Previous ನಿಮ್ಮನು ನೆನೆವ ಮನವ ಬಯಸುವೆನು ಎನ್ನ ಬರಿಸದಿರು Next

ಎನ್ನ ಕರದೊಳಗಿರ್ದು ಏಕೆ ನುಡಿಯೆ?

ಕುಸುಮಷಟ್ಪದಿ

ಎನ್ನ ಕರದೊಳಗಿರ್ದು
ಎನ್ನೊಳೇತಕೆ ನುಡಿಯ
ಎನ್ನ ಭವಭವದಲ್ಲಿ ಬಿಡದಾಳ್ದನೆ || ಪ ||

ಎನ್ನ ಚಿಂತಾಮಣಿಯ
ಎನ್ನ ಪರುಷದ ಕಣಿಯ
ಎನ್ನ ಬೇಡಿದುದೀವಸುರಭೂಜವ
ಎನ್ನ ಸಂಜೀವನವೆ
ಎನ್ನ ಪರಮಾಯುಷವೆ
ಎನ್ನ ಕರದೊಳಗಿರ್ದು ಏಕೆ ನುಡಿಯೆ || ೧ |

ಎನ್ನ ಗತಿಮತಿಯೆ ನೀ
ನೆನ್ನ ಚೈತನ್ಯವೇ
ಎನ್ನನಗಲದೆ ಕೂಡಿ ಬಿಡದಾಳ್ದನೆ
ಎನ್ನ ಇಹಪರಸುಖವೆ
ಎನ್ನ ಮುಕ್ತಿಯ ಸಿರಿಯೇ
ಎನ್ನ ಕರದೊಳಗಿರ್ದು ಏಕೆ ನುಡಿಯೆ || ೨ ||

ಎನ್ನ ಭಾಗ್ಯದ ಸುಧಯೇ
ಎನ್ನ ಭಕ್ತಿಯ ನಿಧಿಯೆ
ಎನ್ನ ಮನವೆಂಬ ವನಿತೆಯ ತಿಲಕವೆ
ಎನ್ನ ಹೃದಯಾಲಯದ
ಚಿನ್ಮಯದ ಮೂರ್ತಿಯೆ
ಎನ್ನ ಕರದೊಳಗಿರ್ದು ಏಕೆ ನುಡಿಯೆ || ೩ ||

ಎನ್ನ ಮಾತೆಯು ನೀನೆ
ಎನ್ನ ತಾತನು ನೀನೆ
ಎನ್ನ ಬಂಧುವು ಬಳಗ ಸಖನು ನೀನೆ
ಎನ್ನ ಪತಿಯೂ ನೀನೆ
ಎನ್ನ ಹಿತನೂ ನೀನೆ
ಎನ್ನ ಕರದೊಳಗಿರ್ದು ಏಕೆ ನುಡಿಯೆ || ೪ ||

ಎನ್ನ ಕುಲಗುರುವೆ ನೀ
ಎನ್ನ ವಿದ್ಯಾಗುರುವೆ
ಎನ್ನ ಭವಭವದಲ್ಲಿ ಬಿಡದ ಗುರುವ
ಎನ್ನ ದೀಕ್ಷಾಗುರುವೆ
ಎನ್ನ ಮೋಕ್ಷಾಗುರುವೆ
ಎನ್ನ ಕರದೊಳಗಿರ್ದು ಏಕೆ ನುಡಿಯ || ೫ ||

ಎನ್ನ ಮನವನಚೈತ್ರ
ಎನ್ನ ಘನಸುಖಪಾತ್ರ
ಎನ್ನ ಭವವೆಂಬ ವಾರಿಧಿಭೈತ್ರವೆ
ಎನ್ನ ಜ್ಞಾನದ ನೇತ್ರ
ಎನ್ನ ಪುಣ್ಯದ ಗಾತ್ರ
ಎನ್ನ ಕರದೊಳಗಿರ್ದು ಏಕೆ ನುಡಿಯೆ || ೬ ||

ಎನ್ನನಿಲ್ಲಿಗೆ ತಂದು
ಭಿನ್ನವನು ಮಾಡಿದೈ
ಅನ್ಯವೇ ನಾ ನಿನಗೆ ಹೇಳು ಗುರುವೆ
ಎನ್ನೊಡನೆ ನುಡಿಯದಿರೆ
ನಿನ್ನನಾ ಭವಭವದಿ
ಬೆನ್ನ ಬಿಡುವೆನೆ ಷಡಕ್ಷರಿಲಿಂಗವೇ || ೭ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ನಿಮ್ಮನು ನೆನೆವ ಮನವ ಬಯಸುವೆನು ಎನ್ನ ಬರಿಸದಿರು Next