ಎತ್ತು ತೊತ್ತು ತೊಂಡನಾಗಿ ಇರಿಸು
|
|
ಭೋಗಷಟ್ಪದಿ
ಮಿಥ್ಯವನ್ನು ಅಳಿದು ಸಹಜ
ಸತ್ಯವುಳ್ಳ ಶರಣರಲ್ಲಿ
ಎತ್ತು ತೊತ್ತು ತೊಂಡನಾಗಿ ಇರಿಸು ಎನ್ನನು || ಪಲ್ಲವಿ ||
ತಂದೆ ತಾಯಿ ಸತಿಯು ಸುತರು
ಬಂಧು ಬಳಗ ಮಿತ್ರರಾದಿ
ಅಂದು ಇಲ್ಲ ಇಂದು ಎನಗೆ ಸಟೆಗಳೆನುತಲಿ
ಇಂದುಧರನ ಸುತನು ನಾನು
ಎಂದು ತಿಳಿದ ಶರಣರುಗಳ
ಕಂದನಾಗಿ ಇರಿಸು ನಿಮ್ಮ ಧರ್ಮದಿಂದಲಿ || ೧ |
ಹೊನ್ನು ಎನಗದೇಕೆ ಕೃತಕ
ಹೆಣ್ಣು ಎನಗದೇಕೆ ಮಿತ್ತು
ಮಣ್ಣು ಎನಗದೇಕೆ ಎಲ್ಲ ಸಟೆಗಳೆನುತಲಿ
ಪನ್ನಗೇಂದ್ರಾಭರಣ ಪಾದ
ನನ್ನಿ ಎಂದು ನಂಬಿ ತಿಳಿದ
ಚನ್ನ ಶರಣರುಗಳ ತನುಜನೆನಿಸು ಎನ್ನನು || ೨ ||
ಆಸೆ ಎನಗದೇಕೆ ಬಹಳ
ರೋಷವೆನಗದೇಕೆ ಭವದ
ಪಾಶ ಎನಗದೇಕೆ ಎಲ್ಲ ಸಟೆಗಳೆನುತಲಿ
ಈಶ ನಿಮ್ಮ ನಂಬಿ ನಚ್ಚಿ
ವಾಸರಿಸದ ಶರಣರುಗಳ
ವಾಸದಲ್ಲಿ ದಾಸನಾಗಿ ಇರಿಸು ಎನ್ನನು || ೩ ||
ಎನಗೆ ಯಮನ ಭೀತಿ ಏಕೆ
ಎನಗೆ ಮದನ ಭಯವದೇಕೆ
ಎನಗೆ ಮಾಯೆ ಮರವೆಯೆಲ್ಲ ಸಟೆಗಳೆನುತಲಿ
ಎನಗೆ ಶಿವನೆ ಕರ್ತನೆಂದು
ಮನದೊಳರಿದ ಶರಣರುಗಳ
ಮನೆಯ ತನಯನೆನಿಸು ನಿಮ್ಮ ಕರುಣದಿಂದಲಿ, || ೪ ||
ಲಿಂಗದಲ್ಲಿ ಜನನವೆನಗೆ
ಲಿಂಗದಲ್ಲಿ ಮರಣವೆನಗೆ
ಲಿಂಗವೆನಗೆ ಸ್ವಸ್ತಿಧಾಮ ಎಂದು ತಿಳಿವುತ
ಹಿಂಗದಿರುವ ಶರಣರುಗಳ
ಲೆಂಗಿಯೆನಿಸು ಷಡಾಕ್ಷರಿಯ
ಲಿಂಗ ನಿಮ್ಮ ಧರ್ಮದಿಂದ ಬಿಡದೆ ಎನ್ನನು || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ
ಉಲ್ಲೇಖ ಟಿಪ್ಪಣಿ: ಮುಪ್ಪಿನ ಷಡಕ್ಷರಿಗಳ ಹೆಚ್ಚಿನ ಪದಗಳು