Previous ಹೆದರಿ ನುಡಿಯಲಮ್ಮನು ಭಜತಿಯರರೆ Next

ವಿಕಸವಾಗಲಿ

ಭೋಗಷಟ್ಪದಿ

ಇಂದ್ರಿಯಂಗಳಿಚ್ಛೆಗಳಿಗೆ
ಮುಂದುವರಿದು ಮನವು ಕೆಟ್ಟು
ಇಂದುಧರನ ಕಡೆಗೆ ಮುಖವದಾಗಲೀಯದು || ಪ ||

ಪಿಕನ ಚೆಲ್ವ ಗಾನ ಧ್ವನಿಯ
ಶುಕನ ಶಿಶುವಿನಂತೆ ನುಡಿವ
ಸಖಿಯರುಗಳ ನುಡಿಗೆ ಕಿವಿಯು ಕಿವುಡು ಬೀಳಲೈ
ಸಕಲ ಶಿವನ ಶಾಸ್ತ್ರಗಳನು
ಪ್ರಕಟವಾಗಿ ಕೇಳಿಕೇಳಿ
ಸುಖಿಸುವದಕೆ ಎನ್ನ ಶ್ರೋತ್ರ ವಿಕಸವಾಗಲೈ || ೧ |

ಹೊನ್ನಿನಲಗಿನಂತೆ ಹೊಳೆವ
ಕನ್ನೆಯರುಗಳಂಗ ಸೋಂಕ
ಲೆನ್ನ ತನುವು ಕಲ್ಲು ಮರನ ಭಾವವಾಗಲೈ
ಚೆನ್ನ ಶಿವನ ಚರಣಧೂಳಿ
ಯನ್ನು ಪೂಸಿ ಹೊರಳುವದಕೆ
ಎನ್ನ ತನುವು ಉಬ್ಬಿಕೊಬ್ಬಿ ವಿಕಸವಾಗ ಲೈ || ೨ ||

ತೊಳಪಗಣ್ಣ ಕಳಶಕುಚದ
ಎಳೆಯಪೆಣ್ಣ ನೋಡುವುದಕ್ಕೆ
ಹೊಳೆವ ನಯನವೆರಡು ಎನಗೆ ಕುರುಡು ಬೀಳಲೈ
ಎಳೆಯಚಂದ್ರಧರನ ಚೆಲುವ
ನಲಸದೊಲಿದು ನೋಡುವುದಕೆ
ಕಳೆಗಳಾಗಿಯೆನ್ನ ನಯನ ವಿಕಸವಾಗಲೈ|| ೩ ||

ಅಂಬುಜಾಕ್ಷಿಯರುಗಳಧರ
ಚುಂಬನಕ್ಕೆ ಎನ್ನ ಜಿಹ್ವೆ
ಹಂಬಲಿಸದ ಹಾಗೆ ಸೀಳಿ ಪುಗುಳವೇಳಲೈ
ನಂಬಿ ಶಿವನ ಶರಣರುಗಳ
ತಂಬುಲವನು ಸವಿಸುವುದಕ್ಕೆ
ಅಂಬುರುಹದ ತೆರದಿ ಜಿಹ್ವ ವಿಕಸವಾಗಲೈ || ೪ ||

ಅಂಗನೆಯರು ತೊಡೆದು ಸೂಡಿ
ದಂಗಪುಷ್ಪ ವಾಸಿಸುವೊಡೆ
ಹಿಂಗದನ್ನ ನಾಸಪುಟಕೆ ನಗಡಿಯಾಗಲಿ
ಮಂಗಳಾತ್ಮ ಷಡಕ್ಷರಿಯ
ಲಿಂಗದಂಫ್ರಿಗಿತ್ತ ಕುಸುಮ
ಹಾಂಗ ವಾಸಿಸುವರ ಫ್ರಾಣ ವಿಕಸವಾಗಲೈ || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಹೆದರಿ ನುಡಿಯಲಮ್ಮನು ಭಜತಿಯರರೆ Next