Previous ಇದರ ತೆರನ ಕರುಣಿಸು ಶಿವನ ಪೂಜೆ ಮಾಡು ಮನವೆ Next

ಎಂತ ಕನಸ ಕಂಡೆ!

ಭೋಗಷಟ್ಪದಿ

ಎಂತ ಕನಸ ಕಂಡೆ ಸಖಿಯೆ
ಎಂತು ಇಂತ ಚೋದ್ಯವರಿಯೆ
ಕಂತುಹರನ ಕರಕೆ ಕೊಟ್ಟ ಶಾಂತಗುರುವನಾ || ಪ ||

ಅರುಹು ಲಿಂಗಸಂಗದಿಂದ
ಮಾರಹರನ ನಿಜವು ಬರದು
ಊರ ಮುಂದೆ ಒಂದ ಕಂಡೆ ಉದಯವಾದುದಾ
ನೀರಬೊಂಬೆ ನೆರಳ ಸೇರಿ
ಮೂರು ರತ್ನ ನುಂಗಿ ಬಯಲ
ದಾರಿಯಲ್ಲಿ ಧ್ವನಿಯ ಲಾಲಿಸುವುದ ಕಂಡೆನು || ೧ |

ಹರಿವ ಜಲದ ಮಧ್ಯದಲ್ಲಿ
ಉರಿವ ಜ್ಯೋತಿಪ್ರಭೆಯ ಕಂಡೆ
ಗಿರಿಯನೇರಿ ಸೊರವ ಕರವ ಪರಿಯ ಕಂಡೆನು
ಪರವ ಬೆರಸಿ ಇರುವ ಸಮಯ
ವರವ ಕೊಡುವ ದೇವರೆಮಗೆ
ಶರ್ವನರಿಯ ಸ್ವಪ್ನದಲ್ಲಿ ಏನು ಸೋಜಿಗ || ೨ ||

ಪಂಚವರ್ಣ ವೃಕ್ಷದಲ್ಲಿ
ಪಂಚವರ್ಣ ಪಕ್ಷಿಯಿರಲು
ಪಂಚಭುವನದಲ್ಲಿ ಕಂಡೆ ಮಿಂಚುತಿರ್ಪುದಾ
ಪಂಚಬಾಣನರಿತು ಎನ್ನ
ಹೊಂಚು ಹಾಕಿ ಎಸೆದು ತಂದು
ಪಂಚಮುಖಕೆ ಅರ್ಪಿಸುವಾ ಸಂಚ ಕಂಡೆನು || ೩ ||

ನಡೆಯಲಿಲ್ಲ ನುಡಿಯಲಿಲ್ಲ.
ಹಡಗನೇರಿ ಹೋಗುತಿರಲು
ಒಡನೆ ಹುಟ್ಟಿದೈವರುಗಳ ಕೈಯ ಬಿಟ್ಟೆನು
ಕಡಲ ದಾಂಟೆ ಕಡೆಯಲೊಬ್ಬ
ಜಡೆಯ ತಲೆಯ ಮುನಿಯ ಕಂಡೆ
ಒಡಲ ಶಿಖಿಯ ಕರುಳ ಚಲ್ಲಿ ಉಣಿಸುತಿರ್ಪುದಾ || ೪ ||

ಶೇಷಧರನ ಬಟ್ಟೆಯಲ್ಲಿ
ಸೂಸುತಿರ್ಪ ವಾಯು ಪಿಡಿದು
ರಾಶಿಮಾಡಿ ತೂರುತಿರ್ಪ ಕೇಶರತ್ನವಾ
ಘೋಷದಂತ ಗಗನದಲ್ಲಿ
ಈಶ ಷಡಾಕ್ಷರಿಯ ಲಿಂಗ
ವಾಸವಾಗಿ ಪೋಗುತಿರಲು ಕಣ್ಣು ತೆರೆದೆನು || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಉಲ್ಲೇಖ ಟಿಪ್ಪಣಿ: ಮುಪ್ಪಿನ ಷಡಕ್ಷರಿಗಳ ಹೆಚ್ಚಿನ ಪದಗಳು

ಪರಿವಿಡಿ (index)
Previous ಇದರ ತೆರನ ಕರುಣಿಸು ಶಿವನ ಪೂಜೆ ಮಾಡು ಮನವೆ Next