ಧರ್ಮಗುರು ಬಸವ ಪೂಜಾಗೀತೆ (ಆದಿ ಪ್ರಮಥರ ಪೂಜಾಗೀತೆ)
ಬಸವ ಪೂಜೆಯ ಮಾಡುವಾ
ಬಸವ ಪೂಜೆಯ ಮಾಡುವಾ | ಶರಣರೆ
ಬಸವ ಪೂಜೆಯ ಮಾಡುವಾ ||ಪಲ್ಲವಿ||
ಮರ್ತ್ಯದ ಮಣಿಹ ಮುಗಿಸಿ ಕರ್ತನ ಕರೆ ಪಡೆದು
ಇಚ್ಛಾಮರಣದಿ ಪರಮನ ಬೆರೆದಂಥ ||ಅ.ಪ||
ಕೂಡಲ ಸಂಗಮದ ಸುಕ್ಷೇತ್ರದಲ್ಲಿ
ನಳನಾಮ ಸಂವತ್ಸರದೊಳ್
ಶ್ರಾವಣ ಶುದ್ಧ ಪಂಚಮಿಯಂದು ಲಿಂಗದೇವನ ಆಣತಿ ಪಡೆದು
ಉರಿಯುಂಡ ಕರ್ಪುರದೋಲ್ ದೇವನಲಿ ಬಯಲಾದ || 1 ||
ಭಕ್ತಿಯ ಭೂಮಿಯೊಳು ಬೆಳೆದಂಥ
ಅರಿವಿನ ಮಾಮರದೊಳ್
ಸೃಷ್ಟಿಗೊಡೆಯ ಲಿಂಗದೇವನ ದಿವ್ಯ ಕಾರುಣ್ಯವನ್ನು ಪಡೆದು
ನಿಷ್ಪತ್ತಿ ಹಣ್ಣಾಗಿ ಅವನೊಡನೆ ಬೆರೆದಿಹ || 2 ||
ಇಷ್ಟಲಿಂಗವ ತಾನಿತ್ತ ಪರಮಗುರು
ಶ್ರೇಷ್ಠ ಪಥ ದರ್ಶಕನು
ಲಿಂಗವಂತ ಧರ್ಮ ನೀಡ್ದ ಮಂಗಳಾಂಗ ಮಂತ್ರಪುರುಷ
ಅಂಗಮನದ ಗುಣಗಳಳಿದು ಸರ್ವಾಂಗಲಿಂಗಿಯಾದ || 3 ||
ಶ್ರೀ ಗುರು ಬಸವಣ್ಣಂಗೆ ಶರಣಾಗುತ್ತ
ಲಿಂಗದೇವನ ನಂಬಿ
ಶರಣ ಗಣಕ್ಕೆ ಶರಣಾಗಿ ಕರುಣ ಪ್ರಸಾದ ಪಡೆದು
ಗಣ ಪದವಿಯ ಹೊಂದಿ ಹಿಗ್ಗಿ ನಲಿದಾಡತಾ || 4 ||
ಭೃಂಗ ಕುಸುಮದ ಮಧುವ ಹೀರುವ ತೆರದಿ
ಲಿಂಗದ ಆನಂದವ
ಅಂಗ ಮನ ಕರಣಾದಿ ಗುಣಗಳ ಲಿಂಗಭಾವದಿ ನಾಶ ಮಾಡಿ
ಲಿಂಗದೇವ ಶ್ರೀ ಸಚ್ಚಿದಾನಂದನ ಬೆರೆದಂಥ ||5||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.