ಭೋಗಷಟ್ಪದಿ
ಕಾಡಲೇಕೆ ನರರುಗಳನು
ಬೇಡಿ ಬಳಲಲೇಕೆ ಮನವೆ
ರೂಢಿಗೀಶ ನಮಗೆ ದೈವವಾಗೆ? ಇರುತಿರೆ || ಪ ||
ಮೃಡನ ಪೂಜೆ ಮಾಡುವುದಕೆ
ಮಡುವಿನಗ್ಗವಣಿಗಳುಂಟು
ಅಡವಿಯಲ್ಲಿ ಕಾಡಪತ್ರಿಪುಷ್ಪವುಂಟಲೈ
ಒಡಲಿಗನ್ನ ತಿರಿದರುಂಟು
ಗುಡಿಗಳುಂಟು ಶಯನಕೆಮಗೆ
ಒಡೆಯರುಗಳು ಬಿಸುಟಿದರುವೆ ಶೀತಕುಂಟ || ೧ ||
ಬುದ್ದಿಯನ್ನು ಹೇಳುವುದಕೆ
ಆದ್ಯರುಗಳ ವಚನವುಂಟು
ಉದ್ಧರಿಸುವಡೆಮಗೆ ಶಿವನ ಮಂತ್ರವುಂಟೆಲೈ
ಅರ್ಧನಾರಿಯೆಂಬ ದೈವ
ಇದ್ದ ಬಳಿಕ ಕರದೊಳೆಮಗೆ
ಹೊದ್ದಲೇಕೆ ನರರ ಆಶೆ ಮಾಡೆನಕ್ಕಟ || ೨ ||
ಮಿಗಿಲು ಮನೆಗಳೇತಕೆಮಗೆ
ಅಗಲಲೇಕನುಭಾವಿಗಳ
ಜಗದೊಳೆಮಗೆ ಹಲವು ಕೋಟಲೆಗಳು ಏತಕೈ
ಸೊಗಸು ಷಡಕ್ಷರಿಯ ಲಿಂಗ
ಅಗಲದಮ್ಮ ಕರದೊಳಿರಲು
ಬೆಗಡುಗೊಳ್ಳಲೇಕೆ ಮನವೆ ನರರಮಾಳ್ಮೆಯಿಂ || ೩ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ