ಭೋಗಷಟ್ಪದಿ
ಪನ್ನಗೇಂದ್ರಭರಣ ಕೇಳು
ನಿನ್ನ ವಿಕಳವಸ್ಥೆಯಲ್ಲಿ
ಎನ್ನ ಪ್ರಾಣ ಬಿಡುವ ಹಾಗೆ ಎಂದಿಗಪ್ಪುದೋ || ಪ ||
ಎರಳೆ ಶಿಶುವು ತಾಯ ತಪ್ಪಿ
ಅರಸಿಯರಸಿ ತೊಳಲಿಬಳಲಿ
ಇರದೆ ತಾಯ ವಿಕಳದಲ್ಲಿ ಸಾಯುವಂದದಿ
ಹರನ ಮೆಚ್ಚಿ ಮರುಳಗೊಂಡು
ಇರುಳು ಹಗಲು ನೆನೆದುನೆನೆದು
ಹರಣ ಬಿಡುವ ಹಾಗೆ ಎನಗೆ ಎಂದಿಗುದೋ || ೧ ||
ದಶದವಸ್ಥೆಯುಳ್ಳ ಕಾಂತೆ
ಒಸೆದು ಪುರುಷ ಬಾರದಿರಲು
ಸಸಿನೆ ಅವನ ವಿಕಳತೆಯಲ್ಲಿ ಸಾವ ತೆರದೊಲು
ಶಶಿಯ ಧರಿಸಿದವಗೆ ಸೋತು
ಹಸಿವನರತು ವಿಕಳತೆಯಲಿ
ಅಸುವ ಬಿಡುವ ಹಾಗೆ ಎನಗೆ ಎಂದಿಗಪುದೋ || ೨ ||
ಧನವ ಬಹಳ ಗಳಿಸಿದವನು
ತನುವ ಬಿಡುವ ಕಾಲದಲ್ಲಿ
ಧನದ ವಿಕಳತೆಯಲ್ಲಿ ಪ್ರಾಣ ಬಿಡುವ ತೆರನೊಳು
ಮನಸಿಜಾರಿಯನ್ನು ಮಚ್ಚಿ
ನೆನೆದುನೆನೆದು ವಿಕಳತೆಯಲಿ
ತನುವ ಬಿಡುವ ಹಾಗೆ ಎನಗೆ ಎಂದಿಗಫುದೋ || ೩ ||
ಬಂಧುವರ್ಗವುಳ್ಳ ನರನು
ಸಂದು ಹೋಹ ಕಾಲದಲ್ಲಿ
ಕುಂದದವರ ವಿಕಳತೆಯಲ್ಲಿ ಸಾವ ತೆರನೊಳು
ಇಂದುಧರನ ನೆನೆದುನೆನೆದು
ಕುಂದಿಕುಸಿದು ವಿಕಳತೆಯಲಿ
ಹಿಂದೆ ಮರೆದು ತನುವ ಬಿಡುವುದೆಂದಿಗಪುದೋ || ೪ ||
ಎಲ್ಲಿ ಮಚ್ಚು ಎಲ್ಲಿ ಮೋಹ
ಎಲ್ಲಿ ಪ್ರೀತಿ ಎಲ್ಲಿ ಪ್ರೇಮ
ಅಲ್ಲಿ ಅವರ ವಿಕಳತೆಯಲಿ ಸಾವ ತೆರನೊಳು
ಇಲ್ಲಿ ಹಿಂದುಮುಂದು ಮರೆದು
ಅಲ್ಲಿ ಷಡಕ್ಷರಿಯ ಲಿಂಗ
ದಲ್ಲಿ ಪ್ರಾಣ ಬಿಡುವ ಹಾಗೆ ಎಂದಿಗಪ್ಪುದೋ || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ