ಎಳೆ ಮುತ್ತಿನ ನವರತ್ನದ
ಥಳಥಳಿಸುವ ನೀಲ ಪವಳ ಪಚ್ಚೆಯ ಮಳಲಿಂ
ಧಳದಳ ಘುಳುಘುಳು ನಾದದ
ಹೊಳೆಯೊಳಗನವರತ ಲಿಂಗ ಮಜ್ಜನಗೈಯ್ಯಂ || ೧ ||
ಶಶಿಕಾಂತದ ಪಾಸರಿಯೊಳ್
ಹೊಸ ವಜ್ರದ ಗುಂಡು ಬಂಡೆ ತುರುಗಿದ ಗಿರಿಯಿಂ
ದೊಸರುವ ನಿರ್ಝರ ಜಲದಿಂ
ಶಶಿಕಳೆಯಂ ಧರಿಸಿದಭವಗೆ ಮಜ್ಜನಗೈಯ್ಯಂ || ೨ ||
ಗಗನವನಡರುವ ಗಿರಿಯೋ
ಳ್ಮಿಗೆ ಬೆಳೆದಿಹ ಗುಲ್ಮಲತೆಯ ವೃಕ್ಷದ ನೆಳಲೊಳ್
ಸೊಗಸುವ ಮಡು ಡೊಣೆ ಜಲದಿಂ
ಮಿಗೆ ಮನದಣಿವಂತ ಲಿಂಗ ಮಜ್ಜನಗೈಯ್ಯಂ || ೩ ||
ಕೆರೆ ತೊರೆ ಸರಬೆಂಚೆಗಳಾ
ವರತೆಗಳಿಂ ಕೂಪ ಕೊಳನ ನಿರಲ ಜಲದಿಂ
ಸರಸಿಜದೆಸಳರ್ಥ್ಯಗಳಿಂ
ಹರನಿಗೆ ಪುರಹರನಿಗೊಲಿದು ಮಜ್ಜನಗೈಯ್ಯಂ || ೪ ||
ಸುತ್ತೋತ್ತಿ ಬೆಳೆದ ಬಿಲ್ವ
ಕತ್ತರಿಸಿಯೇ ಕಾತು ತಳಿತು ತಂಪಿನ ವನದೊಳ್
ಚಿತ್ತಜವೈರಿಯ ಚರಣವ
ನರ್ತಿಯೊಳಾ ಪತ್ರಿಯಿಂದ ಪೂಜಿಪೆನೊಲವಿಂ || ೫ ||
ಸೊಂಪಿನ ನುಂಪಿನ ಝಂಪಿನ
ಗಂಪಿನ ಸಂಪಿಗೆಯ ವನದ ತಂಪಿನ ನೆಳಲೊಳ್
ಕಂಪಿನ ಸಂಪಿಗೆಯರಳಿಂ
ಬಿಣ್ಪಿನ ಚಲುವಂಗದವನ ಪೂಜಿಪೆನೋಲವಿಂ || ೬ ||
ಜಾತಿ ಸುಪಾಟಲಿ ವೃಕ್ಷ
ವ್ರಾತಂ ಜೋತೊರಗಿಕಾತು ಪೂತಿಹ ವನದೊಳ್
ಮಾತುಳ ಕುಸುಮದಿಂ ಬಿಡದೆ
ಭೂತೇಶನ ಚರಣಯುಗವ ಪೂಜಿಪೆನೋಲವಿಂ || ೭ ||
ಭೃಂಗಂ ಬಳಸದ ಪೂವಿನ
ಶೃಂಗಾರದ ವನಗಳಲ್ಲಿ ವರಕುಸುಮಗಳಿಂ
ಸಾಂಗಮುಮಾಗಿ ಷಡಕ್ಷರ
ಲಿಂಗವನನವರತ ಬಿಡದ ಪೂಜಿಪೆನೊಲವಿಂ || ೮ ||
ಈ ಶಿವಪೂಜಾಷ್ಟಕಮಂ
ಓಸರಿಸದೆ ಬರೆದು ಓದಿ ಪಠಿಸಿದವರ್ಗ೦
ಈಶನು ತನ್ನಯ ಪುರದೊಳ್
ಭಾಸುರಗಣಪದವನಿತ್ತು ರಕ್ಷಿಪನೊಲವಿಂ || ೯ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ