ರಚನೆ: ಶ್ರೀಗುರು ಸೊಡ್ಡಳ ಬಾಚರಸರು
ಸತ್ಯ ಸದಾಚಾರದಲ್ಲಿ ನಡೆವುದು
ಮಿಥ್ಯ ವಂಚನೆಯನರಿಯದೆ
ಚಿತ್ತದಲ್ಲಿ ನಿರ್ಮಳನಾಗಿರ್ಪಡೆ
ಮುಕ್ತಿ ಬೇರುಂಟೆ ಹೇಳಾ || ಪ ||
ಸರ್ವಜೀವಂಗಳ ಹಿಂಸೆಯ ಮಾಣ್ಬುದು
ಓರ್ವರನು ಕೆಡೆ ನುಡಿಯದೆ
ವ್ಯರ್ಥ ಸಂಸಾರದ ನಿತ್ಯವನರಿದು
ತತ್ವ ವಿವೇಕದಿ ನಡೆವುದು || ೧ ||
ಅನ್ಯರನು ಕೆಡೆನುಡಿಯದೆ
ತನ್ನ ತಾನ ನಿರ್ಬಂಧಿಸದೆ
ತನುಮನ ಧನದಲ್ಲಿ ಕಪಟವಿಲ್ಲ
ದಿರಬಲ್ಲಡಾತನೆ ಹಿರಿಯನು || ೨ ||
ನಿಂದಿಸಬೇಡ ಸ್ತುತಿಸಬೇಡ
ಬಂಧಿಸಬೇಡ ಮನದಲ್ಲಿ
ಒಂದಲ್ಲ ದೆರಡನರಿಯದಿರ್ದಡೆ
ಮುಂದಣ ಮುಕುತಿ ತನ್ನಲ್ಲಿ || ೩ ||
ಸಮತೆ ಶಾಂತಿ ಸದುಗುಣಿಯಾಗಿ
ಕ್ರಮವನರಿದು ತನಗೆ ತನ್ನ ಮನಕ್ಕೆ
ಮನಮೆಚ್ಚ ನಡೆದಡಲ್ಲಿಯೆ ಶಿವನು
ತನ್ನಲ್ಲಿಯೇ ನೆಲಸಿರ್ಪನು || ೪ ||
ತಾನಾರಿಗೂ ಮುನಿಯದೆ ತನ್ನ
ನೊಬ್ಬರು ನಿಂದಿಸಿದರೆನ್ನದೆ ಸಮಾ
ಧಾನಿಯಾಗಿರ್ಪ ಶರಣನ
ವೀರ ಸೊಡ್ಡಳನಗಲದಿರ್ಪನು || ೫ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”