ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ
ಅಂಗಸಂಗಿಯಾಗಿ ಸಂಬಂಧಿಯಲ್ಲ
ಲಿಂಗದೊಳಗಾಪ್ಯಾಯಿನಿಯಾಗಿ
ಇತರ ಸುಖಂಗಳ ಬಿಟ್ಟು ಕಳೆದು
ಸುಮನಸಾರಾಯವಾದ ಶರಣನು |ಪಲ್ಲವಿ|
ಗುರುಕರುಣಸಂಗದಿಂದ ಶಿಷ್ಯನಿಂತು
ಕರದಲ್ಲಿ ಹುಟ್ಟಿದನು
ಕರಣಸಹಿತ ಅವಗ್ರಾಹಿಯಾಗಿ
ಘಾಳಿ ಸುಳುಹಡಗಿದ ಶರಣನು |೧|
ಆಸೆಯೆಂಬ ಹದನುಳುಹಾಗಿ
ಹಿಡಿದ ಛಲ ಬಿಡದೆಂಬ ಬೇರೂರಿ
ಸಂಕಲ್ಪವಿಕಲ್ಪಗಳೆರಡೂ ಇಲ್ಲದೆ
ನಿಃಕಳಂಕನಾದನು ಶರಣನು |೨|
ಮಾಡುವವರ ಕಂಡು ಮಾಡುವವನಲ್ಲ
ಮಾಡದವರ ಕಂಡು ಮಾಡದವನಲ್ಲ
ತಾ ಮಾಡುವ ಮಾಟಕೆ ತವಕಿಗನಾಗಿಪ್ಪ
ಹಿಂದುಮುಂದರಿಯದ ಶರಣನು |೩|
ಎಲ್ಲವು ತಾನೆಂಬ ಕರುಣಾಕರನಲ್ಲ
ನಿಃಕರುಣಿಯಾಗಿ ಜಡದೇಹಿಯಲ್ಲ
ಭೋಗಿಪ ಭೋಗಂಗಳಾಮಿಷ
ತಾಮಸ ವಿಷಯವಿರಹಿತನು ಶರಣನು |೪|
ಘನವನಿಂಬುಗೊಂಡ ಮನದ ಬೆಂಬಳಿ
ವಿಡಿದುಳೆದಲ್ಲಿ ನಿಜವಾಗಿ ನಿಂದನು
ತಾನೆಂಬುದಿಲ್ಲ ನಿರಂತರ ಸುಖಿ ಗುರು
ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣನು |೫|
[ಸದ್ಗುರು ಚೆನ್ನಮಲ್ಲಿಕಾರ್ಜುನ
ನಿಮ್ಮ ಶರಣ ಬಸವಣ್ಣನು]
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”