ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ
ಮೂಗುತಿ ಹೋಯಿತು ಮುರುಕಿಸುವನಕ
ಮೂಗುತಿ ಹೋಯಿತ್ತು || ಪ ||
ಅಣಕವನಾಡುತ ಐವರ ಕೂಡಿ
ಸೆಣಸುತ ನಾಲ್ವರ ಕೈವಿಡಿದು
ಮಣಕದಿಂದಲಿ ಆರು ಮಂದಿಯ ಕೂಡಿ
ಉಣಕುಳಿತಲಿ ಮೈಮರಿದೆನಕ್ಕ || ೧ ||
ಅಕ್ಕರಿಂದಲೆ ಹತ್ತು ಮಂದಿಯು ಕೂಡಿ
ನಕ್ಕರು ಕೆಲೆದರು ತಮತಮಗೆ
ಮಕ್ಕಳಾಟಿಕೆಯ ನಾನಾಡುವ ಹೊತ್ತಿಗೆ
ಇಕ್ಕುತಲಿ ಮೈ ಮೆರೆದೆನಕ್ಕ || ೨ ||
ಅತ್ತೆ ಮಾರುದ್ದರುವೆ ಕೊಡಲಾಗಿ
ಸುತ್ತೇಳು ಕೇರಿಯವರು ಸೆಣಸುವರು
ಚಿತ್ತವಲ್ಲಭ ಚನ್ನಮಲ್ಲೇಶನ ಕೂಡಿ
ಮುತ್ತೈದೆಯಾಗೆನ್ನನಿರಗೂಡರಕ್ಕ || ೩ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”