Previous ಜೋ ಜೋ ಎನ್ನ ಪರಮಹಂಸ ದಾಸೋಹವ ನೋಡಲೆಂದು Next

ಆವಾಶ್ರಯದಲ್ಲಿ ಜನಿತನಾದಡೇನು

ರಚನೆ: ಶ್ರೀಗುರುಮಾತೆ ನೀಲಮ್ಮತಾಯಿ (ನಿಲಾಂಬಿಕೆ)


ಆವಾಶ್ರಯದಲ್ಲಿ ಜನಿತನಾದಡೇನು
ಪೂರ್ವವಳಿದು ಪುನರ್ಜಾತನಾದ ಶರಣನು? || ಪ ||

ಭೂತಾಡಿಗಳೈದು ಕೂಡಿದ ತನುಗುಣದ
ಭ್ರಾಂತನಳಿದು ಗುರುಕರುಣಿಸೆ ಪೂರ್ವ ಕರ್ಮದ
ಪಾತಕ ಲಿಪಿಯ ತೊಡೆದು, ಪುನರ್ಜಾತರನೆನಿಸಲು
ಆತನೆ ಸರ್ವಾಂಗ ಶುದ್ಧ ಲಿಂಗದೇಹಿ || ೧ ||

ಕುಲಸೂತಕ ಛಲಸೂತಕ ಮನಸೂತಕ ಹಲವು ಕರ್ಮ ಜಾಡ್ಯ ಜನ್ಮಭಾವಸೂತಕ ಹೊಲೆ ಹೊದ್ದಲಿಕ್ಕಾಗದೆಂಬ ನೆಲೆಯನರಿದು
ತಿಳಿದು, ಪೂರ್ವಭಾವವಳಿದು ಉಳಿದ ನಿತ್ಯನು || ೨ ||

ಕ್ಷೀರದಿಂದಾದ ತುಪ್ಪ ಕ್ಷೀರವಪ್ಪುದೆ?
ನೀರೊಳಾದ ಮುತ್ತು ಮರಳಿ ಉದಕವಪ್ಪುದೆ?
ಮೀರಿ ಪೂರ್ವ ಕರ್ಮವನ್ನು ಹರಿದ ಭಕ್ತಗೆ
ಬೇರೆ ಮತ್ತೆ ಜನ್ಮವುಂಟೆ ಲಿಂಗವಲ್ಲದೆ? || ೩ ||

ಲಿಂಗದಿಂದಲಂಗಭಾವ ಚಿಹ್ನವಳಿದು
ಜಂಗಮ ಪ್ರಸಾದದಿಂದಲಂತರಂಗದ
ಭಂಗ ಹಿಂಗಿ ಒಳಗು ಹೊರಗು ಶುದ್ಧವಾದ
ಲಿಂಗದೇಹಿಯಾದ ಮಹಿಮಂಗಿಲ್ಲ ಸೂತಕ || ೪ ||

ಬಂದ ಬಟ್ಟೆಯಳಿದು ಲಿಂಗ ಸುಖದ ಪಥದಲ್ಲಿ
ಮುಂದವರಿದು ಭಾವಶುದ್ಧವಾಗಿ ಚರಿಸುತ
ಸಂದು-ಶಂಕೆಯಳಿದ ನಿಜದೊಳೊಂದಿ ಬೆರಸಿದಾ
ನಂದಮಯನು ಸಂಗ, ನಿಮ್ಮ ಶರಣನನುಪಮ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಜೋ ಜೋ ಎನ್ನ ಪರಮಹಂಸ ದಾಸೋಹವ ನೋಡಲೆಂದು Next