ರಚನೆ: -ಪ್ರಥಮ ಶೂನ್ಯ ಪೀಠಾಧೀಶ ಅಲ್ಲಮ ಪ್ರಭು
ದೇಹಗುಣಗಳಳಿದು ಲಿಂಗದೇಹಿಯಾದ ಶರಣನು
ಬಹಿರಂಗದ ಬಳಕೆ ಮಾಯಾಮೋಹವನ್ನು ಜರಿದನು || ಪ ||
ಭಾವ ಬ್ರಹ್ಮವಾದ ಯತಿಗಿನ್ನಾವ ವೇಷವೇತಕೋ
ದೇಹಲಿಂಗವಾದ ಬಳಿಕಿನ್ನಾವ ಪದಗಳೇತಕೋ || ೧||
ಮಲವ ತೊಳೆಯಲರಿಯದ ಮಲಜಲಧಿ ತೊಳೆವೆನೆಂಬೆಯೋ
ಒಳಗೆ ಹೊರಗೆ ಲಿಂಗವಿರಲು ತೊಳಲಿ ಬಳಲಲೇತಕೋ || ೨ ||
ಮುತ್ತುರತ್ನ ಸಿತಕೆ ಕೃತಕೆ ಮತ್ತೆ ಪೂರ್ವಕ್ರಿಯೆಗಳುಂಟೆ
ನಿತ್ಯ ಮುಕ್ತ ಶರಣಗುಂಟೆ ಪೂರ್ವ ಚರಿತವು || ೩ ||
ಬ್ರಹ್ಮ-ವಿಷ್ಣು-ರುದ್ರ ಪದದ ಪೆರ್ಮೆಗಳಿಗೆ ಎಣಿಸದ
ನಿರ್ಮಲದ ಲಿಂಗದಲ್ಲಿ ಸಂಬಂಧಿಸಿದ ಶರಣನು || ೪ ||
ಅಪ್ರತಿಗಮ್ಯದಲ್ಲಿ ನಿಃಪತಿಯನೆಯ್ದಿದ
ಅಪ್ರಮಾಣ ಗುಹೇಶ್ವರನೊಳಿಪ್ಪಗಮ್ಯ ಶರಣನು || ೫ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”