Previous ನಿಮ್ಮ ಹಾಗೆ ಕಾಂಬೆನಯ್ಯ ಕಾಡಲೇಕೆ ನರರುಗಳನು Next

ನನ್ನ ಮೇಲೆ ಹಗೆಯೇಕೆ

ಭೋಗಷಟ್ಪದಿ

ಮುನ್ನ ನಮ್ಮ ಶರಣರುಗಳು
ನಿನ್ನ ಕಾಡಿದುದಕೆ ಈಗ
ಎನ್ನ ಮೇಲೆ ಹಗೆಯ ಮಗುಚುತಿಹೆಯೊಕಾಣೆನು || ಪ ||

ಶರಣ ನಂಬಿಯಣ್ಣ ಹಿಂದೆ
ತಿರುಗಿಸಿದನು ಹಡಪ ಹಿಡಿಸಿ
ಬೆರಸಿ ಕೊಲ್ಲಬಂದಕಲಿಯ ಕಾಯನೆನುತಲಿ
ಪರಮ ಮೂಗಿದೇವ ತನ್ನ
ಹೊರೆಯ ಹೊರಿಸಲಾಗಿ ತಲೆಯು
ಉರಿದುದಕ್ಕೆ ಎನ್ನ ಕಾಡುತಿಹೆಯೋ ಕಾಣೆನು || ೧ ||

ಚೋಳಿಯಕ್ಕ ಉಂಡು ಬಿಟ್ಟ
ಹಾಲಹುಗ್ಗಿಯನ್ನು ಮರೆಸಿ
ಹೇಳದಾಕೆ ತನಗೆ ಕೊಟ್ಟಳೆಂಬ ಸಿಟ್ಟಿಗೆ
ಚೋಳರಾಯ ತನ್ನ ಕೆರೆಗೆ
ಬಾಳವಾಗಿ ಮಣ್ಣ ಹೊರಸಿ
ಆಳುಗೊಳಲು ಎನ್ನ ಕಾಡುತಿಹೆಯೋ ಕಾಣೆನು || ೨ ||

ಸತ್ತಿಯಕ್ಕ ಹುಟ್ಟಿನಿಂದ
ಒತ್ತಿ ತನ್ನ ತಿವಿದಳೆಂದು
ಮಿಥ್ಯತನವ ಮಡಗಿಕೊಂಡು ಮತ್ತದಲ್ಲದೆ
ನಿತ್ಯ ಸಾಂಖ್ಯತೊಂಡ ನಿಮ್ಮ
ನೆತ್ತಿ ಕಲ್ಲಿಲಿಟ್ಟನವರ
ಭೃತ್ಯನಿವನು ಎಂದು ಕಾಡುತಿಹೆಯೋ ಕಾಣೆನು || ೩ ||

ಶಂಭು ನೀವು ಉಣ್ಣದಿರಲು
ನಂಬಿಯಕ್ಕ ಕೊಲ್ಲಬಂದ
ಳೆಂಬ ಸಿಟ್ಟು ಮಡಗಿಕೊಂಡು ಮತ್ತದಲ್ಲದೆ
ಕುಂಭಿಣಿಯೊಳು ಬಾಣ ಬೈದ
ನಂಬಿದವನು ನಾನು ಅವರ
ನೆಂಬ ಸಿಟ್ಟಿನಿಂದ ಕಾಡುತಿಹೆಯೋ ಕಾಣೆನು || ೪ ||

ಅಲ್ಲದಿರ್ದೊಡೆನ್ನಬೇಕೆ
ಇಲ್ಲಿ ಕಾಡಿದಪಿರಿ ನೀವು
ಎಲ್ಲರಲ್ಲಿ ಕರುಣಿಯೆಂಬರಯ್ಯ ನಿಮ್ಮನು
ಫುಲ್ಲ ವಿಶಿಖಮಯನಿಗೆನ್ನ
ನಿಲ್ಲಿ ಕೊಡದೆ ನಿಮ್ಮ ಚರಣ
ದಲ್ಲಿ ಎನ್ನನಿರಿಸು ಷಡಕ್ಷರಿಯ ಲಿಂಗವೆ || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ನಿಮ್ಮ ಹಾಗೆ ಕಾಂಬೆನಯ್ಯ ಕಾಡಲೇಕೆ ನರರುಗಳನು Next