ಪರಿವರ್ಧಿನಿಷಟ್ಪದಿ
ತಾನೆಂದರಿಯದೆ ಇದಿರೆಂದರಿಯದೆ
ಏನೂ ಇಲ್ಲದೆ ಇರುತಿಹ ಶಿವ ತಾ
ನಾನಂದದಿ ವರ ಮೂರುತಿಯಾದನ ಧ್ಯಾನದೊಳೆಂದಿಹೆನೋ || ಪ ||
ಘನಮಹಿಮನು ನೆನೆದಾಕ್ಷಣ ಮಾತ್ರದಿ
ಜನಿಯಿಸಿ ಗತಿಸುತಿರುವ ಬ್ರಹ್ಮಾಂಡವು
ವನಜೋದ್ಭವ ವನಜಾಕ್ಷರು ಜನಿಸಲು ಕರೆದವರೊಲುವಿನಲಿ
ವನಜೋದ್ಭವ ನೀ ಸೃಜಿಯಿಸು ಲೋಕವ
ವನಜಾಕ್ಷನ ನೀ ರಕ್ಷಿಸು ಎನುತಲಿ
ಅನುವಿತ್ತವರಿಂ ವಂದಿಸಿಕೊಂಬನ ಧ್ಯಾನದೊಳೆಂದಿಹೆನೋ || ೧ ||
ತಪ್ತಸುಕಾಂಚನ ಪ್ರಭೆಗಳ ನೆಲದೊಳು
ದೀಪ್ತಿಸುತಿಹ ರತ್ನಂಗಳ ಕಂಬದಿ
ಒಪ್ಪುವ ವಜ್ರದ ತೊಲೆಬೋದಿಗೆಯಿಂ ನೆಟ್ಟನೆ ಚಲುವಾಗಿ
ತಪ್ಪದೆ ಬೆಳಗುವ ಓಲಗಶಿಲೆಯೊ
ಳಿಪ್ಪಾ ಶಿವಗಣಚಕ್ರದ ಮಧ್ಯದಿ
ಸರ್ಪಾಭರಣವ ಧರಿಸಿದ ಚಲುವನ ಧ್ಯಾನದೊಳೆಂದಿಹೆನೋ || ೨ ||
ಜಗದಗಲದ ಶಶಿಕಾಂತದ ವೇದಿಕೆ
ಮುಗಿಲುದ್ದದ ಮಾಣಿಕ್ಯದ ಕಂಬದಿ
ಬಿಗಿದಿಹ ನೀಲದ ತೊಲೆಗಳು ಒಪ್ಪುವ ಮಣಿಮಂಟಪದೊಳಗೆ
ಹಗಲಿರುಳೆನ್ನದೆ ತುಂಬಿಹ ಮುನಿಗಳ
ಉಘೆಉಘೆ ಜಯಜಯ ಘೋಷದ ಮಧ್ಯದಿ
ಸೊಗುಸುತ್ತಿರುತಿಹ ನಗಜೆಯ ರಮಣನ ಧ್ಯಾನದೊಳೆಂದಿಹೆನೋ || ೩ ||
ಹರಿಯಜ ಸುರದೇವೇಂದ್ರರ ಯಕ್ಷರ
ಗರುಡೋರಗ ಸುರಗಂಧರ್ವಾಸುರ
ವರಕಿನ್ನರ ಕಿಂಪುರುಷರ ಸಿದ್ಧರ ಸಾಧ್ಯರ ಯೋಗಿಗಳ
ಸುರುಚಿರ” ವರಮಣಿಮಕುಟದ ಬೆಳಗಿಂ
ತೆರಹಿಲ್ಲದ ಕಲಕಲರವದೋಲಗ
ದಿರುವಿನ ಮಧ್ಯದೊಳೊಪ್ಪುವ ಪರಶಿವ ಧ್ಯಾನದೊಳೆಂದಿಹನೋ೦ || ೪ ||
ಝಗಝಗಿಸುವ ಶಶಿಸೂರ್ಯರ ಬೆಳಗಿಂ
ಮಿಗೆ ದೇವರ್ಕಳ ಮಕುಟದ ಬೆಳಗಿಂ
ಸೊಗಸುತ್ತಿರುತಿಹ ರತ್ನದ ಓಲಗಶಾಲೆಯ ತೇಜದೊಳು
ಗಗನವ ತುಂಬಿದ ಮಿಗೆ ಬೆಳಗಿನೊಳುರೆ
ಹಗಲಿರುಳೆನ್ನದೆ ಓಲಗದೊಳಗಿಹ
ನಗೆಮೊಗದಾ ಸುಷಡಕ್ಷರ ಲಿಂಗದ ಧ್ಯಾನದೊಳೆಂದಿಹನೋ || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ