Previous ಅಂತ್ಯ ಪ್ರಸಾದಿ ಶಿವಲಿಂಗದೊಳಗಣ ಜಂಗಮಲಿಂಗ Next

ಉರಿವ ಕಮಲ

*

ರಚನೆ: ಚೆನ್ನಬಸವಣ್ಣ

ರಾಗ: ಮಧುಮಾಧವಿ


ಸರವರದೊಳಗೊಂದು ಉರಿವ ಕಮಲವಿರ್ದು
ಪರಿಮಳವೆಸೆವುತಲಿ
ಅರಳುತಿರಲು, ಕೊಯ್ದು ಕರಡಿಗೆಯೊಳಗಿಟ್ಟು
ಸುರಕ್ಷಿತವ ಮಾಡಲರಿದು ||ಪ||

ಕರದ ಕೈಯಲಿ ಪುಷ್ಪ, ಉರದ ಕೈಯಲಿ ಲಿಂಗ,
ನೆರೆದು ಪೂಜೆಯ ಮಾಡಲರಿದು
ಇರವ ಬೋನವ ಮಾಡಿ, ಸರವ ತೃಪ್ತಿಯಂಗೊಟ್ಟು
ಭರಿತರಾಗಿರ್ಪವರಾರು ಹೇಳಾ? ||೧||

ಪರದೇಶ-ಮಂಡಲದಿರವ ನೆಲೆಯ ಮಾಡಿ
ಪರಿಣಾಮಿಸಬಲ್ಲವರಾರು?
ಕರುವಿಟ್ಟಂದದಿ ಕಂಗಳು ಹಳಚದೆ
ಧರೆಯ ಮೇಲೆ ನೋಡುವರಾರು ಹೇಳಾ? ||೨||

ಹರಿವ ವೃಷಭನಲ್ಲಿ ಮೆರುವ ಸ್ವಾಮಿಯ ಕಂಡು,
ಜರಾಮರಣವಿಲ್ಲದೆ ನಿಂದ
ಕರುಣಿ ಕೂಡಲಚೆನ್ನಸಂಗ ಪ್ರಭುವಿನ
ಕರುಣವು ಬಸವಣ್ಣಂಗಾಯಿತು! ||೩||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಅಂತ್ಯ ಪ್ರಸಾದಿ ಶಿವಲಿಂಗದೊಳಗಣ ಜಂಗಮಲಿಂಗ Next