Previous ಎಂದಿಗಪ್ಪುದೋ ಕಾಯಮೋಹವನ್ನು ಮರೆ Next

ಸಿರಿಯು ಕನಸಿನಂತೆ

ಭೋಗಷಟ್ಪದಿ

ಧರೆಯ ಭೋಗವನ್ನು ಮೆಚ್ಚಿ
ಹರನ ಮರೆದು ಕೆಡಲು ಬೇಡ
ಧರೆಯ ಭೋಗ ಕನಸಿನಂತೆ ಕೇಳು ಮಾನವ || ಪ ||

ತಿರುಕನೋರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಯೊರಗಿರುತ್ತಲೊಂದು ಕನಸ ಕಂಡನೆಂತೆನೆ
ಪುರದ ರಾಜ ಸತ್ತನವಗೆ
ವರಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು || ೧ |

ಬಿಡಲು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ಪೆವೆಂದು ಬಿಡಲು ಅಲ್ಲಿಯೆ
ಒಡನೆ ಬಂದು ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು || ೨ ||

ಪಟ್ಟ ಕಟ್ಟಿಯವಗೆ ನೃಪರು
ಕೊಟ್ಟರಖಿಳ ಕನ್ನೆಯರನು
ನೆಟ್ಟನವನು ರಾಜ್ಯವಾಳ ಕನಸಿನಲ್ಲಿಯೆ
ಹೆಟ್ಟುಗೆಯರ ಕೂಡಿ ರತಿಯು
ಹುಟ್ಟಿ ಸುಖದೊಳಿರು ತಲವಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದವಾಗಲೆ || ೩ ||

ಓಲಗದಲಿ ಇರುತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ
ಲೋಲನಾಗಿ ಇರುತ ನೆನೆದ
ಕೇಳು ಮಂತ್ರಿ ಸುತರುಗಳಿಗೆ
ಬಾಲೆಯರನು ನೋಡಿ ಮದುವೆ ಮಾಡಬೇಕೆಲೈ || ೪ ||

ನೋಡಿಬನ್ನಿರೆನಲು ಜೀಯ
ನೋಡಿಬಂದವನಲು, ಅವರು
ಮಾಡು ಲಗ್ನ ಮಂಟಪದೊಳು ಸಕಲ ಕಾರ್ಯವ
ಗಾಢವಾದ ಸಂಭ್ರಮಗಳ
ಮಾಡುತಿರ್ದ ಮದುವೆಗಳನ್ನು
ಕೂಡಿದಖಿಳ ರಾಯರುಗಳು ಮೆಚ್ಚುವಂದದಿ || ೫ ||

ಧನದ ಮದವು ರಾಜ್ಯಮದವು
ವನಿತೆಮದವು ಸುತರ ಮದವು
ಜನಿತವಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ನೃಪರ ದಂಡು
ಮನೆಯ ಮುತ್ತಿದಂತೆಯಾಗಿ
ಕನಸು ಮಾಣುತಿದ್ದು ಹೆದರಿ ಕಣ್ಣು ತೆರೆದನು || ೬ ||

ಮೆರೆಯುತಿರ್ದ ಭಾಗ್ಯವೆಲ್ಲ
ಹರಿದು ಹೋಯಿತೆಂದು? ತಿರುಕ
ಮರಳಿ ನಾಚುತಿರ್ದ ಮರುಳನಂತೆಯಾಗಲೆ
ಸಿರಿಯು ಕನಸಿನಂತೆಯೆಂದು
ಅರಿದು ಷಡಕ್ಷರಿಯ ವರನ
ಹರುಷದಿಂದ ಭಜಿಸು ನಿತ್ಯಸುಖವು ತಪ್ಪದು || ೭ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಎಂದಿಗಪ್ಪುದೋ ಕಾಯಮೋಹವನ್ನು ಮರೆ Next