Previous ನುಡಿಯಲಾಗದಿನ್ನು.... ಮೂಗುತಿ ಹೋಯಿತು Next

ಲಿಂಗದೊಳು ಮೆಚ್ಚಿ

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ


ಲಿಂಗದೊಳು ಮೆಚ್ಚಿ ಮನ ಹಿಂಗದಿಹ ಭಾವಸುಖ
ಸಂಗ ಸುಖವಾರಿಗಹುದೋ || ಪ ||

ಎಡೆಗೊಂಡ ಸ್ನೇಹದೊಳು ಬಿಡಲಾರದಿಹ ಮೋಹ
ವಡರಿರ್ದ ರಮಣ ರತಿ ಸುಖಕೆಳಸುವ
ಬಿಡದೆ ಕಡು ತವಕದಲ್ಲಿ ಒಡಗೂಡಿ ಲಿಂಗದಲಿ
ಎಡವರಿಯದಿಹ ಬೆಡಗದೆಂದಿಗಹುದೋ || ೧ ||

ಅಗಲಿದಡೆ ತನುಕರಣ ದಿಗಿಲೆಂದು ಬಗೆಗುಂದಿ
ಮಿಗೆ ಕಂದಿ ಲಿಂಗವನೊಡುಗೂಡುತ
ಝಗಝಗಿಸುತಿಹ ಬೆಳಗಿನೊಳು ನಿಂದು ಮನಮಗ್ನ
ವಗಲಲಾರದೆ ಇರುವುದೆಂದಿಗಹುದೋ || ೨ ||

ದಿವರಾತ್ರೆ ಎನ್ನದೆನೆ ಹಳಚದಿಹ ನಟ್ಟಾಲಿ
ಶಿವಲಿಂಗದೊಳಗೆ ನಿಂದಾನಂದವ
ಸವಿಸವಿದು ನಿಷ್ಠೆ ಪರವಶನಾಗಿ ಎಚ್ಚರದ
ಅವಿರಳಾನಂದದಿರವೆಂದಿಗಹುದೋ || ೩ ||

ಸಂಚಲಿಸುತಿಹ ಮನ ಪ್ರಪಂಚುಗಳನತಿಗಳೆದು
ಚಿಂತೆ ನಿಶ್ಚಿಂತೆ ಎಂಬುಭಯವಳಿದು
ಮಿಂಚು ತ್ರಿಜಗವನವಗವಿಸಿ ತೋರಿ ನಿಂದಂತೆ
ಪಂಚಾನನ ಕರುಣವೆಂದಿಗಹುದೋ || ೪ ||

ಘನ ಮಹಾಲಿಂಗದೊಳು ನೆನಹಳಿದು ಮನಕೂಡೆ
ಅನುವರಿದು ತನುಕರಣ ಹೃದಯದೊಳಗೆ
ಘನ ಗುರು ಚನ್ನಮಲ್ಲೇಶ ನಿಮ್ಮೊಳಗೊಂದಿ
ಅನುದಿನವು ಬಿಡದೆ ಬೆರಸುವೆನೆಂದಿಗೆ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ನುಡಿಯಲಾಗದಿನ್ನು.... ಮೂಗುತಿ ಹೋಯಿತು Next