Previous ಪರಮಾತ್ಮ ನಿಶ್ಚಯನಿರುವ ಸತ್ಯ ಸದಾಚಾರ Next

ಶಿವ ಜೀವರು ಎಂದೆರಡಿಲ್ಲಾ

*

ರಚನೆ: ಶ್ರೀ ಶಿವರಾಮ ಶಾಸ್ತ್ರಿಗಳು


ಶಿವ ಜೀವರು ಎಂದೆರಡಿಲ್ಲಾ ಪರ
ಶಿವಮಯವೇ ಈ ಜಗವೆಲ್ಲಾ
ಭವಕಾನನವನು ದಹಿಸುವ ಮಂತ್ರವ
ಭುವನದಿ ಗುರುಪುತ್ರನೆ ಬಲ್ಲಾ || ಪ ||

ದಾನವ ಮಾಡಿದರೇನುಂಟು ಬರಿ
ಮೌನದೊಳಿರ್ದೊಡದೇನುಂಟು
ಜ್ಞಾನದಿ ವಸ್ತುವನರಿತೊಡೆ ಸಾಕು-
ಪಮಾನಕೆ ಸಿಲುಕಿದ ಸುಖಮುಂಟೂ || ೧ ||

ನದಿಯೊಳು ಮುಳುಗಿದರೇನುಂಟು ಬಳಿ
ಕದರೀ ನಡುಗುವ ಛಳಿಯುಂಟು
ಸದಮಲವಸ್ತುವೆ ತಾನೆಂದರಿತೊಡೆ
ಅದು ನಿತ್ಯಾನಂದದ ಗಂಟೂ || ೨ ||

ವೇದಗಳೋದಿದರಲ್ಲೇನು ಬಿಳಿ
ಬೂದಿಯ ಬಳಿದರು ಯಮ ಬಿಡನು
ಭೇದವು ತೋರದೆ ವಿಮಲಜ್ಞಾನವ
ಸಾಧಿಸಿದರೆ ಶಿವನಾಗುವನು || ೩ ||

ಉತ್ತಮ ಕರ್ಮವ ಗೈದವರು ಕೇಳ್
ಮತ್ತೀ ಧರಣಿಗೆ ಬರುತಿಹರು
ಸತ್ಯದ ಮರ್ಮವನರಿತಿಹ ಧೀರರು
ನಿತ್ಯಾನಂದದಿ ಬೆರೆಯುವರು || ೪ ||

ದೇಶವ ಸುತ್ತಿದರೇ ನಿಲ್ಲ ಭವ
ಕಾಶಿಯೊಳಿದ್ದರು ಬಿಡದಲ್ಲ
ಈ ಸಕಲವು ಪುಸಿಯೆಂದರಿತೊಡೆ
ಜಗದೀಶನೆ ತಾನಾಗುವನಲ್ಲಾ || ೫ ||

ನಂದನರಿಂದಲು ಭವ ಕೆಡದು ಸಂಧ್ಯಾ
ವಂದನೆ ನಿಜಮುಕ್ತಿಯ ಕೊಡದು
ಕುಂದದೆ ಶಿವ ತಾನೆಂದರಿತೊಡೆ
ಆನಂದವು ಬೇಡೆಂದರು ಬಿಡದೂ || ೬ ||

ಉರುತರ ಕರ್ಮವ ಗೈದವರೂ ಕೇಳ್
ಪರಿ ಪರಿ ಯಜ್ಞದ ದೀಕ್ಷಿತರು
ಮರವೆಯು ತೋರದೆ ನಿಜಸುಖದೊಳಗಿಹ
ಗುರುಪುತ್ರರ ಪದಕಿಂಕರರೂ || ೭ ||

ಘಂಟೆಯ ಬಡಿದರು ಗುಡಿಯಲ್ಲಿ ಯಮ
ಭಂಟರು ಬೇರೆ ಬಿಡರಿಲ್ಲಿ
ಕಂಟಕವೆನಿಸಿದ ಮಾಯೆಯ ಕಳೆದರೆ
ಗಂಟಾಗುವುದದು ಪರದಲ್ಲಿ || ೮ ||

ಎರಡೆಂಬುವನಿಗೆ ಕಡೆಯಿಲ್ಲ ಈ
ಧರಣಿಗೆ ಬರುವುದು ಬಿಡದಲ್ಲ
ಗುರುಶಂಕರನಡಿಗಳ ಪಿಡಿದವರಿಗೆ
ಮರಳೀ ಸಂಸ್ಕೃತಿ ಭಯವಿಲ್ಲಾ || ೯ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಪರಮಾತ್ಮ ನಿಶ್ಚಯನಿರುವ ಸತ್ಯ ಸದಾಚಾರ Next