ರಚನೆ: ಶ್ರೀಗುರುಮಾತೆ ನೀಲಮ್ಮತಾಯಿ (ನಿಲಾಂಬಿಕೆ)
ಜೋ ಜೋ ಎನ್ನ ಪರಮಹಂಸ
ಜೋ ಜೋ ಎನ್ನ ಪರಂಜ್ಯೋತಿ || ಪ ||
ಗುದವ ಬಿಗಿದೊತ್ತಿ ಅನಿಜ್ವಾಲೆ ಪಲ್ಲವಿಸಿ
ಮುದುಡಿಕೊಂಡಿಹ ಸರ್ಪ ಹೆಡೆಯನೆತ್ತಿ
ಗದಗದಿಪ ಪವನ ಗ್ರಂಥಿಯನೊಡೆದು ಪಶ್ಚಿಮದ
ಕದವ ತೆಗೆದೊಳಗೆ ಜ್ಯೋತಿಯ ಕಂಡ ಶಿಶುವೆ ||೧||
ಅಂಬೆಗಾಲಡಿಯಿಟ್ಟು ಆಧಾರಮಂ ಬಲಿದು
ಅಂಬುಜಾರರ ತಾಣದಲ್ಲಿ ನಿಂದು
ಕಂಭವನ್ನು ದಾಂಟಿ ಮೇಲಣ ಬಾಗಿಲನೆ ಹಾಯ್ದು
ಕುಂಭಿನಿಯ ಮೊಲೆವಾಲನುಂಡು ದಣಿಯದ ಶಿಶುವೆ || ೨ ||
ಪೃಥ್ವಿಯೆಂಬ ತೊಟ್ಟಿಲೊಳಗೆ ಅರುವೆಯ ಹಾಸಿ
ಸುತ್ತಿ ಸುಳಿವ ಪವನನ ನೇಣ ಮಾಡಿ
ಶ್ರುತಿಯೆರಡರಿಂದ ಪಂಚಮ ವಾದ್ಯವನ್ನು ಕೇಳಿ
ಅತಿಶಯ ಸುಷುಮ್ನ ಸುಖದಲಿರ್ಷ ಶಿಶುವೆ || ೩ ||
ಓಂ ಕಾರದಿಂದ ಊರ್ಧ್ವವನಡರಿ ಚಿಚ್ಛಖಿಯು
ಸೋಂಕಿ ಒಸರಿತು ಸಹಸ್ರದಳದಮೃತವು
ಸಾಕೆನ್ನದುಂಡು ದರ್ಪಣದ ಬೆಳಗಿನಲಿ
ಏಕವಾದ ಲಿಪಿಯ ನೋಡಿ ಕಂದ ಶಿಶುವೆ || ೪ ||
ಸೋಮ ಸೂರ್ಯ ನಾಳದಲ್ಲಿ ಧ್ಯಾನ ಮಾಡಿ
ಗ್ರಾಮಮೂರರ ಮಧ್ಯದಲ್ಲಿ ನಿಂದು
ಸೀಮೆಯನು ದಾಂಟಿ ನಿಸ್ಸಿಮ ಸಂಗಯ್ಯನೊಳು
ಏಕವಾದ ಚೆನ್ನಬಸವಣ್ಣ ಶಿಶುವೆ || ೫ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”