Previous ಎತ್ತು ತೊತ್ತು ತೊಂಡನಾಗಿ ಇರಿಸು ಇದರ ತೆರನ ಕರುಣಿಸು Next

ಶಿವನ ಪೂಜೆಯನ್ನು ಮಾಡು

ಭೋಗಷಟ್ಪದಿ

ಶಿವನ ಪೂಜೆಯನ್ನು ಮಾಡು
ಭವದ ವಾರುಧಿಯನು ದಾಂಟು
ವಿವರಗೇಡಿಯಾಗದಿಹದ ಸುಖಕೆ ಸಿಕ್ಕಿದೆ || ಪಲ್ಲವಿ ||

ಸವಿಸು ಗುರುವಿಗರ್ಥವನ್ನು
ಸವಿಯೊ ಸುಪ್ರಸಾದವನ್ನು
ಹವಣದಿಂದ ಹಾರು ಅತ್ತಯಿತ್ತಬಾರದೆ
ಕವಿದೆ ಮಾಯೆ ಜಾಲವನ್ನು
ಸವರಿ ಒಡೆದು ನುಚ್ಚು ಮಾಡಿ
ಪವನದಿಂದ ಗೆಲಲು ಬಲ್ಲಡಾತನುತ್ತಮ || ೧ |

ಅರಿವಿನೊಳಗೆ ಅರಿತು ಬೆರತು
ಇರಲಿಬೇಡ ಎಲ್ಲರೊಡನೆ
ಸರಸಗಾರನಾಗಿ ಬಾಳು ಬಲ್ಲತನದಲಿ
ಇರುವೆ ಮೊದಲು ಆನೆ ಕಡೆಯು
ಸರ್ವಜೀವರಾಸಿಯೊಳಗೆ
ಉರುಳಿ ಹೊರಳಿ ಉಳಿದು ಬಂದೆ ಶಿವನ ಕರುಣದಿ || ೨ ||

ನಿತ್ಯವಲ್ಲ ಕಾಯವಿದ-
ನಿತ್ಯವೆಂದು ತಿಳಿದು ನೋಡು
ತೊತ್ತಿನಂತ ಮರೆತು ಬೆರತು ಹೊತ್ತುಗಳೆಯದೆ
ಚಿತ್ತಶುದ್ಧನಾಗಿ ನೀನು
ಕತ್ತರಿಸು ಭವದ ಬೇರ
ತತ್ತ್ವಜ್ಞಾನದಿಂದ ತಿಳಿದು ನೋಡಿಕೊಳ್ಳಲಿ || ೩ ||

ಮಂದಮತಿಯ ಮನುಜ ಕೇಳು
ಬಂದದೇನು ಉಣಲಿಬೇಕು
ಒಂದ ಒಂದ ಬಯಸಿ ನೀನು ಭ್ರಷ್ಟನಾಗದೆ
ಹಿಂದುಗಳೆಯಬೇಡ ದಿನವ
ಇಂದುಧರನ ಪೂಜೆಮಾಡು
ಅಂದವುಳ್ಳ ಜನ್ಮ ನಿನಗೆ ದೊರಕಿದಾಗಲೆ || ೪ ||

ಗಾಳಿ ಬಂದ ಕೈಲಿರಾಸಿ
ಜೋಳವನ್ನು ತೂರಿಕೊಳ್ಳೋ
ಏಳುಜನ್ಮದಲ್ಲಿ ಮಾಡಿಬಂದ ಪಾಪವ
ಕೇಳಿದಾಕ್ಷಣ ಕಳೆಯಬೇಕು
ನಾಳೆ ನಾಡದನ್ನ ಬೇಡ
ಭಾಳಲೋಚನ ಇಷ್ಟಲಿಂಗ ಕರದೊಳಿರಲಿಕೆ || ೫ ||

ಇಷ್ಟಲಿಂಗ ಕರದೊಳಿರಲು
ನೆಟ್ಟ ಪ್ರತಿಮೆಗೆರಗಬಹುದೆ
ಭ್ರಷ್ಟನಾಗಿ ಕೆಡಲಿಬೇಡ ಬಾಧೆ ಬರ್ಪುದು
ಕಟ್ಟಿಕೊಂಡ ಕರ್ತ ನಿನ್ನ
ಮೆಟ್ಟಿ ಮೂಗ ಕೊಯ್ದು ಮೆಣಸ
ಹಿಟ್ಟ ಹೊಯ್ದು ಶರಗ ಹರಿದು ಬಿಟ್ಟು ಕೊಡುವನು || ೬ ||

ಮಾಡಿದನ್ನು ಉಣುವರೆಂದು
ಹಾಡುತಿಹರು ಇಳೆಯ ಮೇಲೆ
ಗಾಢದಿಂದ ತಿಳಿದು ನೋಡು ಗರ್ವ ಬೇಡವು
ಪಾಡುವರನು ಮೇಲೆ ಬಿರಿದು
ಪಾಡಿಕೊಂಡು ಅಳಲಬಹುದೆ
ಮೂಢಮನುಜ ಮಾಡು ಬೇಗ ಶಿವನ ಪೂಜೆಯ || ೭ ||

ಸಿರಿಯು ಬರಲು ಶಿರವು ತಗ್ಗು
ಗರುವ ಬೇಡ ಎಲ್ಲರೊಡನೆ
ಸರಸಗಾರನಾಗಿ ಬಾಳು ಭಕ್ತಿಯಿಂದಲಿ
ಗುರುಹಿರಿಯರೆಂದು ನೋಡು
ಪರಹಿತಾರ್ಥವನ್ನು ಮಾಡು
ಸ್ಥಿರವಿದಲ್ಲ ಭಾಗ್ಯ ನಿನಗೆ ಅರಿತು ನೋಳ್ಳುದು || ೮ ||

ಮುನ್ನ ತಾನದಾರು ಎಂದು
ತನ್ನ ನಿಜವನರಿದ ಬಳಿಕ
ಚನ್ನ ಷಡಕ್ಷರಿಯ ಲಿಂಗ ತಾನೆಯಾಗಿಹ
ಇನ್ನು ಸರ್ವಜಗದ ಒಳಗೆ
ತನ್ನ ನಿಜವೆಯಾಯಿತಾಗಿ
ಅನ್ಯವಿಲ್ಲವಾಗಿ ಬಾಳುವಾತನೇ ಶಿವಾ || ೯ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಉಲ್ಲೇಖ ಟಿಪ್ಪಣಿ: ಮುಪ್ಪಿನ ಷಡಕ್ಷರಿಗಳ ಹೆಚ್ಚಿನ ಪದಗಳು

ಪರಿವಿಡಿ (index)
Previous ಎತ್ತು ತೊತ್ತು ತೊಂಡನಾಗಿ ಇರಿಸು ಇದರ ತೆರನ ಕರುಣಿಸು Next