Previous ಅಂದಾದನಂದು ಬಸವಲಿಂಗವೆಂಬೈದಕ್ಷರಗಳು Next

ಶರಣು ಶರಣು ಎನ್ನ ಗುರುವೆ

ರಚನೆ: ಚೆನ್ನಬಸವಣ್ಣ


ಶರಣು ಶರಣು ಎನ್ನ ಗುರುವೆ ಶರಣಯ್ಯ
ಶರಣು ಉಪಮಾತೀತ ಜ್ಞಾನಗುರುವೆ
ಲಿಂಗಜಂಗಮವೆ ಘನವೆಂದು ಪ್ರಸಾದವನು
ಹಿಂಗದಾ ನಿಜಪದವ ತೋರಿದ ಗುರುವೆ || ಪ ||

ಸಾಕಾರರೂಪನೇ ತಾಳಿ ಬಿಜ್ಜಳಗೆ
ಬೇಕಾದ ದೃಷ್ಟವನು ತೋರಿದ ಗುರುವೆ
ವಿಸ್ತರಿಸಿ ಜಗಕೆ ನೀನಾಗಿ ಎನ್ನುವನು
ತಪ್ಪಿಸಿ ಹೋದೆನ್ನ ಪರಮಗುರುವೆ || ೧ ||

ಭಕ್ತ-ಮಾಹೇಶ್ವರ-ಪ್ರಸಾದಿ-ಪ್ರಾಣಲಿಂಗಿ
ಶರಣೈಕ್ಯ ಸ್ಥಲದಲ್ಲಿ ನಡೆದ ಗುರುವೆ
ಸೋಹಿ ದಾಸೋಹಿ ನೀನಾಗಿ ಭಕ್ತರಿಗೆ
ಇಹಪರದ ಸುಖವನ್ನು ತೋರಿದ ಗುರುವೆ || ೨ ||

ನಾದಬಿಂದು ಕಳಾತೀತ ಮಹಾಘನದ
ಆದಿ ಲಿಂಗ ಅನಾದಿ ಶರಣ ಗುರುವೆ
ಮಿಂಚು ಮಿಂಚನೆ ಕೂಡಿದಂತೆ ಇದರ
ಸಂಚವನು ಏನೆನ್ನಬಹುದು ಗುರುವೆ || ೩ ||

ಅರಿವು ಕುರುಹನೆ ಅರಸಿ ಬರಲು ಆ ಕುರುಹು
ಅರಿವನೊಳಕೊಂಡುದನು ಅರಿದ ಗುರುವೆ
ಜ್ಞಾತೃ ಜ್ಞಾನ-ಜ್ಞೇಯವೆಂಬ ತ್ರಿವಿಧದ
ಮಾತುವನು ಹಿಂಗಿದಾ ಜ್ಞಾನಗುರುವೆ || ೪ ||

ಭಾವ ಭಾವನೆ ಭಾವಿಸಲು ಅನುಭಾವ ನಿ
ರ್ಭಾವವೇಕಾರ್ಥವೆಂದರಿದ ಗುರುವೆ
ಕೂಡಲಚನ್ನಸಂಗಯ್ಯ ನಿಮ್ಮವನು
ಬಸವಲಿಂಗಾ ಲಿಂಗ ಎಂಬ ಗುರುವೆ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಅಂದಾದನಂದು ಬಸವಲಿಂಗವೆಂಬೈದಕ್ಷರಗಳು Next