Previous ದಾಸೋಹವ ನೋಡಲೆಂದು ಮನಭಾವ ಕರಣದೊಳ.... Next

ಲಿಂಗವ ನೋಡಿ ನೋಡಿ...

*

ರಚನೆ: ಧರ್ಮಗುರು ಬಸವೇಶ್ವರ


ಲಿಂಗವ ನೋಡಿ ನೋಡಿ ಶಿವ
ಸುಖರತಿಯೊಳಗೋಲಾಡಿ
ಆಡಿ ಮೈಮರೆವುತ ಪೂಜೆಯ
ಮಾಡುತ್ತಿಪ್ಪೆನಯ್ಯಾ || ಪ ||

ಹೊರಗೆ ಮಾಡುತಿರ್ಪ ಸತ್ಕ್ರಿಯಾ ಮಂ
ಗಳಮಯವಾಗಿದೆ ಒಳಗೆ ಕಣ್‌ದೆರೆದು
ಪರಮಾನಂದದ ರಸದೊಳಗೆ ಓ
ಕುಳಿಯನಾಡುತಿಪ್ಪೆನಯ್ಯಾ || ೧ ||

ಮನದ ನೆನಹು ಭಾವದೊಳಗೆ
ಅನುಪಮವಾಗಿರಲಳವಟ್ಟು
ಘನ ಸುಖ ಕರತಳಾವಳಕವಾಗಿ ನಿಮ್ಮೊ
ಳೆರಡರಿಯದೆ ನೋಡುತ್ತಿರ್ದೆನಯ್ಯಾ || ೨ ||

ನಿಮ್ಮ ನೋಟವೆನಗೆ
ಉಪಮಿಸಬಾರದ ಕೂಟ
ನಿಮ್ಮ ನೋಟ ರತಿಯೊಳಗೆ
ಆನೇನೆಂದರಿಯೆನಯ್ಯಾ || ೩ ||

ರೋಮಾಂಚ ಗುಡಿಗಟ್ಟಿ
ಆಮಿಷ ವಿಷಯಂಗಳ ಮರೆದು ನಿಮ್ಮ
ನಾಮಾಮೃತವ ರಸದೊಳಗೆ ಆನಿತರೇ
ತರವನರಿಯದಿರ್ದೆನಯ್ಯಾ || ೪ ||

ಕಂಗಳ ನೋಟವೆ ಕರುವಾಗಿ
ಮನದ ಕೂಟವು ಜ್ಞಾನದಲ್ಲಿ
ಹಿಂಗದೆ ನಿಮ್ಮ ಸಂಗ ಸಮನಿಸಿ ಕೂಡಲ
ಸಂಗಯ್ಯಾ ಲಿಂಗಯ್ಯಾ ಎನುತಿರ್ದೆನಯ್ಯಾ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ದಾಸೋಹವ ನೋಡಲೆಂದು ಮನಭಾವ ಕರಣದೊಳ.... Next