Previous ಎಂಜಲೆಂಜಲೆನ್ನದೆ ನೀನು... ಜೋ ಜೋ ಎನ್ನ ಪರಮಹಂಸ Next

ಅಲ್ಲಿರ್ಪ ಸಂಗಯ್ಯ ಇಲ್ಲಿಲ್ಲವೆ!

ರಚನೆ: ಶ್ರೀಗುರುಮಾತೆ ನೀಲಮ್ಮತಾಯಿ (ನಿಲಾಂಬಿಕೆ)


ನೋಡು ನೋಡು ನೋಡು ನೋಡು ನೋಡು ಲಿಂಗವೇ
ನೋಡು ಬಸವಯ್ಯಗಳು ಮಾಡಿದಾಟವಾ || ಪ ||

ಅಲ್ಲಿಗೆನ್ನನು ಬರಹೇಳಿದರಂತೆ
ಅಲ್ಲಿರ್ಪ ಸಂಗಯ್ಯ ಇಲ್ಲಿಲ್ಲವೇ
ಅಲ್ಲಿ ಇಲ್ಲಿ ಎಂಬ ಉಭಯ ಸಂದೇಹವು
ಬಲ್ಲ ಮಹಾತ್ಮರಿಗಿದು ಗುಣವೇ || ೧ ||

ಹರಳಯ್ಯ ಮಧುವಯ್ಯನವರಿಗೆ ಎಳೆಹೂಟ್ಟೆ
ದುರುಳ ಬಿಜ್ಜಳನು ಕಟ್ಟಿದನೆಂದರೆ
ಇರಬಾರದಲ್ಲೀಗ ಶರಣರಿಗರುಹೆಂದು
ಅರಸು ಬಸವರಾಜ ಪೇಳರಂತೆ || ೨ ||

ನುಡಿಯ ಲಾಲಿಸು ಬೇಗ ಕೆಡುವುದೀ ಕಲ್ಯಾಣ
ಒಡೆಯ ಸಂಗಮನೊಳು ಬೆರೆದರಂತೆ
ತಡವೆ ಮಾಡದೆ ಮಡದಿಯರಿಗರುಹಿರೆಂದು
ಒಡೆಯ ಬಸವರಾಜ ನುಡಿದರಂತೆ || ೩ ||

ಅಪ್ಪಣ್ಣಗಳು ಎನ್ನ ಕರೆಯಬಂದಿಹರೊ
ಕಪ್ಪಡಿ ಸಂಗಮನಾಥ ಕೇಳೋ
ಪುಷ್ಪಕ್ಕೆ ಪರಿಮಳ ಬೆರೆದಂತೆ ಮನವನು
ಅಪ್ಪಿದ ಲಿಂಗವೇ ಮಾತನಾಡೋ || ೪ ||

ಪೊಡವಿಯ ಭಕ್ತಗಣಂಗಳು ಸಹವಾಗಿ
ಮಡಗಿದ ಶ್ರೀಗುರು ಕರದಲ್ಲಿ
ದೃಢಚಿತ್ತ ಕರಿಗೊಂಡು ಕೂಡಿಹೆನೆಂದರೆ
ನ್ನೊಡೆಯ ಸಂಗಮನಾಥ ನೀವಲ್ಲವೆ || ೫||

ಸಂಗನಬಸವಣ್ಣನೆಂದ ನಿರೂಪಕೆ
ಹಿಂಗದೆ ಕರವೆತ್ತಿ ಮುಗಿಯುತಲಿ
ಸಂಗಮನಾಥನೆ ನೀವೆಂದೆನುತಲೆನ್ನ
ಅಂಗೈಯ ಲಿಂಗದೊಳಡುಗುವೆ || ೬ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಎಂಜಲೆಂಜಲೆನ್ನದೆ ನೀನು... ಜೋ ಜೋ ಎನ್ನ ಪರಮಹಂಸ Next