Previous ಧರೆಯ ಭೋಗವಸ್ಥಿರ ಸಿರಿಯು ಕನಸಿನಂತೆ Next

ಎಂದಿಗಪ್ಪುದೋ

ಭೋಗಷಟ್ಪದಿ

ಲಿಂಗವಂಗದಲ್ಲಿ ಇರಲು
ಲಿಂಗವೆಂದು ಕಾಂಬ ಮನವ
ಲಿಂಗ ನೀನೆ ಕೊಟ್ಟು ಸಲವು ಬಯಕೆ ಎನಗಿದು || ಪ ||

ಅಂದಣವನ್ನೇರಿ ಭಕುತ
ಗೊಂದಣದಿಂ ನುತಿಸಿಕೊಳುತ
ಚಂದದಿಂದ ಬರಲು ಆಚೆಯಲ್ಲಿಯೊರ್ವರು
ಕುಂದಿಕುಸಿದು ವೃದ್ಧರಾಗಿ
ಚಂದವಳಿದು ಬರಲು ಅವರ
ಇಂದುಧರನ ಸಮವಕಾಣುದೆಂದಿಗಪ್ಪುದೊ || ೧ |

ಯತಿಗಳೆನಿಸಿಕೊಂಡು ಕಾಮ
ಜಿತರು ಎನಿಸಿಕೊಂಡು ಜ್ಞಾನ
ಮತಿಗಳೆನಿಸಿಕೊಂಡು ಬರಲು ಆಚೆಯೋರ್ವರು
ಸತಿಯ ಕೂಡಿಕೊಂಡು ಬರುತ
ನುತಸುಲಿಂಗ ಕೊರಳೊಳಿರಲು
ಶಿತಿಸುಕಂಠನೆಂದು ಕಾಂಬುದಂದಿಗಪ್ಪುದೋ || ೨ ||

ವಸ್ತ್ರಭೂಷಣವನ್ನು ಹೊದೆದು
ಪುಸ್ತಕವನು ಹಿಡಿದುಕೊಂಡು
ಅರ್ತಿಯಿಂದ ಬರಲು ಆಚೆಯಲ್ಲಿಯೊರ್ವರು
ಹಸ್ತ ಪಾದ ಮುಡುಬರಾಗಿ
ಹಸ್ತದಲ್ಲಿ ಲಿಂಗವಿರಲು
ವಸ್ತುವೆಂಬ ಕಾಂಬ ಮನವು ಎಂದಿಗಪದೊ || ೩ ||

ಕಾವಿಯಂಬರವನು ಹೊದೆದು
ಸಾವಿರಕ್ಷಮಾಲೆ ಕೊರಳ
ತೀವಿ ಧರಿಸಿ ಬರಲು ಆಚೆಯಲ್ಲಿಯೊರ್ವರು
ಸೇವಕತ್ವದಿಂದ ತುರುವ
ಕಾವುತಿರಲು ಲಿಂಗವಿರಲು
ದೇವನೆಂದು ಕಾಂಬ ಮನವದೆಂದಿಗುದೊ || ೪ ||

ಸ್ಪಷ್ಟವಾಗಿ ನುಡಿದು ಶಾಸ್ತ್ರ
ಶ್ರೇಷ್ಠರೆನಿಸಿಕೊಂಡು ಭಕುತಿ
ನಿಷ್ಠವಂತರಾಗಲಾಚೆಯಲ್ಲಿಯೊರ್ವರು
ಕುಷ್ಠರಾಗಿ ಹಸ್ತಪಾದ
ನಷ್ಟರಾಗಿ ಇರಲು ಅವರು
ಸೃಷ್ಟಿಗೀಶನೆಂದು ಕಾಂಬುದೆಂದಿಗಪ್ಪುದೊ || ೫ ||

ಕುರಿಯ ಕಾಯುತಿರಲಿ ಅವರು
ಕರುವ ಕಾಯುತಿರಲಿ ಅವರು
ಕೆರವ ಹೊಲಿಯುತಿರಲಿ ಅವರು ಲಿಂಗವಂಗದಿ
ಧರಿಸಿ ಭಸಿತವಕ್ಷಮಾಲೆ
ಇರಲು ಶಿವನ ಸಮವದೆಂದು
ಅರಿದು ಶರಣು ಮಾಡುತಿರ್ಪುದೆ೦ದಿಗವುದೊ || ೬ ||

ಅಷ್ಟಷಷ್ಠಿ ತೀರ್ಥಗಳನ್ನು
ಮೆಟ್ಟಿ ಬಂದ ಮಹಿಮೆಯನ್ನು
ದೃಷ್ಟಗೊಳಿಸಿ ಮೆರೆಯಲಾಚೆಯಲ್ಲಿಯೊರ್ವರು
ಕಟ್ಟಿಗೆಯನು ಹೊತ್ತುಕೊಂಡು
ಕಷ್ಟಪಡುತ ಬರಲು ಅವರ
ಶ್ರೇಷ್ಠರಿವರು ಎಂದು ಕಾಂಬುದಂದಿಗಪ್ಪುದೊ || ೭ ||

ಮಲಿನಕಾಯರಾಗಿ ಬಹಳ
ಮಲಿನಕಪಡವನ್ನು ಹೊದೆದು
ಹೊಲೆಯರಂಗಳದಲಿ ಮನೆಯ ಕಟ್ಟಿಕೊಂಡಿರೆ
ಚಲುವಲಿ೦ಗವಂಗದಲ್ಲಿ
ನೆಲಸಿ ಇರಲು ಅವರ ಶಿವನ
ಕುಲವಿದೆಂದು ನಮಿಸುತಿರ್ಪುದಂದಿಗಪುದೊ || ೮ ||

ಕಾಕರಾಗಲವರು ವಿಷಯ
ನೀಕರಾಗಲವರು ಬಹಳ
ಪೋಕರಾಗಲವರ ಅಂಗದಲ್ಲಿ ಲಿಂಗವು
ಸೋಂಕಿ ಸೊಗಸುತಿರಲು ಅವರ
ನೇಕನಾಥನೆಂದು ಕಾಂಬ
ಏಕ ಚಿತ್ತವನಗೆ ಬಿಡದೆ ಎಂದಿಗಪ್ಪುದೊ || ೯ ||

ಹಗೆಗಳಣ್ಣ ತಮ್ಮ ಹಿತವ
ಬಗೆವ ತೊತ್ತು ಮಿತ್ರ ಬಂಟ
ಅಗಲದಿರ್ಪ ಸತಿ ಸುಪುತ್ರ ಮಾತೆ ಪಿತರೊಳು
ಸೊಗಸಿ ಬೆಳಗುತಿರಲು ಲಿಂಗ
ಅಗಲದವರ ಅಂಗದಲ್ಲಿ
ನಗಜೆ ಪತಿಯ ಸಮವ ಕಾಂಬುದಂದಿಗುದೋ || ೧೦ ||

ವೇಶಿಯರನು ಕೂಡಿಕೊಂಡು
ಓಸರಿಸದೆ ಅವರ ಹೆಗಲ
ವಾಸದಲ್ಲಿ ತೋಳನಿಡಿದುಕೊಂಡು ಬರುತಿರೆ
ಈಶ ಲಾಂಛನಗಳು ಇರಲು
ಶ್ರೀ ಷಡಕ್ಷರಾಂಕನೆಂದು
ಓಸರಿಸದ ನಮಿಸುತಿರ್ಪುದೆ೦ದಿಗವುದೂ || ೧೧ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಧರೆಯ ಭೋಗವಸ್ಥಿರ ಸಿರಿಯು ಕನಸಿನಂತೆ Next