ಜಯ ಸಚ್ಚಿದಾನಂದ ನಿತ್ಯಪೂರ್ಣನಿಗೆ ನಿತ್ಯಪೂರ್ಣನಿಗೆ
ಜಯವೆಂದು ಬೆಳಗುವ ಸಕಲದೇವನಿಗೆ ಜಯದೇವ ಜಯದೇವ || ಪ ||
ಬಿಂದು ಕಳೆ ನಾದದಿ ಜನಿಯಿಲ್ಲದಂದು
ಇಂದುಧರ ಮುಖಲೀಲೆ ಇಲ್ಲದಂದಂದು
ಒಂದೆ ಪರವಸ್ತು ತಾನಿರುತಿಹುದೆಂದು
ಒಂದಾರತಿಯನು ತಂದು ಬೆಳಗುವೆನಿಂದು ಜಯದೇವ ಜಯದೇವ |೧|
ಗುರುಶಿಷ್ಯ ಶಿವಶಕ್ತಿ ಶಿವಜೀವರೆಂದು
ವರಪೂಜ್ಯಪೂಜಕ ಧಣಿ ನೃತ್ಯರೆಂದು
ಚರಲಿಂಗ ಮುಖವು ಆಯ್ತಿರದೆ ಮತ್ತೊಂದು
ಎರಡಾರತಿಯನು ತಂದು ಬೆಳಗುವೆನಿಂದು ಜಯದೇವ ಜಯದೇವ |೨|
ಮೂರ್ಲಿಂಗ ಮೂರಂಗ ಮೂರ್ದೆವರೆಂದು
ಮೂರ್ಲೋಕ ಮೂರ್ತತ್ವ ಗುಣಮಹಾತ್ಮರೆಂದು
ಲೀಲೆಯಿಂ ಮೂವರಣಕ್ಕೊಳಗಾಯಿತೆಂದು
ಮೂರಾರತಿಯನು ತಂದು ಬೆಳಗುವೆನಿಂದು ಜಯದೇವ ಜಯದೇವ |೩|
ನಾಲ್ಕುತನುಲಿಂಗಕಳೆ ಚಿಬ್ಬಂದು ನಾದ
ನಾಲ್ಕು ಘಟ್ಟಿತವಾಗಿ ಘನಲಿಂಗ ಮಾಡ
ನಾಲ್ಕದಿಂ ಜಗದಾದಿಘನಕೃತ್ಯವೆಂದು
ನಾಲ್ಕಾರತಿಯನು ತಂದು ಬೆಳಗುವೆನಿಂದು ಜಯದೇವ ಜಯದೇವ |೪|
ಪಂಚಮುಖವನು, ತಳೆದ ಮಾತೃ ಭೂತಗಳು
ಪಂಚೀಕರಿಸಿ ಬ್ರಹ್ಮ-ಅಂಡರಚನೆಗಳು
ಪಂಚಾಂಗಲಿಂಗ ಶ್ರೀ ವಿರೂಪಾಕ್ಷಂಗೆಂದು
ಪಂಚಾರತಿಯನು ತಂದು ಬೆಳಗುವೆನಿಂದು ಜಯದೇವ ಜಯದೇವ |೫|
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”