Previous ಸಂಗನೆಂದಂತೆ ಎಂದನಾಗಿ ಏನೋ ನನ್ನ ನಲ್ಲ Next

ಓರಂತೆ ಮನಸೋತೆ

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ


ಕರಕರೆ ಕರಕರೆ ಘನವಯ್ಯೋ
ಕರೆದು ಹೇಳಿ ಎಮ್ಮವರಿಗೆ ಸುದ್ದಿಯ! |ಪ|

ಅತ್ತೆಯ ಮಾತುಗಳೆ ಚಿತ್ತವ ಕಲಕಿವೆ,
ಮತ್ತೆ ಮಾವನೊಳ್ಳಿದನಲ್ಲ; ಎನ್ನ
ಚಿತ್ತವಲ್ಲಭನಿಂದಾದ ಭಂಡ ನಾ
ವಿಸ್ತರಿಸಲಾರೆ; ಹೇಳಿ, ಎಮ್ಮವರಿಗೆ |೧|

ಮುನ್ನ ಹುಟ್ಟಿದ ಮೂರು ಮಕ್ಕಳ ಕಾಟ,
ಕನ್ನೆಯರೈವರ ಕೂಡಿಕೊಂಡು
ಮನ್ನಣೆಯೆನಿತಿಲ್ಲ ಮೈದುನರೈವರ;
ಇನ್ನಿರಲಾರೆ, ಹೇಳಿ, ಎಮ್ಮವರಿಗೆ |೨|

ನಾರಿಯರೈವರ ಕೂಡಿಕೊಂಡು, ನಾ
ದಾರಿಸಂಗಡವಾಗಿ ಬರುತಿರಲು,
ಭೋರನೆ ಶ್ರೀಶೈಲ ಚೆನ್ನಮಲ್ಲೇಶಂಗೆ
ಓರಂತೆ ಮನಸೋತೆ ಸಾರಿತ್ತ ಬಾರೆನೆ, ತಾಯಿ! |೩|

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಸಂಗನೆಂದಂತೆ ಎಂದನಾಗಿ ಏನೋ ನನ್ನ ನಲ್ಲ Next