ಬಸವೇಶನೆ ಬಸವರಾಜನೆ |
ಬಸವಣ್ಣನೆ, ಬಸವ ತಂದೆ, ಬಸವ ಕೃಪಾನಿಧಿ ||
ಬಸವ ಪರಮೇಶ್ವರೀಶ್ವರ |
ಬಸವ ಪ್ರಮಥಾದಿ ದೇವ ರಕ್ಷಿಸು ಬಸವ ||
ಸಿದ್ಧರಾಮೇಶ್ವರರು ರಚಿಸಿರುವ ಅಷ್ಟಾವರಣ ತ್ರಿವಿಧಿ
1. ಶ್ರೀಗುರುವೆ ಶ್ರೀಗುರುವೆ ಭವಪಾಶದೂರನೆ
ಶ್ರೀಗುರುವೆ ಆದಿ ಅಚಿತರಶೂನ್ಯನೆ
ಶ್ರೀಗುರುವೆ ಆನಂದಮಯರೂಪ ಗತಿಯೆಂ-
ದಾನಕವನೈದುವೆನು ಯೋಗಿನಾಥ
2. ಪರವೆ ಪರಬ್ರಹ್ಮವೇ ಗುರುವೆ ಗುರುತತ್ವವೇ
ನಿರುತ ನಿರ್ಮಲಜ್ಞಾನ ನಿತ್ಯರೂಪ
ನಿರತಿಶಯ ನಿರವಧಿಕ ನಿರ್ಭಿನ್ನ ನಿರ್ದ್ವಂದ್ವ
ಗುರುವೆ ರಕ್ಷಿಸು ಪರವೆ ಯೋಗಿನಾಥ.
3. ಪರಕೆ ಪರಬ್ರಹ್ಮವೆ ಸುರತರುವಿನಾಗರವೆ
ಕರುವಿಟ್ಟು ಎರಕಾದ ನಿತ್ಯಬೆಳೆಯೆ
ಪರಕೆ ಪರಬ್ರಹ್ಮವೇ ನಿತ್ಯ ನಿರ್ಮಲರೂಪ
ಸಲಹಯ್ಯ ಶ್ರೀಗುರುವೆ ಯೋಗಿನಾಥ.
4. ಗುರುಲಿಂಗವೇ ಪರಮ ಜ್ಞಾನಸಂಬಂಧಿಯು
ಗುರುಲಿಂಗವೇ ಪರಮ ತತ್ವತಾನೆ
ಪರಮ ಪದವನು ತೋರಿ ರಕ್ಷಿಪ ಗುರುವಿನ
ಚರಣಕ್ಕೆ ಶರಣಯ್ಯ ಯೋಗಿನಾಥ.
5. ಗುರುವೆ ಪರಮಾನಂದ ಗುರುವೆ ಮುಕ್ತಾನಂದ
ಗುರುವೆ ತತ್‌ಪ್ರಸಾದ ರೂಪವಾಗಿ
ಗುರುವಿನಡಿಗಳ ನಂಬಿ ಮರೆಹೊಕ್ಕೆ ನಿಮ್ಮಡಿಗೆ
ಶರಣಾಗು ಎಮ್ಮಯ್ಯ ಯೋಗಿನಾಥ.
6. ಲೋಕವೀರೇಳುವನನೇಕ ಪರಿಯಿಂ ಭವಿಸಿ
ಆಕಾರದಿಂದಾನು ನಿತ್ಯವೈದಿ
ನಿರಾಕಾರ ಸಂಗಮದ ಸಾಯುಜ್ಯಪದ ಮೀರಿ
ಜಾತ ಲಿಂಗೈಕ್ಯಗುರು ಯೋಗಿನಾಥ.
7. ನಾದಬ್ರಹ್ಮಾಂಡದಿಂದಾದಿಯಪ್ಪುದು ನಿನ್ನ
ನಾದ ಬ್ರಹ್ಮಾಂಡದಲಿ ಸಕಲವೆಲ್ಲ
ಸಾದಾಖ್ಯಚಿತ್ತವನು ಶುದ್ಧಮಾಡೈ ಗುರುವೆ
ಮೂದೇವರೊಡೆಯನೆ ಯೋಗಿನಾಥ.
8. ಗುರುತನುವೆ ಮಹದೇವ ಮನದೊಡೆಯನೇ ನೀನು
ಘನಪಾಶವನು ಹರಿಯಿಸಯ್ಯ ತಂದೆ
ಮನದ ಮಲಿನವ ಕಳೆದು ಕರುಣ ಕಾರುಣ್ಯದ
ಪದರಸದೊಳದ್ದಯ್ಯ ಗುರು ಯೋಗಿನಾಥ.
9. ತನುಮನದ ಮಲಿನವನು ಕಳೆದು ಎನ್ನುವ ನಿಮ್ಮ
ಘನನಾಮ ಪದದೊಳಗಿರಿಸು ತಂದೆ
ಘನಪಾಶದೂರ ಶ್ರೀಗುರುವೆ ಮನ್ನಣೆಯಿಂದ
ಸಲಹು ಎನ್ನನು ಸಿದ್ಧ ಯೋಗಿನಾಥ.
10. ಎನ್ನ ಘನಪಾಶವು ನಿನ್ನ ಬೆರಸಲೀಯ
ದೆನ್ನ ಎಳತಟ ಮಾಡಿ ಕಾಡುತಿಹುದೈ
ಎನ್ನ ಗುರು ನೀನಾಗಿ ಎನ್ನ ಹಾನಿಯು ವೃದ್ಧಿ
ನಿನ್ನನೆಯುವುದಯ್ಯ ಯೋಗಿನಾಥ.
11. ಸಂಸಾರಸಾಗರಕೆ ಹಡಗು ನೀನೇ ಗುರುವೆ
ತಡಿಗೆ ಚಾಚೆ ಎನ್ನ ನಿಷ್ಕಲದಲಿ
ಕರುಣ ಕಾನನ ದೊಳಗೆ ಈಡಾಡದಿರ್ದಡೆ
ಕೊರತೆ ನಿನಗಕ್ಕಯ್ಯ ಯೋಗಿನಾಥ.
12. ಮುಂದುವರಿವಾ ಮನಕೆ ಕುಂದದೆ ಶಿವಪದದ
ಅಂದವನು ತೋರಯ್ಯ ಪರಮ ಗುರುವೆ
ಕುಂದದೆ ನಿಮ್ಮಡಿಗೆ ಮರೆಹೊಕ್ಕೆ ಶ್ರೀಗುರುವೆ
ತಂದೆ ನೀ ಸಲಹಯ್ಯ ಯೋಗಿನಾಥ.
13. ಎರಡೆಂಟನತಿಗಳೆದು ಮನವ ಮಧ್ಯದಲಿರಿಸಿ
ನೆನಹಿನ ಜ್ಞಾನ ನಯನದಲಿ ನಿಮ್ಮ
ಘನಪ್ರಭೆಯನೀಕ್ಷಿಸುವ ಪದವೀವುದೈ ಗುರುವೆ
ವಿಮಲ ಶುದ್ಧಾತ್ಮನೇ ಯೋಗಿನಾಥ.
14. ಇದಿರಿಟ್ಟು ಕಾಬೊಂದು ಸದಮಲಜ್ಞಾನದ
ಉದಯ ಬ್ರಹ್ಮಾಂಡವೆಂಬದ್ರಿಯಲ್ಲಿ
ಮುದವೆತ್ತು ಮೋಹಿಪ ಪದವ ನೀ ಕರುಣಿಸೈ
ಸದಮಲ ಸದ್ಗುರುವೆ ಯೋಗಿನಾಥ.
15. ಲಿಂಗಾಂಗಸಮರಸದ ಸಂಗವನರಿದೊಂದು
ಲಿಂಗಾಂಗ ಭಾವವೆಂತುಟು ಗುರುವೆ
ಅಂಗವಾರಕ್ಕಾರು ಲಿಂಗವ ಕರುಣಿಸೈ
ಸಂಗ ಸಮುದಯ ಮೂರ್ತಿ ಯೋಗಿನಾಥ.
16. ಇತ್ತೆರದ ಸೀಮೆಯನು ಹೊತ್ತಿಪ್ಪ ಬ್ರಹ್ಮಾಂಡ
ತತ್ವಮಸಿಯಿಂದತ್ತಲಾದ ಸೀಮೆ
ಮತ್ತೆ ತಮಂಧದಲಿ ಹೊತ್ತು ಹೋಗುತ್ತಿದೆನೆ
ಭಕ್ತಿಯೀಯ್ಕೆ ಗುರುವೆ ಯೋಗಿನಾಥ.
17. ಆನಂದದಾದಿಯಕ್ಷರ ಗುರುವೆ ಶ್ರೀಗುರುವೆ
ಆದ್ಯಂತಶೂನ್ಯ ಶಿವಮಧ್ಯಹೃದಯ
ನಾನಾ ಭವದ ಬೇರ ಮುನ್ನವೇ ಹರಿದಾತ
ತಾನು ನೀನಕ್ಕಯ್ಯ ಯೋಗಿನಾಥ.
18. ಶಿವಭಕ್ತಿ ಶರಧಿಯಲಿ ನೆಲೆಗೊಳಿಸಿದಾತ ಗುರು
ಪರೀಕ್ಷಿಸಿ ಭವವ ಹರಿದಾತ ಗುರುವೈ
ಶ್ರೀಗುರುವೆಂಬ ನಾಮಾಕ್ಷರತ್ರಯದಲ್ಲಿ
ಆನು ಪ್ರಜ್ವಲಿತನ್ಯ ಯೋಗಿನಾಥ.
19. ಅನುಪಮನೆ ಅಪ್ರಮೆಯ ಆನಂದ ನಿತ್ಯನೇ
ಕರುಣಾಕರನೆ ನಿಮ್ಮ ನಾಮದಿಂದ
ಇಹಪರದ ಆನತದ ಸುಖವನರಿದೆನು ಗುರುವೆ
ಕರುಣಾಕರನೆ ಶರಣು ಯೋಗಿನಾಥ
20. ಶ್ರೀಗುರುವೆ ಸಕಲ ಲೋಕಾರಾಧ್ಯ ನೀನೆನ್ನ-
ನಾರಯ್ಡು ಓರಂತೆ ಮಾಡಿದಿರಿಯಯ್ಯಾ
ಗಾರಪ್ಪ ಎನ್ನ ಭ್ರಮಿತಾನಂದಪದವನು
ಗಾರುಮಾಡಿಯೆ ಕಳೆದೆ ಯೋಗಿನಾಥ.
21. ಆನಂದ ಸುಖದಲ್ಲಿ ಹೊಂದುವನ ತಂದೆನ್ನ
ಲಿಂಗಸುಖದಲ್ಲಿ ಕರ ನಿತ್ಯನೆನಿಸಿ
ಮಂಗಳ ಪ್ರಸಾದದಾನಂದ ಪದವಿತ್ತನಿ-
ಸ್ಸಂಗ ಗುರುವಿಂ ಬದುಕಿದೇ ಯೋಗಿನಾಥ.
22. ಶುದ್ಧ ಸಾಹಿತ್ಯವನು ಮಾಡಿದಿರಿ ಗುರು ನೀವು
ಸಿದ್ಧ ಸಾಹಿತ್ಯಕ್ಕೆ ಮತವಿತ್ತಿರಿ
ಪ್ರಸಿದ್ಧ ಸಾಹಿತ್ಯದಾನತವನೈದಿಸಿದ
ಸಿದ್ಧಗುರು ನೀನಯ್ಯ ಯೋಗಿನಾಥ.
23. ಶುದ್ಧಪ್ರಸಾದದಲ್ಲಿ ಸಿದ್ಧಮಾಡಿದೆ ಗುರುವೆ
ಸಿದ್ಧಪ್ರಸಾದದಲ್ಲಿ ನಿತ್ಯನಾದೆ.
ಪ್ರಸಿದ್ಧ ಪ್ರಸಾದದಲಿ ಇದ್ದೆಸೆಗೆಟ್ಟೆನೈ
ಅರ್ಧೇಂದು ಶೇಖರನೆ ಯೋಗಿನಾಥ.
24. ಗುರು ಚರವೆ ಗುರು ಪರವೆ ಗುರು ಇಷ್ಟಲಿಂಗವೆ
ಗುರು ಶುದ್ಧಪ್ರಸಾದ ಪರಂಜ್ಯೋತಿಯೆ
ಕರುಣಾಕರನೆ ಎನ್ನ ತಡಿಗೆ ಸೇರಿಸಿದವನೆ
ಶ್ರೀಗುರುವೆ ಶರಣಯ್ಯ ಯೋಗಿನಾಥ.
25. ಅಘನಾಶನೇ ಗುರುವೆ ಕರುಣ ನಿರ್ಮಳ ನಿಳಯ
ವಿಮಲ ಶುದ್ಧಾತ್ಮನೇ ಗುರುವೆ ಗುರುವೆ
ತನು ಪ್ರಾಣ ಇಷ್ಟಲಿಂಗ ಸಂಬಂಧಮಾಡಿದ
ಕರುಣಾಕರನೆ ಗುರುವೆ ಯೋಗಿನಾಥ.
26, ತನುವೇಳು ಸೀಮೆಯಿಂದನುಮತವು ಆಗಿಪ್ಪ
ತನುವೇಳು ಸೀಮೆಯನುಮತವ ದಹಿಸಿ
ಘನಲಿಂಗಸ್ಥಾಪ್ಯವನು ತನುತ್ರಯದೊಳಗಿರಿಸಿ
ಮನವ ಬೆಳಗುವ ಗುರುವೆ ಯೋಗಿನಾಥ.
27. ಆದಿಯಾಕಾರದಲಿ ಆದ ಚತುಷ್ಟಯವ ಆ-
ಮೋದದಿಂ ಪಿಡಿದು ಆರೇಳರ
ಮೇಲೆಂಟ ಒಂಬತ್ತ ನೆಲೆಗೆ ನಿಲಿಸಿದ ನಿತ್ಯ
ಪರಮ ಗುರುವೇ ಶರಣು ಯೋಗಿನಾಥ.
28. ಇಂತು ಮಾಡಿದನು ಗುರು ಉರುತರಂ ಕೈವಲ್ಯ-
ದಂತೆ ಮಾಡಿದನೆನ್ನ ಪರಮ ಗುರುವು
ನಿಶ್ಚಿಂತ ತತ್ವದಲ್ಲಿ ಇಪ್ಪ ಶ್ರೀಗುರುವನು
ನಿಷ್ಠೆಯಿಂದಲಿ ನೆನೆವೆ ಯೋಗಿನಾಥ.
29, ಉರುತರದ ಕೈವಲ್ಯಪದವನಿ ಗುರುವೆ
ಕರುಣದಿಂ ಸಲಹಿ ಸಾಲೋಕ್ಯಪದವ
ಅತಿಗಳೆದ ಸದ್ಭಕ್ತಿಪದವನಿ ಗುರುವೆ
ಕರುಣಾಕರನೆ ಶರಣು ಯೋಗಿನಾಥ.
30. ನರನ ಪರಿ ತಾನೆತ್ತ ಕರಣ ಕಾನನವೆತ್ತ
ಉರುತರಂ ಕೈವಲ್ಯಪದವತ್ತ
ನರನ ಪರಿಯನು ಮಾದು ಉರುತರಂ ಶ್ರೀರುದ್ರ
ಪದವನಿತ್ತೈ ಗುರುವೆ ಯೋಗಿನಾಥ.
31. ಪರಮೇಶನಿರವೆತ್ತ ನರ ಚರ್ಮಗೃಹವೆತ್ತ
ಪರೀಕ್ಷಿಸಲತಿ ವೀರನಯ್ಯ ಗುರುವೆ
ಆನಂದರೂಪ ಅತಿಶಯ ನಿನ್ನಾಜ್ಞೆಯ ಶಿವನು
ಮೀರಲಾರನು ಗುರುವೆ ಯೋಗಿನಾಥ.
32. ಶೂನ್ಯ ಹೃದಯಾನಂದ ಮಂಟಪದ ಮಧ್ಯದಲಿ
ಅನೇಕ ಕೋಟಿಪ್ರಭೆಯ ತೇಜ ತೇಜ
ಅದು ಗುರುವಿನ ಪಾದದಣುವಿನಾನತ ಪ್ರಭೆಯು
ಕರುಣಾಕರನು ಗುರುವು ಯೋಗಿನಾಥ.
33. ಬಲ್ಲಹನೆ ನಿನ್ನಯ ಸೊಲ್ಲಿನ ಕತದಿಂದ
ಎಲ್ಲ ಕಳೆಗಳೊಳಗೆ ನಿಪುಣನಾದೆ
ಬಲ್ಲಿಹ ಮೋಹ ಮಲಮದವ ವಿದಾರಿಸಿದೆ
ಸಲ್ಲಲಿತ ಗುರುವಾಜ್ಞೆಯಿಂ ಯೋಗಿನಾಥ.
34. ತನು ಮಲತ್ರಯಗಳನು ಸುಟ್ಟಿಗ ಭಕ್ತಿಯ
ಘನ ನಿಧಾನಕ್ಕೆನ್ನ ಪಟ್ಟಗಟ್ಟಿ
ಇಹ-ಪರ ಲೋಕಕ್ಕೆ ಅರಸನ್ನ ಮಾಡಿದ
ಘನ ಗುರುವೆ ನೀನಯ್ಯ ಯೋಗಿನಾಥ.
35. ಗುರುವಿಡಿದು ತ್ರೈಮಲವು ಹರಿದುಹೋಯಿತು ಶಿವನೆ
ಪರವಸ್ತುವನ್ನ ಕರತಳಕೆ ಬಂದು
ಪರಮಪ್ರಸಾದದ ಗಿರಿಯು ಕೈವಶವಾಗಿ
ಗುರುವೆ ನಾ ನೀನಾದೆ ಯೋಗಿನಾಥ.
36. ಗುರುವೆ ಇಹಪರ ಗುರುವೆ ಗುರುವೆ ಕರುಣಾಕರನೆ
ಗುರುವೆ ಶುದ್ಧಾತ್ಮನೇ ನಿರ್ಮಳಾಂಗ
ಗುರುವೆ ಎನ್ನುವನು ನಿನ್ನಂತೆ ಮಾಡಿದ
ಪರಮ ಗುರುವೇ ನೀನು ಯೋಗಿನಾಥ.
37. ಗುರುವೆ ಶ್ರೀಗುರು ಪರಮ ಗುರುವೆ ಕರುಣಾಕರನೆ
ಗುರುವೆ ಶುದ್ಧಾತ್ಮನೇ ನಿರ್ಮಳಾಂಗ
ಗುರುವೆ ಗುರು ಎನ್ನುವನು ನಿನ್ನಂತೆ ಮಾಡಿದ
ಪರಮ ಗುರುವೇ ನೀನು ಯೋಗಿನಾಥ.
38. ಶ್ರೀಗುರುವೆ ಸಕಲಕ್ಕೆ ಶ್ರೀಗುರುವೆ ನಿಷ್ಕಲಕೆ
ಶ್ರೀಗುರುವೆ ಸಕಲ ತತ್ವಾರ್ಥಕೆಲ್ಲ
ಶ್ರೀಗುರುವೆ ಓರಂತೆ ಆರೈದು ಸಲಹಿದಡೆ
ಆನು ನೀ ನಾದೆನೈ ಯೋಗಿನಾಥ.
39. ನೀರ ಕೊಟ್ಟಣದೊಳಗೆ ನಿರವಯಲ ತಂದಿರಿಸಿ
ತೋರಿದಿರಿ ಒಂದೊಂದು ಸೋಜಿಗವನು
ಆರೂಢ ಗುರುವಿನ ಉಪದೇಶದಿಂದವೆ
ಆನು ನೀನಾದೆನೈ ಯೋಗಿನಾಥ.
40. ಜವನಿಕೆಯ ಮರೆಯಲ್ಲಿ ನೆಳಲು ಕುಣಿವುತೈತೆ
ನೆಳಲ ನೀಕರಿಸುವರೊಬ್ಬರಿಲ್ಲ
ಕರುಣಾಕರನೆ ಗುರುವೆ ನೆಳಲ ಬೊಮ್ಮವೆ ನೀನು
ಅರಿದೆಯಾಗಿ ಆನುಳಿದೆ ಯೋಗಿನಾಥ. ಜಾಹಿOGES
41. ಉಳಿದ ಫಲದಿಂದಾನು ಪ್ರಳಯಕ್ಕೆ ಹೊರಗಾದೆ
ನಳನಳಿಸುತಿದ್ದೆನೈ ನಿನ್ನ ಪದದ
ನುಡಿಯ ಬ್ರಹ್ಮದ ಒಳಗೆ ಅಕ್ಷರಾಂಕನುವಾದೆ
ಶಿವನೆ ಗುರುವಾದ ಫಲ ಯೋಗಿನಾಥ.
42. ಭವಪಾಶದೂರ ಗುರು ಕರುಣಹಸ್ತನು ಗುರುವು
ಶಿಷ್ಯಕಾರಣ ಶಿವನು ಪರಮ ಗುರುವೈ
ನಾನಾ ಮಹಾ ಲೋಕದಿಂದತ್ತಲಾದುದನು
ತೋರಿಹೋದಾತ ಗುರು ಯೋಗಿನಾಥ
43. ಐದು ಸೀಮೆಯು ತಾನು ಪಾತಾಳದಿಂದತ್ತ
ಹದಿನಾಲ್ಕು ಲೋಕದಿಂದುತ್ತಮಾಂಗ
ವಿದಳ ತ್ರೈದಳದಲ್ಲಿ ಒದಗಿರ್ದ ಜ್ಯೋತಿಯನು
ಪ್ರಬಲಮಾಡಿದ ಗುರುವೆ ಯೋಗಿನಾಥ.
44. ಶ್ರೀಗುರುವೆ ನಿಮ್ಮಯ ಶ್ರೀ ಹಸ್ತದೊಳಗೊಂದು
ನಿರೀಕ್ಷಣೆಯ ಮಾಡಲೆ ಭವಿಸುತಿರ್ಪ
ಜ್ಞಾನಪ್ರಕಾಶರಂಜನೆಯ ಆದ್ಯಂತದಲ್ಲಿ
ಶೂನ್ಯಲಿಂಗನು ದೃಷ್ಟ ಯೋಗಿನಾಥ.
45. ವಳಯ ಹದಿನಾಲ್ಕರೊಳು ಬೆಳಗುತಿಹ ನಿಃಕಳದ
ನಿಳಯ ನಿರ್ಮಳ ಜ್ಯೋತಿ ನಿನ್ನ ಹವಣ
ಅರಿಯಲಾರಿಗೆ ತಾನು ಅಳವಲ್ಲ ಶ್ರೀಗುರು
ಕರುಣದಿಂದರಿದೆನೈ ಯೋಗಿನಾಥ.
46. ಆದಿಯಾಧಾರದಲಿ ಆದಿಲಿಂಗವು ಇರಲು
ಆ ಲಿಂಗವನು ಹೆತ್ತ ಮಾತೆ ಗುರುವೈ
ಶ್ರೋತೇಂದ್ರಿಯಂಗಳಲಿ ಭವಿಸಿ ನಿಷ್ಕಲನಾದ
ಜಾತಶಿವಜನನವೈ ಯೋಗಿನಾಥ.
47. ಸ್ಪಟಿಕಭೂಷಣ ನಿಮ್ಮ ನಿಟಿಲಾಕ್ಷತತ್ವದಲಿ
ಒದವಿ ಮೂಡಿತ್ತಯ್ಯ ಸಕಲ ಲೋಕ
ಇಂತಪ್ಪ ಘನತರದ ನಿಶ್ಚಿಂತ ಲಿಂಗವನು
ತಂದುಕೊಟ್ಟಾತ ಗುರು ಯೋಗಿನಾಥ.
48. ಲೋಕ ಹದಿನಾಲ್ಕುವನನೇಕ ದೈವಂಗಳನೊಂ-
ದಾಕಾರ ಕಿಂಚಿತನು ಹುಟ್ಟಿಸಿದನು
ಇಂತಪ್ಪ ಘನಲಿಂಗ ತಂದು ವಶಮಾಡಿದ ನಿ-
ಶ್ಚಿಂತಮಯನೈ ಗುರುವೆ ಯೋಗಿನಾಥ.
49. ಹದಿನಾಲ್ಕು ಲೋಕವನು ಭರದಿಂದ ಹೆತ್ತಾತ
ಘನತರವ ಕಿರಿದುಮಾಡಿದಿರಿ ಎನ್ನ
ಕರ ನೆಲೆಯ ಮನೆ ಮಾಡಿ ಕರುಣದಿಂ ನೋಡಿದ
ಗುರುಮಹಾತ್ಮಗೆ ಸರಿಯೆ ಯೋಗಿನಾಥ.
50. ಗುರುಶಿಷ್ಯಸಂಬಂಧವರಿಯಬಾರದು ನೋಡ
ಜನಿತವಿಲ್ಲದ ವಿಜಯರೂಪ ಕರನ
ಜನಿಸೆಂದಡಾನತದ ಗುರುಕರದಿ ಜನಿಸಿದ
ಪರಲಿಂಗ ಪರತರನು ಯೋಗಿನಾಥ.
51. ಲಿಂಗ ಪರಶಕ್ತಿಯುತ ಲಿಂಗ ಪರಶಿವನಂಗ
ಲಿಂಗ ಪರಶಿವನ ಪರಮಜ್ಞಾನವು
ಲಿಂಗ ಷಡಧ್ವಾಲಯವು ಲಿಂಗ ಲಕ್ಷಣಸಂಜ್ಞೆ
ಲಿಂಗವಖಿಳಾರ್ಣಸಹ ಯೋಗಿನಾಥ.
52. ಲಿಂಗ ವಿಶ್ವವ್ಯಾಪಿ ಲಿಂಗ ವಿಶ್ವತೋ ಚಕ್ಷು
ಲಿಂಗ ವಿಶ್ವತೋ ಮುಖ ವಿಶ್ವಬಾಹು
ಲಿಂಗವಿಶ್ವತೋ ಪಾದ ಲಿಂಗ ವಿಶ್ವಾತ್ಮನು
ಲಿಂಗ ಜಗಜನ್ಮ ಸ್ಥಲ ಯೋಗಿನಾಥ.
53. ಕೋಟಿ ವಿದ್ಯುತ್ರ‍್ಪಭೆಗೆ ಸಾಟಿ ಕಾಲಾಗ್ನಿಯ
ಮೀಟೆನಿಪ ಜ್ವಾಲೆಯ ಪರಮಪ್ರಭೆಗೆ
ಪಾಟಿಯೆನಿಸುವ ಶಶಿಜೂಟ ಶಿವಲಿಂಗ ಕರ-
ಪೀಠದೊಳು ಜನಿಸಿತೈ ಯೋಗಿನಾಥ.
54. ನಿತ್ಯ ನಿರುಪಮನೆ ಶಿವ ಭಕ್ತಿಕಾರಣ ನೀನು
ಹುಟ್ಟಿಲ್ಲದವ ಮರಳಿ ಹುಟ್ಟಿದೆಯಲೈ
ಬಟ್ಟೆಗೆಟ್ಟಾತನಿಬ್ಬಟ್ಟೆ ಕಟ್ಟಲ್ಕೆ ಕರ
ಹೊಟ್ಟೆಯಲಿ ಹುಟ್ಟಿದೈ ಯೋಗಿನಾಥ.
55. ನಾದ ಬಿಂದುವಿನಲ್ಲಿ ಆದಿ ಬ್ರಹ್ಮಾನಂದ
ಆಮೋದದಿಂದತ್ತ ನಿತ್ಯರೂಪ
ಭೇದಿಸುವ ಆನಂದವನು ತಂದು ಇತ್ತಡೆ
ಆನು ನೀನಾದೆನೈ ಯೋಗಿನಾಥ.
56. ಎಪ್ಪತ್ತು ಗ್ರಾಮದೊಳಗೊಪ್ಪಿಪ್ಪ ನಿನ್ನುವನು
ಉತ್ತಮಾಂಗಕೆ ತಂದು ಕರಸ್ಥಲದಲಿ
ತತ್ವತೂರ್ಯಥ್ರದಿಂದತ್ತಲಾಗಿಹ ಬ್ರಹ್ಮ
ಮತ್ತೆ ನಾ ನೀನಾದೆ ಯೋಗಿನಾಥ.
57. ಕರಸ್ಥಲದ ಅಚಲದಲಿ ಸಕಲ ವ್ಯಾಪ್ತಿಯ ಕೂಡಿ
ಅನುಕರಿಸಿ ಇಪ್ಪುದದು ಭೇದ ನೋಡಾ.
ಬಹಳ ಘನತೆಯನೊಂದು ಮಾಡಿ ಕರದೊಳಗಿಟ್ಟ
ಭೇದ ನಿಮ್ಮಯ ರೂಪು ಯೋಗಿನಾಥ.
58. ಜಗವ ನುಂಗಿದ ಬ್ರಹ್ಮ ಕರದೊಳಗೆ ಸ್ವಯವಾಗಿ
ಎರಡೆಂಟನತಿಗಳೆದು ಸಾಯುಜ್ಯದ
ಪದದ ತತ್ವಾರ್ಥವನು ಒದಗಲೀಯದೆ ಬಂದು
ತುದಿಪದವನೈದಿದೆನು ಯೋಗಿನಾಥ.
59. ತತ್ವಬ್ರಹ್ಮಾಂಡದಿಂದತ್ತತ್ತಲಾದ ಘನ
ಭಕ್ತಿಕಾರಣ ನೀನು ಚುಳುಕನಾದೆ
ಸತ್ವರಜತಮಗಳನು ಮೀರಿಪ್ಪ ಶರಣರ
ಹಸ್ತ ನಿಮ್ಮಯ ಗೊತ್ತು ಯೋಗಿನಾಥ.
60. ಕರಿ ಕನ್ನಡಿಯೊಳಡಗಿ ಉರಿ ಕಾಷ್ಠದೊಳಗಡಗಿ
ಶರಧಿಯೊಳು ವಾರಿಕಲ್ಲಡಗಿದಂತೆ
ಪರಮ ಚಿದ್ಘನಲಿಂಗವೆನ್ನ ಕರದೊಳಗಡಗಿ
ಪರಿಭವವ ತಪ್ಪಿಸಿದೆ ಯೋಗಿನಾಥ.
61. ಚಂದ್ರ ಕುಂಭದೊಳಡಗಿ ಚಂದ್ರನೊಳು ರವಿಯಡಗಿ
ಹೊಂದಿ ತಿಲದೊಳು ತೈಲವಡಗಿದಂತೆ
ಸುತ್ತ ಚಂದ್ರಶೇಖರಮೂರ್ತಿ ಇಂದೆನ್ನ ಕರದಲ್ಲಿ
ಬಂದಿರಲು ಬದುಕಿದೆನು ಯೋಗಿನಾಥ.
62. ಹುಟ್ಟುಗೆಟ್ಟಾ ಸೀಮೆ ಬಟ್ಟಬಯಲಾಯಿತ್ತು
ಇಷ್ಟಲಿಂಗವು ಎನ್ನ ಕರಕೆ ಬರಲು
ಕಷ್ಟ ಸಂಸಾರದಲಿ ಹುಟ್ಟುವುದು ಕೆಟ್ಟಿಗ
ನಿತ್ಯ ಪದಕಾನಾದೆ ಯೋಗಿನಾಥ.
63. ಇಷ್ಟಕೃತ್ಯದ ನಂಟ ಬಂದ ಕರಸ್ಥಲಕೀಗ
ನಿಷ್ಠೆಗೆ ನಿಜರೂಪನು ಬಂದನಯ್ಯಾ
ಭ್ರಷ್ಟಯೋಗಪಹಾರಿ ಬಂದ ಕಾರಣದಿಂದ
ಇಷ್ಟ ನೀ ನಾನಾದೆ ಯೋಗಿನಾಥ.
64, ಇಂದೆನ್ನ ಕರಸ್ಥಲಕೆ ಬಂದನು ಪರಬ್ರಹ್ಮ
ನಿಂದ ನಿಜದಾನಂದ ಬಂದನಯ್ಯ
ಮುಂದುವರಿವ ಮನದ ಅಜ್ಞಾನಹರ ಬಂದ
ತಂದೆ ಬಂದನು ಎನ್ನ ಯೋಗಿನಾಥ.
65. ರಾಜಗುಣಸಂಬಂಧ ರಾಜ ತಾ ಬಂದವನೆ
ರಾಜ ಶಿವತತ್ವಿಕ ಬಂದನಯ್ಯಾ.
ರಾಜಗುರುಮೂರ್ತಿಯ ಕಂಡು ನಾ ಭಜಿಸಲ್ಕೆ
ರಾಜ ನಾ ನೀನಾದೆ ಯೋಗಿನಾಥ.
66. ಮೂರು ಗ್ರಾಮಕ್ಕೀಗ ಮುನಿಮೂರ್ತಿ ತಾ ಬಂದ
ಮೂರು ಶಿವತತ್ವಕ್ಕೆ ಮೂರ್ತಿಬಂದ
ಆರೂಢ ಪದವಿತ್ತ ಗುರುಮೂರ್ತಿ ದೆಸೆಯಿಂದ
ಆನು ನೀನಾದೆನೈ ಯೋಗಿನಾಥ.
67. ಸ್ವಾಮಿ ಬಂದನು ಎಂದು ಪ್ರೇಮದಿಂ ನೋಡಲು
ತಾಮಸವನು ನಾನು ಹರಿದೆನಯ್ಯಾ
ಪ್ರೇಮದಿಂದಲಿ ಈಗ ನೀನೆನ್ನ ನೋಡಿದಡೆ
ಆ ಮಹಾ ಪದಗಂಡೆ ಯೋಗಿನಾಥ.
68. ನಿರವಧಿಕ ನಿತ್ಯನು ಹರುಷದಿಂ ಬರಲೀಗ
ಹರುಷ ಶಿವಸುಖ ಮುಂದೆ ಕಾಣಬಂತು
ಗುರುಮಾರ್ಗ ಜ್ಞಾನ ಸಂಬೋಧೆಯ ನರಿದೀಗ
ಹರನೆ ನೀನಾನಾದೆ ಯೋಗಿನಾಥ.
69. ಪರತತ್ವಲಿಂಗವು ಹರುಷದೊಳು ಬಂದಿದೆ
ನೆರೆ ನಂಬಿ ನಾನದನು ನೋಡಿ ನೋಡಿ
ಗುರುಮಾರ್ಗಜ್ಞಾನದಿಂ ಲಿಂಗವ ನೋಡಲು
ಹರನೆ ನೀನಾನಾದೆ ಯೋಗಿನಾಥ.
70. ಹಾಡುತ್ತ ಹೊಗಳುತ್ತ ನೋಡುತ್ತ ಲಿಂಗವನು
ಕೂಡೆ ಪುಳಕಪ್ರತತಿಯೆಸೆವುತಿರ್ಪ
ಆರೂಢ ಭಕ್ತಿ ಕ್ರಿಯಾಳಾಪದಾನತವು
ಆವುದಕೆ ಸರಿ ಹೇಳಾ ಯೋಗಿನಾಥ.
71. ಲಿಂಗ ನಿನ್ನಯ ಸಂಗ ಲಿಂಗ ನಿನ್ನಯ ನೋಟ
ಲಿಂಗ ನಿನ್ನನೆ ಹಾಡಿ ಹೊಗಳುತಿರ್ಪ
ಮಂಗಳಾತ್ಮಕ ಭಕ್ತರೆಲ್ಲಿರ್ಪರವರಲ್ಲಿ
ಲೆಂಗಿಯಾಗಿರಿಸಯ್ಯಾ ಯೋಗಿನಾಥ.
72. ಲಿಂಗವೆನ್ನಯ ತಂದೆ ಲಿಂಗವೆನ್ನಯ ತಾಯಿ
ಲಿಂಗವೆನ್ನಯ ಪರಮ ಜ್ಞಾನಮೂರ್ತಿ
ಲಿಂಗ ಶ್ರೀ ಗುರು ಮೂರ್ತಿ ಪಾದಕ್ಕೆ ಶರಣೆಂದು
ಲಿಂಗ ನೀ ನಾನಾದೆ ಯೋಗಿನಾಥ.
73. ಶರಣಾಗು ಲಿಂಗಯ್ಯ ಶರಣಾಗು ಸಂಗಯ್ಯ
ಶರಣಾಗು ಎನ್ನ ಪ್ರಾಣೇಶ ಗುರುವೆ
ಶರಣಾಗು ನಿರ್ಮಲಜ್ಞಾನ ಸಂಬಂಧನೆ
ಶರಣಾನು ನಿಮ್ಮಡಿಗೆ ಯೋಗಿನಾಥ.
74. ತತ್ವಜ್ಞಾನಾನಂದ ತತ್ವನಿರ್ಮಲರೂಪ
ತತ್ವ ಶಿವತತ್ವಾಂಗ ನೀನೆಯಯ್ಯಾ
ತತ್ವಜ್ಞಾನತ್ವಕ್ಕೆ ಸಂಬಂಧ ಶ್ರೀಗುರುವೆ
ತತ್ವಮೂರುತಿ ಇಷ್ಟ ಯೋಗಿನಾಥ.
75. ಇಷ್ಟಲಿಂಗವೆ ಪ್ರಾಣ ಪ್ರಾಣಲಿಂಗವೆ ಇಷ್ಟ
ದೃಷ್ಟಿ ಬಲಿಯಲು ಉಭಯ ಒಂದಾದುದು
ಇಷ್ಟವನು ನೋಡನೋಡಲು ಸಕಲಸಂಧಾನದ
ನಿಷ್ಕಲದ ಹೊಲನಯ್ಯ ಯೋಗಿನಾಥ.
76. ಇಷ್ಟಪ್ರಾಣವು ಭಾವ ದೃಷ್ಟಿಯೊಳು ಲೀಯವು
ಇಷ್ಟೈಕ್ಯ ನಿಮ್ಮಲ್ಲಿ ಗುರುವೆ ಪರವೆ
ನಿಷ್ಠೆ ನಿಯಮಾಚಾರ ನಿಮ್ಮಲ್ಲಿ ಅಡಗಲು
ಇಷ್ಟಪದ ನಿರ್ವಯಲು ಯೋಗಿನಾಥ.
77. ಕಾಯದ ಕರದಲ್ಲಿ ಕಾಯ ಲಿಂಗವನಿತ್ತು
ಕಾಯಲಿಂಗವು ಪ್ರಾಣವೇಧಿಸುತ್ತ
ಇತ್ತೆರನ ಮುತ್ತೆರನ ನಾಲ್ಕೆರನ ಭೇದವನು
ಚಿತ್ತಶುದ್ಧದಿಯರಿದೆ ಯೋಗಿನಾಥ.
78. ಮಂಗಳಾಂಗದ ದೀಪ್ತಿ ಕಂಗಳಲಿ ಹೊತ್ತಿಸಲು
ಹಿಂಗದೆ ಕಂಡೆನಾ ಲಿಂಗತ್ರಯವ
ಆದಿಯಾಧಾರದಲಿ ಭೇದಿಸುವ ಭೇದವನು
ಆನಂದದಿಂ ಕಂಡೆ ಯೋಗಿನಾಥ.
79. ಸಕಲ ನಿಷ್ಕಲದೊಳಗೆ ಮುಖ ಲಿಂಗ ಮೂರರಲಿ
ಕುರುಹುಗೆಟ್ಟಿಪ್ಪುದದು ಸಕಲದಲ್ಲಿ
ಅಖಿಳ ಲೋಕಾರಾಧ್ಯ ಗುರುಕರುಣದಿಂದಲಾ
ತ್ರೈಲಿಂಗವೊಂದಾದೆ ಯೋಗಿನಾಥ.
80. ತ್ರೈಲಿಂಗಕಾನಂದ ಬೀಜಮಂತ್ರವು ನೀನು
ತ್ರೈವಿದ್ಯ ಮೂರಾರು ವಿದ್ಯೆ ನೀನೆ
ತ್ರೈಲಿಂಗಮೂಲಕ್ಕೆ ಮುನ್ನಾದ ಮೂರೊಂದು
ಪ್ರಸಾದಲಿಂಗವು ನೀನೆ ಯೋಗಿನಾಥ.
81. ಅಂದು ಆದಿಯಲಾದ ಆನಂದಬೀಜವನು
ತಂದೆನ್ನ ಕರಭೂಮಿಯಲ್ಲಿ ಬಿತ್ತಿ
ಅಂಕುರವು ಮೂರಾಗಿ ಫಲವು ಆರಾಗಲ್ಕೆ
ಚಿಂತೆಗೆಟ್ಟೆನು ಗುರುವೆ ಯೋಗಿನಾಥ.
82. ಮುನ್ನಲಾದಿಯಲಾದ ಉನ್ನತೋನ್ನತವೃಕ್ಷ
ತನ್ನ ಗುಣದಿಂದಲದು ಮೂರಾದುದು
ಬಿನ್ನಣದಲಾರಾಗಿ ಆರಾರ ಮೀರಿದಡೆ
ಇನ್ನು ನಿಬ್ಬೆರಗಾದೆ ಯೋಗಿನಾಥ.
83. ಮೂರರಿಂದವೆ ಹುಟ್ಟಿ ಮೂರು ಮತ್ತಾರಾಗಿ
ಅರು ಮಠವೆ ಎನಗೆ ನಿತ್ಯವಾಗಿ
ಆರಾರರಿಂ ಮೇಲೆ ಮೀರಿಪ್ಪ ಸೀಮೆಯನು
ತೋರಿದಾತನು ಲಿಂಗ ಯೋಗಿನಾಥ.
84. ತನುಲಿಂಗ ಇಷ್ಟದಲ್ಲಿ ಘನಶುದ್ಧ ಪಂಚಮದ
ತನುತ್ರಯದ ಮಧ್ಯಮದ ಇಷ್ಟವರಿದು
ಕರಸ್ಥಲವ ಪಿಡಿದು ಸಂಗಮದಲ್ಲಿ ಸಮನಿಸಲು
ಆತ ಲಿಂಗೈಕ್ಯನೈ ಯೋಗಿನಾಥ.
85. ಭಾನುವಿನ ಉದಯಕ್ಕೆ ಕಮಲ ಪಸರಿಸುವಂತೆ
ನೀನೆನ್ನ ಕರದೊಳಗೆ ಪಸರಿಸುತ್ತ
ಜ್ಞಾನಭಾನುವಿನುದಯ ದೇಹಾದ್ರಿಯಲ್ಲಿ ಪುಟ್ಟಿ
ಆನು ನೀನಾದೆನೈ ಯೋಗಿನಾಥ.
86. ಅಂಗದ ಕಳೆಮೊಳೆಯ ಲಿಂಗದಿ ನೆಲೆಗೊಳಿಸಿ
ಮಂಗಳಾತ್ಮಕ ಮನದ ಸಂಗತಾನೆ
ಜಂಗಮವೆ ಪರಮ ಘನವೆಂದು ಅರಿದೆನು ಎನ್ನ
ಲಿಂಗ ಸಲಹೆ ಗುರುವೆ ಯೋಗಿನಾಥ.
87: ಮಾಟಕೂಟದ ಭಕ್ತಿ ನೆಲೆಗೊಂಡು ಲಿಂಗದ
ಬೇಟವ ಮರೆಯಲು ಮಾಟನಾಸ್ತಿ
ಮಾಟ ಕೂಟಕ್ಕೆ ಶಶಿಜೂಟ ಜಂಗಮವರಿಯೆ
ಮಾಟಪದ ನಿಜನಿಷ್ಠೆ ಯೋಗಿನಾಥ.
88. ಅರಿವು ತಾನಡಗಿತ್ತು ಆಚಾರ ಕುರುಹಿನಲಿ
ಮರವೆ ತಾನೊಂದಾಗಿ ಬೆರಸಿತಲ್ಲ
ಅರಿವು ಕುರುಹಿನ ನಿಷ್ಠೆ ಜಂಗಮದಲಡಗಿತ್ತು
ಮುಂದಾವ ಫಲಪದವು ಯೋಗಿನಾಥ.
89. ಗುರು ಲಿಂಗ ಪ್ರಸಾದ ಚರಲಿಂಗದೊಳಗಿರಲು
ಚರಲಿಂಗದೊಳಗಿರೆ ಸಕಲವೆಲ್ಲ
ಉರುತರದ ಷಟ್ ಸ್ಥಲದ ಕ್ರಮ ವಿನಿತ ಪೇಳುವೆ
ಬಸವನ ಕೃಪೆಯಿಂದ ಯೋಗಿನಾಥ.
90, ಅಂಗ ಮಾಟವನಳಿದು ಜಂಗಮ ಕೂಟವ ತಿಳಿದು
ಜಂಗಮ ಸುಖದಲ್ಲಿ ಒಂದುಗೂಡಿ
ಮಂಗಳಮಯ ತನುವನರಿದು ಅಪ್ಪಲ್ಕೀಗ
ಜಂಗಮ ಲಿಂಗ ನಾನಾದೆ ಯೋಗಿನಾಥ.
91. ಅಂಗಕಳೆ ಗುಣಗಳು ಜಂಗಮದಲಡಗಿತ್ತು
ಮಂಗಳಮಯತತ್ವ ಚರಭಾವದಲ್ಲಿ
ಜಂಗಮಪ್ರಸಾದ ಉಭಯ ಏಕವಾಗಿ
ಜಂಗಮಲಿಂಗ ನಾನಾದೆ ಯೋಗಿನಾಥ.
92. ಶುದ್ಧಕ್ಕೆ ಪ್ರಸಾದ ಸಿದ್ಧಕ್ಕೆ ಪ್ರಸಾದ ಪ್ರ-
ಸಿದ್ಧಕ್ಕೆ ಪ್ರಸಾದ ಗುರು ಮುಖ್ಯವೈ
ಇದ್ದೆಸದ ಪ್ರಸಾದಕಾನಂದ ಗುರು ಮುಖ್ಯ
ಸದ್ಯೋನ್ಮುಕ್ತನುವಪ್ಪೆ ಯೋಗಿನಾಥ.
93. ಶುದ್ಧಪ್ರಸಾದ ಮೂರಚ್ಚಪ್ರಸಾದ ಮೂ-
ರುತ್ತಮಪ್ರಸಾದವೈದು ಭವಿಸಿ
ಇಂತು ಪ್ರಸಾದ ಹನ್ನೊಂದು ಇವ ತಾ ಗ್ರಹಿಸಿ
ನಿಶ್ಚಿಂತಮಯನಕ್ಕು ಯೋಗಿನಾಥ.
94. ಉಪಮೆಗೊಡದೊಂದಯ್ಯ ಉಪಮೆಯಿಲ್ಲದ ಮೂರು
ಉಪಮೆಗಪ್ರಮಾಣವೈದಾರಲೈ
ಉಪಸೃಷ್ಟಿಯಂ ಮೀರಿದಾನಂದ ಪ್ರಸಾದ
ಪ್ರಮಾಣವರಿವವರಾರು ಯೋಗಿನಾಥ.
95. ಮುನ್ನೂರು ತರದಲ್ಲಿ ವದನ ಹನ್ನೊಂದಾಗಿ
ಚನ್ನಾರ್ಪಣೆಯ ಭೇದ ಸಮನವಾಗಿ
ಇನ್ನು ಪ್ರಸಾದ ಹನ್ನೊಂದಕ್ಕೆ ತೆರನಿತ್ತ
ಶ್ರೀಗುರು ವರುಪಿದನು ಯೋಗಿನಾಥ.
96. ದ್ವಿದಳವಳಯದಲೆರಡು ಸದಮಳದಲೊಂದಾಗಿ
ಒದವಿ ಲಿಂಗತ್ರಯದಿ ಮೂರುವಾಗಿ
ವದನಾಕ್ಷರವೈದರಲಿ ಐದು ಭವಿಸಿದವು
ಪ್ರಸಾದ ಹನ್ನೊಂದು ಯೋಗಿನಾಥ.
97. ಇಂದುಕೊಳ ಲೋಕದಲ್ಲಿ ಆನಂದಮತಿಯಾದೆ
ಬಂದು ತಾರೈಸುತಿರೆ ಮಧುರ ಕಹಳೆ
ಸಂದಪ್ರಸಾದ ಹನ್ನೊಂದು ನೆಲೆಗೊಳಲು
ನಿಂದ ನಿತ್ಯವು ಅಕ್ಕು ಯೋಗಿನಾಥ.
98. ತಾರೈಸುವ ಮಧುರ ಕಹಳೆಯಾಳಾಪಕ್ಕೆ
ರೀತಿ ಧಾತುಗಳಾಗೆ ನಿತ್ಯ ನಿತ್ಯ
ಆನತದ ಪ್ರಸಾದ ಏಕಾದಶವನರಿಯೆ
ಗೀತಪಾತ್ರವು ಅಕ್ಕು ಯೋಗಿನಾಥ.
99. ಉಕ್ಕಡದ ಕಹಳೆಗಳು ಮತ್ತೆಯೂರನು ಸುತ್ತಿ
ಎಚ್ಚತ್ತು ಇದ್ದಡವನರಸು ನಿತ್ಯ
ಮತ್ತೆ ಪ್ರಸಾದವನು ಹನ್ನೊಂದನರಿಯಲ್ಕೆ
ನಿತ್ಯಮಯ ಹಂಸ ಶಿವ ಯೋಗಿನಾಥ.
100. ಅಂಗರಿಕಗುಕ್ಕಡದ ಮಂಗಳಾಂಗದ್ವಾರ
ಹಿಂಗದಂತದ ನೋಡಿ ಪ್ರಸಾದದಾ
ಮಂಗಳಾಂಗವನರಿದ ನರರಾಜ ನಿತ್ಯನೈ
ಹಿಂಗುವನೆ ಭಕ್ತಿಯೊಳು ಯೋಗಿನಾಥ.
101. ಹವಣಿಸುವ ಬ್ರಹ್ಮಾಂಡ ಹವಣನರಿವಾ ಯೋಗ
ವಿಮಲ ದೇಹವ ಮಾಳ್ಪ ಪ್ರಸಾದವು
ಕಮನೀಯ ಕಾರದ ತೆರಹುಗೆಟ್ಟಾ ಕುರುಹು
ವಿಮಲದೇಹವೆಯಕ್ಕು ಯೋಗಿನಾಥ.
102. ಇಂತು ಗುರುಪ್ರಸಾದವ ಚಿಂತೆಯಿಲ್ಲದೆ ಕೊಂಡು
ನಿಶ್ಚಿಂತನಾಗಿರ್ಪ ಲೋಕದೊಳಗೆ
ಅಂತರಿಸದಿರು ನೀನು ವರ್ಗ ಹದಿನಾಲ್ಕರೊಳು
ನಿಶ್ಚಿಂತನಾಗಿರ್ಪ ಯೋಗಿನಾಥ.
103. ಆಲೋಕ ಪದತಳ ಆರೂಢ ಪ್ರಸಾದ
ಆದಿ ಅಕ್ಷರದ್ವಯಕೆ ಗುರುವು ತಾನೆ
ಆನಂದದಾನಂದದಾದಿಯಾಧಾರಕ್ಕೆ
ಮೋದಗುರು ಪ್ರಸಾದ ಯೋಗಿನಾಥ.
104, ಆಪಾದಮಸ್ತಕದ ಮೇಲೆ ವದನಗಳಾಗಿ
ಕೂಪ ಹದಿನಾಲ್ಕಾಗಿ ಪ್ರಸಾದದ
ಆ ಜ್ಯೋತಿ ಪ್ರಸಾದದಾನತವನರಿದಾತ
ಆರೂಢದೈಕ್ಯನೈ ಯೋಗಿನಾಥ.
105. ಪ್ರಸಾದಪಂಚಮದ ಬ್ರಹ್ಮಕ್ಕೆ ಮೀರಿಪ್ಪು-
ದಾ ಜ್ಯೋತಿಯೀರೈದು ಪಾದೋದಕ
ಪ್ರಜ್ವಲ್ಯ ಸಕಲ ಸೀಮೆಯನುಂಗಿದಾನತದ
ರೀತಿಯರಿದಾತ ಗುರು ಯೋಗಿನಾಥ.
106. ಹತ್ತು ಪಾದೋದಕದ ಹುಟ್ಟ ನಾನೇ ವೇಳ್ವೆ
ಮತ್ತೆ ಮೂರು ಸ್ಥಾನದಲ್ಲಿ ಜನನ
ಒಪ್ಪಿಪ್ಪ ಸೀಮೆಯೇಳರ ಒಳಗೆ ಭವಿಸಿಪ್ಪ
ತತ್ವ ಪಂಚಾಕ್ಷರಿಗೆ ಯೋಗಿನಾಥ.
107. ನದಿಯ ಮೀರಿದ ನೀಲಗಳನ ಮಸ್ತಕದಲ್ಲಿ
ಒದವಿ ಪಾದೋದಕವು ಹತ್ತು ಮತ್ತೆ
ಇತ್ತೆರದಿ ಭವಿಸಿದ ಕ್ರಮವನರಿದಾತನು
ನಿತ್ಯ ಮುಕ್ತನು, ಅಕ್ಕು ಯೋಗಿನಾಥ.
108. ವದನ ಹದಿನಾಲ್ಕರಲಿ ವಳಯ ಮೀರಿತು ಸೀಮೆ
ತೆರಹುಗೆಟ್ಟಿತು ನಿತ್ಯ ಕುರುಹು ಕುರುಹು
ಅತಿಶಯದ ಪಾದೋದಕವನರಿದ ಮಹಾತ್ಮನು
ನಿಗಮಕ್ಕ ಭೇದ್ಯನೈ ಯೋಗಿನಾಥ.
109. ಆದಿಯನಾದಿಯಿಂದತ್ತತ್ತಲಿಂ ಮುನ್ನ-
ಲಾದ ಚಿದ್ಭಸಿತವನು ಧರಿಸಿ ಭವದ
ಬಾಧೆಯ ನೀಗೀಗ ಶ್ರೀಗುರುವ ಪಾದಕ್ಕೆ
ನಾ ಧನ್ಯ ನಾದೆನೈ ಯೋಗಿನಾಥ.
110. ಚಿನ್ನಾದ ಬಿದ್ಬಿಂದು ಚಿಜ್ಯೋತಿ ಕೂಡಲ್ಕೆ
ಚಿದ್ಭಸ್ಮವಾಯಿತೈ ಮಂತ್ರವಿಡಿದು
ಚಿದ್ರೂಪ ಚನ್ನಬಸವಯ್ಯನ ಕೃಪೆಯಿಂದ
ಚಿದ್ಭಸಿತವ ಕಂಡೆ ಯೋಗಿನಾಥ.
111. ಭಾಳಾಕ್ಷರವ ಸುಟ್ಟು ತೀವಿ ಭಸಿತವನಿಟ್ಟು
ರೂಢಿಯೊಳಧಿಕ ಚಿದ್ಭಸಿತವೆನಿಸಿ
ಮೃಡ ಮೂರ್ತಿ ಎನ್ನ ಗುರು ಚನ್ನಬಸವಪ್ಪ ತಾ
ಹಾಡಿ ಹರಸಿದ ಭಸ್ಮ ಯೋಗಿನಾಥ.
112. ಗುರು ಚನ್ನಬಸವನಿಂ ಹರರೂಪ ನಾ ಕಂಡೆ
ಪರಕೆ ಪರವೆನಿಪ ಭಸಿತವ ಕಂಡೆನು
ಗುರುಮಾರ್ಗಜ್ಞಾನದಿಂ ವರಭಸಿತವನು ಧರಿಸಿ
ಶರಣರ್ಗೆ ತೊತ್ತಾದೆ ಯೋಗಿನಾಥ.
113, ಗುರುವಾಗಿ ವಿಭೂತಿ ಚರವೆನಿಸಿ ವಿಭೂತಿ
ವರಲಿಂಗ ತದ್ರೂಪು ಶ್ರೀ ವಿಭೂತಿ
ಗುರು ಚನ್ನಬಸವಣ್ಣ ಕರದಲ್ಲಿ ಪಿಡಿದೆನ್ನ
ಶಿರದಲ್ಲಿ ಧರಿಸಿದನು ಯೋಗಿನಾಥ.
114. ಶ್ರೀ ಗುರುವೆ ಗತಿಯೆಂದು ಶ್ರೀಭಸಿತವನು ಧರಿಸಿ
ಶ್ರೀ ಶಿವಶರಣರ್ಗೆ ಭೃತ್ಯನಾದೆ.
ಶ್ರೀ ಭಸಿತವೆ ನಮೋ ಎಂದು ತ್ರಿಕಾಲದಲ್ಲಿ
ಧರಿಸಿ ತ್ರೈಮಲದೊಳೆ ದೆನೈ ಯೋಗಿನಾಥ.
115. ಪ್ರಣವವ ಜಪಿಸುತ್ತ ಹಣೆಯೊಳಗಿಟ್ಟನೈ
ತ್ರಿಣಯನವತಾರದ ಶ್ರೀಭಸಿತವ
ಅಣಿಮಾದಿಸಿದ್ದಿಗಳಿಗಾದಿಭಸಿತವ ಧರಿಸಿ
ಹಣೆಯ ಲಿಖಿತವ ತೊಡೆದೆ ಯೋಗಿನಾಥ.
116. ಶ್ರೀಭಸಿತವನಾವಾಗಳು ಆಗಮಸ್ಥಾನವನರಿದು
ಶ್ರೀ ಭಸಿತವ ಭಾಳ ಕರಣದ್ವಯದಲಿ
ಆಭಸಿತವನಿಂತು ಸರ್ವಾಂಗದಲ್ಲಿ ಧರಿಸುವ
ಆ ಭಕ್ತಗೆ ಶರಣೆಂಬೆ ಯೋಗಿನಾಥ.
117. ಮೂರಾರು ಒಂಬತ್ತು ಬೇರೆ ಹನ್ನೆರಡೆರಡು
ತೋರುವ ಬತ್ತೀಸ ಸ್ಥಾನದಲ್ಲಿ
ಆರೂಢ ಶ್ರೀಶಿವನ ಪೂಜೆಗೆ ಮುನ್ನವೆ
ನಾ ಧರಿಸುವೆ ಭಸಿತವನು ಯೋಗಿನಾಥ.
118. ಜಪ ತಪ ಧ್ಯಾನ ಮೌನಾದಿಗಳಜಹರಿ
ಉಪಮನ್ಯು ದಧೀಚಿ ಗೌತಮಾದಿ
ಸಪ್ತ ಮಂತ್ರಂಗಳಿಗೆ ಗುರುವಾದ ಭಸಿತವಿದು
ಕಪಿಲಮಲ್ಲೇಶ್ವರನು ಯೋಗಿನಾಥ.
119. ಪಾವಸವ ಪರ್ವತವ ಪರ್ವತವ ಪಾವಸವ
ನಿಮಿಷಮಾತ್ರದಿ ಮಾಳ್ಪ ಶ್ರೀ ವಿಭೂತಿ
ಸಂಶಯವೇಕಿದಕೆ ವ್ಯಾಸವಶಿಷ್ಠರ
ಹಿಂಸಕುಲವಳಿಯದೇ ಯೋಗಿನಾಥ.
120. ತಿಲಕಕ್ಕೆ ಶೃಂಗಾರ ಕೊಲುವ ಭೂತದ ವೈರಿ
ಸತಿ ಶಿವನ ಪದದೋರ್ಪ ಪಥಿಕವಿದು
ಒಲಿದು ದಧೀಚಾ ದಿ ಋಷಿಜನಕಾಯುವನಿತ್ತ
ಛಲದಂಕ ಭಸಿತವೈ ಯೋಗಿನಾಥ.
121. ಭವತಿಮಿರಕಾದಿತ್ಯ ಭವಾರ್ಣವಡವಾನಲ
ಭವತರು ಪರಶು ಎಂದುಲಿವುತ್ತಿಹ
ಭವಗಿರಿ ವಜ್ರವೆಂದೆನಿಪ ಭಸಿತವ ಧರಿಸಿ
ಭವದೂರನಾದೆನೈ ಯೋಗಿನಾಥ.
122. ಶಮನ ಶಮನವಿದು ಸುಮನದಿಂ ಧರಿಸಿದೊಡೆ
ಉಮೆಯಾಣ್ಮನ ತೋರುವುದು ಶ್ರೀ ವಿಭೂತಿ
ಕ್ರಮವರಿದು ಧರಿಸಿ ಕಾಯಜನ ದಹಿಸಿದೆನಯ್ಯ
ಡಮ[ರು]ರಹಿತ ಶ್ರೀಗುರುವೆ ಯೋಗಿನಾಥ.
123, ಸತ್ವ ರಜ ತಮಗಳನ್ನು ಸುಟ್ಟುರುಹಿ ನಿಟ್ಟೂರಸಿ
ಸಪ್ತ ವ್ಯಸನಂಗಳನು ಬೇರುವೆರಸಿ
ಕಿತ್ತಿಟ್ಟು ಭಸಿತವನು ಸರ್ವಾಂಗದೊಳು ಧರಿಸಿ
ಮುಕ್ತನಾದೆನು ಗುರುವೆ ಯೋಗಿನಾಥ.
124, ಅತ್ಯತಿಷ್ಟದ್ದಶಾಂಗುಲವೆನಿಪ ಭಸಿತವನು
ಉತ್ತ ರೋತ್ತರವಾಗಿ ಕರದಿ ಪಿಡಿದ
ಚಿತ್ತಶುದ್ಧದಿ ಭಾಳ ಕರಣ ಕಂಠದಿ ಧರಿಸಿ
ಮುಕ್ತನಾದೆನು ಗುರುವೆ ಯೋಗಿನಾಥ.
125, ಚಿದ್ರಮಣ ನಿನ್ನ ನಿಜ ಭದ್ರಾಕ್ಷಿಯಿಂದಾದ
ರುದ್ರಾಕ್ಷಿಗಳನೊಲಿದು ಧರಿಸಿ ನಾನು
ಚಿದ್ರೂಪ ಲಿಂಗವನು ಹೊದ್ದಿ ಪರಮಾನಂದ
ರುದ್ರನು ನಾನಾದೆ ಯೋಗಿನಾಥ.
126, ಮನಕೆ ಮಂಗಳವನ್ನು ತನುವಿಂಗೆ ಸುಖವಕ್ಕು
ವಿನಯ ಪ್ರಸಾದವು ಸಾಧ್ಯವಕ್ಕು
ಅನುವರಿದು ರುದ್ರಾಕ್ಷಿಯಾಗಮಸ್ಥಾನದಿ ಧರಿಸಿ
ತ್ರಿಣಯನನು ತಾನಕ್ಕು ಯೋಗಿನಾಥ.
127. ಶಿರದೆ ಮೂವತ್ತಾರುಗಳದೆ ಮೂವತ್ತೆರಡು
ಉರದಲ್ಲಿ ಐವತ್ತು ರುದ್ರಾಕ್ಷಿಯ
ಬಾಹು ಮಣಿಬಂಧದಲಿ ದ್ವಾದಶ ಷೋಡಶ ಧರಿಸೆ
ಸಾರ ಸತ್ಪಥವಕ್ಕು ಯೋಗಿನಾಥ.
128. ಶಿವಧ್ಯಾನ ಶಿವಭಕ್ತಿ ಶಿವಚಿಂತೆಯುಳ್ಳಾತ
ಶಿವನ ರುದ್ರಾಕ್ಷಿಯ ನಿತ್ಯದಲ್ಲಿ
ಶಿವಜ್ಞಾನದಿಂ ಧರಿಸಿ ಅವಿರಳ ಮುಕ್ತಿಯ ಪಡೆದ
ಶಿವಭಕ್ತಗೆ ಶರಣೆಂಬೆ ಯೋಗಿನಾಥ.
129. ರುದ್ರಾಕ್ಷಿಯ ನಾವಾಗಲು ರುದ್ರಮುಖವೆಂದರಿದು
ರುದ್ರನ ನೆನಹಿಂದ ಧರಿಸಿದಾತ
ರುದ್ರಪದವಿಯ ಪಡೆದು ರುದ್ರಜ್ಞಾನತ್ವದಿಂ
ರುದ್ರ ತಾನಪ್ಪನೆ ಯೋಗಿನಾಥ
130. ಮುನ್ನಲಾದಿಯಲಾದ ಉನ್ನತೋನ್ನತ ಭೇದ
ಸನ್ನುತ ಬ್ರಹ್ಮಾಂಡದಿಂದಲತ್ತ
ಮನ್ನಣೆಯ ಅಕ್ಷರದ ಉನ್ನತವನರಿಯಲ್ಕೆ
ಇನ್ನು ಶಿವಭಕ್ತನೈ ಯೋಗಿನಾಥ.
131. ಕುರುಹುಗೆಟ್ಟಾನಂದ ಅದರ ಮೇಲಜಾಂಡ
ಅದರೊಳಗೆ ಅಕ್ಷರದ್ವಯವು ತಾನೆ
ತ್ರೈಲಿಂಗಮೂಲಕ್ಕೆ ಮಾತೆಯಪ್ಪಕ್ಷರದ
ಹವಣನರಿದವನು ಶಿವ ಯೋಗಿನಾಥ.
132. ಬಣ್ಣ ಮೂವತ್ತಾರು ಹಣ್ಣಿದವು ನಿಗಮದಲಿ
ಬಣ್ಣದಕ್ಷರವೆರಡನರಿಯರಾರು
ಮುಕ್ಕಣ್ಣ ನಿಮ್ಮ ನೇಮಾಕ್ಷರವನರಿದಾತ
ತಪ್ಪದೆ ನೀನಕ್ಕು ಯೋಗಿನಾಥ.
133. ವೇದಕ್ಕೆ ಮೂಲಾಕ್ಷರವು ಶಾಸ್ತ್ರಕ್ಕೆ ಸಂಬಂಧವು
ನಾದ ಬಿಂದು ಕಳೆಗೆ ಮೂಲ ತಾನೆ
ಆದಿಯಾಧಾರಕ್ಕೆ ಆದಿ ಪಂಚಾಕ್ಷರಿಯ
ಭೇದಿಪಡೆ ಎನ್ನಳವೆ ಯೋಗಿನಾಥ.
134. ನಾದ ಬಿಂದುವಿನಲ್ಲಿ ಆದಿಯಕ್ಷರ ಸೀಮೆ
ವೇದೆಯಿಂದಲಿ ಅದನು ತಿಳಿದು ನೋಡಾ
ಆದಿಯಕ್ಷರದ ಆನತದ ಬಯಕೆಗೆ ತಾನು
ಪಂಚಾಕ್ಷರಿ ನಿಚ್ಚಣಿಗೆ ಯೋಗಿನಾಥ.
135. ಪಂಚ ಬ್ರಹ್ಮಾಂಡವನು ಹಂಚುಮಾಡಿತು ಯೋಗ
ಸಂಚಳಿಸುತೈದುದೆ ನಿತ್ಯಕಾಗಿ
ಪಂಚಾಕ್ಷರಿಯ ಭೇದ ಚಿಂತೆಗೆಟ್ಟಿರ್ದಡೆ
ಸಂಚಳವ ಹಿಡಿವೆನೈ ಯೋಗಿನಾಥ.
136. ಆಸನಾಕ್ಷರವೆರಡು ಬಾಸಣಿಸಿದವು ಮೂರು
ದೋಷವನು ಕೆಡಿಸುವವು ಐದಕ್ಷರ
ಈ ಸಕ್ಷರದ ಭೇದದಾ ಶ್ರಯದ ಬಲ್ಲಡೆ
ಪಾಶ ಮಲಮದ ದೂರ ಯೋಗಿನಾಥ.
137, ವಿನಯದ ಮನೆಯಲ್ಲಿ ಅನುವಿನಕ್ಷರವೆರಡು
ತನುವ ಮುಚ್ಚಿದುವವು ಮೂರಕ್ಷರ
ಅನುಮತದಿಂದಲಿ ಐದಕ್ಷರವನರಿದು
ತನುವ ನೀಗಿದೆ ಗುರುವೆ ಯೋಗಿನಾಥ.
138. ಲಿಂಗಭಕ್ತಂಗೆ ನಿಜದಂಗವಾದಕ್ಷರವು
ಸಂಗಕ್ಕೆ ಸಮರಸವಯ್ಯ ಗುರುವೆ
ಅಂಗಗುಣದಕ್ಷರವು ಲಿಂಗ ತಾನಾದಡೆ
ಲಿಂಗ ನಿರ್ಮಿತವನ್ನು ಯೋಗಿನಾಥ.
139. ಆರಕ್ಷರವಾರಂಗವಾರು ಗುಣಗಳ ಭೇದ
ತೋರುವಡೆ ಚನ್ನಬಸವಯ್ಯ ಬಲ್ಲ
ಆರಕ್ಷರದಂತುವನು ತೋರಿ, ನಿಮ್ಮಯ ನಿಜದ
ಆರೂಢ ಪದವೀಯೊ ಯೋಗಿನಾಥ.
140. ಪಂಚಾಕ್ಷರಿ ಸುಜ್ಞಾನ ಪಂಚಾಕ್ಷರಿ ಪರತತ್ವ
ಪಂಚಾಕ್ಷರಿ ಪರಬ್ರಹ್ಮಮೂರ್ತಿ ತಾನೆ
ಪಂಚಾಕ್ಷರಿ ಜ್ಞಾನಕ್ಕೆ ಜ್ಞಾನಸಂಬಂಧವು
ಪಂಚಾಕ್ಷರಿ ಶಿವ ತತ್ವ ಯೋಗಿನಾಥ.
141, ಸಕಲ ಮಂತ್ರಕ್ಕೀಗ ಮುಕುರವಾಗಿಯೆ ತೋರಿ
ಸಕಲ ಮಂತ್ರಂಗಳಿಂ ಶರಣೆನಿಸಿಕೊಂಬ
ಸುಕೃತ ಮಹಾರಾಜ ಪಂಚಾಕ್ಷರಿ ಪರಿಣತದ
ಪದವು ಉಳಿದರಿಗುಂಟೆ ಯೋಗಿನಾಥ.
142. ಸಪ್ತಕೋಟಿಯು ಮಹಾಮಂತ್ರಂಗಳಿಗೆ ಮಾತೆ
ತತ್ವ ಮೂವತ್ತಾರರಿಂದ ಮೇಲೆ
ಅತ್ಯಧಿಕವೆಂದೆನಿಪ ಪ್ರಣವ ಪಂಚಾಕ್ಷರಿಯು
ಸತ್ಯಶರಣರಿಗಹುದು ಯೋಗಿನಾಥ.
143. ನದನಾತಿಯೆಂದೆಂಬ ಏಳಕ್ಷರದ ಭೇದ-
ವೈದಿತ್ತು ಈರೇಳು ಲೋಕಕಾಗಿ
ಅಯ್ಯನವ್ಯಯ ಪದದಲೊಪ್ಪಿರ್ಪ ಭೇದವನು
ಒಯ್ಯನೆ ಕಂಡೆನೈ ಯೋಗಿನಾಥ.
144, ಕುಂಭಿನಿಯ ಮಸ್ತಕದ ಇಂಬಪ್ಪ ಅಕ್ಷರದ
ಶಂಭು ಕಂಡನು ತನ್ನ ಅಚಿತರದಲಿ
ಕರಿಯ ಕೂಪದ ಒಳಗೆ ಬಿಳಿಯ ಜಲ ಪ್ರಜ್ವಲಿಸೆ
ಅದ ಕಂಡು ಮುಕ್ತನೈ ಯೋಗಿನಾಥ.
145. ಮಂತ್ರ ಮನವಾವರಿಸಿ ಭ್ರಾಂತುಗೆಟ್ಟಿತು ನೋಡ
ಶಾಂತಿಸಲಿಲದಿ ಎನ್ನ ಮೈ ನನೆದುದು
ಕಂತುಕಾಲರನೊದೆದು ಮಹಾಂತ ಮರಣವ ಗೆಲಿದು
ನಿಶ್ಚಿಂತ ಸುಖಿಯಾನಾದೆ ಯೋಗಿನಾಥ.