ಭೋಗಷಟ್ಪದಿ
ಪುಣ್ಯತೀರ್ಥ ಪುಣ್ಯಕ್ಷೇತ್ರ
ಪುಣ್ಯಶೈಲದಲ್ಲಿ ಮೂರು
ಕಣ್ಣನಿಲ್ಲ ಭಕ್ತರುಗಳ ಹೃದಯವಾಸನು || ಪ ||
ತೀರ್ಥಪಕ್ಷಿ ಕೃಷ್ಣವೇಣಿ
ತೀರ್ಥಗಮ್ಯ ತುಂಗಭದ್ರೆ
ತೀರ್ಥಕೋಟಿ ಭಾಗಿರಥಿಯು ಭೀಮರಥಿಗಳು
ತೀರ್ಥಗೋಪ ಯಮುನೆ ಮೊದಲು
ತೀರ್ಥಗಳನ್ನು ತಿರುಗುತಿಹರು?
ತೀರ್ಥಗಳಲ್ಲಿಲ್ಲ ಭಕ್ತರಲ್ಲಿಯಿಪ್ಪನು || ೧ |
ಕಾಶಿ ನೀಲಕಂಠ ಸುರಾ
ಮೇಶ ಕಾಂಚಿ ಗೋವು ಕರ್ಣ
ಈಶ ನದಿಗಳಿಪ್ಪ ಗುಹೆಯು ಹಿಮದ ಕೇದಾರ
ದೇಶಗಳನು ತಿರುಗಿ ಶಿವನ
ವಾಸವನ್ನು ಅರಿಯರವರು
ಈಶನಿಹನು ಭಕ್ತರುಗಳ ಹೃದಯವಾಸದಿ || ೨ ||
ಅನಿಲ ನೀಲ ಕಾರ್ತಿಕಾದ್ರಿ
ಘನಸುರತ್ನ ಶೈಲವಾದಿ
ಇನಿತನೆಲ್ಲ ತಿರುಗುತಿಹರು ಶಿವನನರಸುತ
ಇನಿತು ಸಾಧಕರುಗಳೆಲ್ಲ
ಘನಷಡಕ್ಷರಾಂಕನಿರ್ಪ
ಅನುವನರಿಯರವರು ಭಕ್ತರಲ್ಲಿ ಯೆಂಬುದ || ೩ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ