*
ರಚನೆ: ಧರ್ಮಗುರು ಬಸವೇಶ್ವರ
ಗುರುಪಾದ ಸೇವಾತುರ ನೃತ್ಯನು ಸಂ
ಸಾರ ಭವಬಂಧನ ವಿರಹಿತನು || ಪ ||
ಗುರು ಪರಿಚರ್ಯವೆ ಸಕಲ ಜಪಂಗಳು
ಗುರು ಪರಿಚರ್ಯವೆ ಸಕಲ ತಪ
ಗುರು ಪರಿಚರ್ಯವೆ ಸದ್ಯೋನ್ಮುಕ್ತಿ
ಗುರು ಸನ್ನಿಹಿತ ಪರಮ ಸುಖವು || ೧ ||
ಅರಸಲೇಕೆ ಚತುರ್ವಿಧ ಪದಂಗಳ
ಗುರು ಚರಣದೊಳಗೆ ಮನ ಮಗ್ನನಾಗಿ
ಸಚ್ಚರಿತ್ರದೊಳಗೆ ಗುರುಭಕ್ತಿಯನಳ
ವಡಿಸಿದಡಲ್ಲಿಯೇ ಮುಕ್ತಿನೋಡಾ || ೨ ||
ಗುರುವಿನೊಳದಿರುತ್ತರವನರಿಯದೆ
ತನು ಕರಗಿ ಕೊರಗಿ ನೃತ್ಯಾಚಾರ
ಸ್ಥಲ ಕರಿಗೊಂಡು ಗುರು ನಿರೂಪವನು
ಮಾಡಿದಡಲ್ಲಿಯೆ ಮುಕ್ತಿನೋಡಾ || ೩ ||
ಗುರುಮೂರುತಿಯೆ ಪರಬ್ರಹ್ಮೋತ್ತರ
ಗುರು ಪೂಜೆಯ ಸರ್ವಾಚಾರ ಸ್ಥಲ
ನಿರುತವೆಂದು ಗುರುವನು ನೆರೆನಂಬಿ
ದಾತನೆ ಪರಮಸುಖಿ || ೪ ||
ಒಂದು ದಿನವು ಗುರುಸೇವೆಯ ಮಾಡಲು
ಹಿಂದಣ ಜನ್ಮಾಂತರ ಕೋಟಿಗಳು
ಒಂದೇ ನಿಮಿಷದಲಳಿವವು ಕೂಡಲ
ಸಂಗಯ್ಯ ನಿಮ್ಮಾಣೆ || ೫ ||
- ಶ್ರೀಗುರು ಬಸವಣ್ಣನವರು
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”