶರಣ ಗುಣನಿಧಿಯಾಗಿ
ಶರಣಾಗತ ರಕ್ಷಕ ಕಾರಣಿಕ ಗುರುವಾದ || 12 ||
ಮುಕ್ತಿದಾತನ ತೋರಿ ಮುಕ್ತಿದಾಯಕನಾದ
ಸಚ್ಚಿದಾನಂದನ ಕಾರಣಿಕ ಶಿಶುವಾದ || 13 ||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ಧರ್ಮಗುರು ವಂದನ ಗೀತೆಗಳು | ಧರ್ಮಗುರು ಪುಷ್ಪವೃಷ್ಟಿ |