Previous ಎಂದಿಗಹುದೋ ಎಂದಿಗೆ ದೊರಕುವುದು Next

ಒಡಲು ಹಿಡಿದ ಜಡನು ನಾನು

ಭೋಗಷಟ್ಪದಿ

ಒಡಲು ವಿಡಿದ ಜಡನು ನಾನು
ಒಡಲು ಇಲ್ಲದಜಡ ನೀನು
ಒಡೆಯ ನೀನು ಒಲಿಯದನಕ ಒಲಿಸಲಾಪೆನೆ || ಪ ||

ಹೆಳವ ಮರದ ತುದಿಯಲಿರ್ದ
ಫಲವ ಬಯಸಿ ಬಳಲುವಂತೆ
ಚೆಲುವ ಹೆಣ್ಣ ಅಧಮ ಬಯಸಿ ಬಳಲುವಂದದಿ
ಎಳೆಯ ಚಂದ್ರಧರನ ಸುಖವ
ಎಳೆಸಲಹುದೆ ಎನಗೆ ಶಿವನೆ
ಒಲಿದು ನಿನ್ನ ನೀನೆ ಕರುಣವಾಗದನ್ನಕಾ || ೧ |

ದಾಸಿಯರಸ ಬಯಸಿ ಶರಗ
ಓಸರಿಸುವ ಹಾಂಗೆ ಮುರಿದ
ಘೋಷ ಗಂಟೆ ಜಾವವ ತಾ ಬಯಸುವಂದದಿ
ಈಶ ನಿಮ್ಮ ನಿತ್ಯ ಸುಖವು
ಹೇಸಿ ಮನುಜ ಎನಗೆ ಬಹುದೆ
ವಾಸರಿಸದೆ ನಿನ್ನ ನೀನೆ ಒಲಿಯದನ್ನಕಾ || ೨ ||

ಒಡೆದು ಹೋದ ಬೊಂಬೆ ಚಲುವ
ಗುಡಿಯ ಬಯಸುವಂತೆ ಇರದೆ
ಬಡವ ಧನವ ಬರಿದೆ ಬಯಸಿ ಬಳಲುವಂದದಿ
ಒಡೆಯ ನಿಮ್ಮ ನಿತ್ಯಸುಖವ
ಬಡವ ನಾನು ಬಯಸಲಹುದೆ
ಬಿಡದೆ ನೀನು ಒಲಿದು ಕರುಣವಾಗದನ್ನಕಾ || ೩ ||

ಬಾಳ ತೊತ್ತು ಕನಕ ಚಿತ್ರ
ಶಾಲೆಯ ತಾ ಬಯಸುವಂತೆ
ಆಳು ಅಂದಣವನು ಏರ ಬಯಸುವಂದದಿ
ಶೂಲಧರನೆ ನಿಮ್ಮ ಸುಖವ
ಕಾಲ ಬಡವ ಬಯಸಬಹುದೆ
ಲೀಲೆಯಿಂದ ನಿನ್ನ ನೀನೆ ಒಲಿಯದನ್ನಕಾ || ೪ ||

ಒಡಲನಿತ್ತು ಸುತರನಿತ್ತು
ಮಡದಿ ಧನವ ಧರಣಿಯಿತ್ತು
ಪಡೆದರೈಸೆ ಶಿವನ ಸುಖವ ಬರಿದೆ ಬಪ್ಪುದೆ
ಒಡೆಯ ಷಡಕ್ಷರಿಯ ಲಿಂಗ
ಬಡವನಿವನು ಎಂದು ಬಿಡದೆ
ಒಡನೆ ಕರುಣೆಯಾಗದನಕ ಎನ್ನೊಳಪ್ಪುದೋ || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಎಂದಿಗಹುದೋ ಎಂದಿಗೆ ದೊರಕುವುದು Next