ಹೇವವ ನಿಕ್ಕಲಾರೆ ಲಿಂಗವ ನಾನು ಹೇವವನಿಕ್ಕಲಾರೆ
ಭಾವಿಸಿ ಎನ್ನ ಮನವೆಂಬ ವಧುವನು
ಜಾವ ನೀನಾಳಲಾರೆ || ಪ ||
ಶಿಖಂಡಿಗಳ ಕೈಯಲ್ಲಿ ಕೊಲ್ಲಿಸಿಗೊಂಡು
ಮುಖಭಂಗಿತ ನೀನಾದೆ
ಸಖಿಯಳಂಜದೆ ನಿನ್ನ ಶಿರವನೇರಿದ ಮೇಲೆ
ಸುಖ ನಿನಗೆಲ್ಲಿಯದೊ || ೧ |
ಹಿರಿಯತನಗಳೆಂಬವು ನಿಮ್ಮೊಳು
ಕಿರಿದಾಗಿ ಹೋಯಿತಲ್ಲ
ಕೆರವುಗಾಲಲಿ ತಲೆಯನು ಬೇಡನೊರಸಲು
ಪರಿಹಾಸ್ಯವಾಯಿತಲ್ಲ || ೨ ||
ಏಣಾಂಕಧರ ಲಿಂಗವೆ ನೀ ಹೋಗಿಯಾ
ಬಾಣಾಸುರನ ಬಾಗಿಲ
ಕೇಣ ಸರವನರಿಯದ ಕಾಯ್ದೆ ಧರೆಯೊಳು
ಊಣೆಯವು ಬಂದಿತಲ್ಲ || ೩ ||
ಹೆಗಲ ಸಂಚಿಯನೆ ಹೊತ್ತು ಕುಂಟಣಿಯಾಗಿ
ಹಗಲಿರುಳೆಡತಾಕಿದೆ
ಜಗದೊಳು ಹಿರಿಯತನವು ನಿಮಗುಚಿತವೆ
ನಗೆಗೆಡೆಯಾಯಿತಲ್ಲಾ || ೪ ||
ಜಿನುಗುವ ಮನಕಾರದೆ ನಿಮಗೆ ನಾನು
ಕನಲಿ ಹೇವವನಿಕ್ಕಿದ
ಮುನಿಸು ಬೇಡಯ್ಯ ಷಡಕ್ಷರಿಲಿಂಗವೆ
ಮನವ ನಿಮ್ಮೊಳಗಿರಿಸು || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ