Previous ನೀನೆ ಅಕಳಂಕಗುರು ಏನನೋದಿ ಏನು ಫಲ Next

ವರವ ಬೇಡುವೆನೊಂದು

ರಚನೆ: ಶ್ರೀ ಮುಪ್ಪಿನ ಷಡಕ್ಷರಿ


ಹರನೆ ನಾ ನಿಮ್ಮಲ್ಲಿ
ವರವ ಬೇಡುವೆನೊಂದು
ಶರಣರಿಗೆ ಭೃತ್ಯನಾಗಿರಿಸೆನ್ನನು || ಪ ||

ಅವರಲ್ಲಿ ಶಿವನಿಹನು
ಶಿವನಿರ್ದೊಡಲ್ಲಿ ತಾ
ತವೆ ಸಕಲ ಶರಣಗಣ ಮೆರೆದಿಪ್ಪುದು
ಅವರ ಅಂಗಳ ನಿತ್ಯ
ಶಿವಲೋಕವಾಗಿಹುದು
ಅವರ ಘನಕಿನ್ನೇನ ಸರಿಯ ಕಾಣೆ || ೧ ||

ಅವರ ಕಿಂಕರನಾಗಿ
ಅವರ ಪಾದವ ತೊಳೆದು
ಅವರ ಪಡಿಗವ ಬೆಳಗಿ ತೊಳೆದು ತಂದು
ಅವರ ಹಾವುಗೆ ವಿಡಿದು
ಅವರಡಿಗಳನು ಒರೆಸಿ
ಅವರಿಚ್ಛೆಯೊಳಗಿರ್ಪ ವರವ ಶಿವನೆ || ೨ ||

ಅವರುಂಡು ಮಿಕ್ಕುದನು
ಅವರುಟ್ಟು ಬಿಟ್ಟುದನು
ಅವರುಗಿದ ತಾಂಬೂಲವ ಸವಿದು ನಾನು
ಅವರಂಗಳವ ಗುಡಿಸಿ
ಅವರ ಬಾಗಿಲ ಕಾಯ್ದು
ಅವರ ಕೀಳಲಿ ಸೇರಿಕೊಂಡಿರ್ಪುದ || ೩ ||

ಅವರ ಎತ್ತಾಗಿ ನಾ
ನವರ ತೊತ್ತಾಗಿ ನಾ
ನವರ ಪಶುವಾಗಿ ನಾ ಸುಖಮಿಪ್ಪುದ
ಅವರ ಬಾಗಿಲೊಳಿರ್ಪ
ತವೆಸೋಣಗ ನಾನಾಗಿ
ಅವರ ಚರಣದ ಧೂಳಿ ತೊಡೆದಿರ್ಪುದ || ೪ ||

ಶಿವ ನಿಮ್ಮ ಘನಕಿಂತ
ಅವರ ಘನವತ್ಯಧಿಕ
ಅವರಂಗಳ ದ್ವಿತಿಯ ಕೈಲಾಸವು
ಅವರ ನಾ ಭವಭವದಿ
ತವೆಬಿಡದೆ ಇರ್ಪುದನು ಶಿವಷಡಕ್ಷರಿವರನೆ ಪಾಲಿಸೆನಗೆ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ನೀನೆ ಅಕಳಂಕಗುರು ಏನನೋದಿ ಏನು ಫಲ Next