Previous ಭಜತಿಯರರೆ ಕಿವಿಯನೊಡ್ಡಿ ಕೇಳಲಾಗದು Next

ಮನದ ಬಲುಮೆ ಎಂದಿಗಪ್ಪುದೋ

ಭೋಗಷಟ್ಪದಿ

ಎಡರು ಕಂಟಕಗಳು ಬಂದು
ತೊಡರಿ ಕಾಡುವಲ್ಲಿ ಶಿವನ
ಬಿಡದೆ ನೆನೆವ ಮನದ ಬಲುಮೆಯೆಂದಿಗಪ್ಪುದೋ || ಪ ||

ಹಸಿವು ತೃಷೆಗಳಡಸಿ ತನುವ
ಹೊಸೆದು ಹುಸಿಯ ಮಾಡುತಿರಲು
ಬಿಸಿಲು ಕಾಲಪತ್ತಿ ಬೆಂಕಿ ನೆತ್ತಿಯಡರಲು
ಕುಸಿದು ಕುಗ್ಗಿ ಧರೆಗೆ ಬಿದ್ದು
ಅಸುವನಳಿವ ಸಮಯದಲ್ಲಿ
ಸಸಿನ ಬಿಡದ ಶಿವನ ನೆನೆವುದೆಂದಿಗಪುದೋ || ೧ |

ಶಿರವು ಹರಿದು ತುಂಡುಮಾಗಿ
ಧರೆಗೆ ಉರುಳಿ ಬಿದ್ದ ಬಳಿಕ
ಗುರುವ ಹರ ನಮಶಿವಾಯ ಎನಲಿ ನಾಲಿಗೆ
ಮರಳಿಯಾಚೆ ಕಡೆಯ ಮುಂಡ
ಹೊರಳಿ ಶಿವನ ಕಡೆಗೆ ಮಗುಚಿ
ಕರವ ಮುಗಿವ ಮನದ ಬಲುಮೆಯೊಂದಿಗಪುದೋ || ೨ ||

ಅಡವಿಯೊಳಗೆ ಸೊಕ್ಕಿದಾನೆ
ತೊಡರಿ ಬಂದು ಅಡ್ಡಗಟ್ಟಿ
ಕೆಡಹಿ ಕಾಲಿನಿಂದ ಮೆಟ್ಟಿ ಸುಂಡಿಲಿಂದಲಿ
ಹಿಡಿದು ಸೀಳಿ ಹೊಳನೆರಡ
ತೊಡಹಿ ಬೀಸುತಿರಲು ಶಿವನ
ಬಿಡದೆ ನೆನೆವ ಮನದ ಬಲುಮೆಯೆಂದಿಗಪ್ಪುದೋ || ೩ ||

ಓತು ನಿದ್ರೆಗೈಯುತಿರಲು
ಭೀತಿ ಬಡಿಸಿ ಸ್ವಪ್ನದಲ್ಲಿ
ಭೂತ ಬೇತಳಂಗದಿ ಭೀಷ್ಮರೂಪಿನಿಂ
ಘಾತಿಸುತ್ತಿರಲಿ ಮನವು
ಯಾತಕಂಜದಂತೆ ಭೂತ
ನಾಥನಡಿಯ ನೆನೆವ ಬಲುಮೆಯೆಂದಿಗುದೋ || ೪ ||

ಅಡವಿಯಲ್ಲಿ ಬರುವ ಪಥದಿ
ಸುಡುತ ಬಂದು ಕಾಡ ಬೇಗೆ
ಅಡರಿ ತನುವನೆಲ್ಲ ಮುಸುಕಿ ಸುಟ್ಟು ಹೋಗಲು
ಕೆಡೆದು ಉರುಳಿ ತನುವು ಪ್ರಾಣ
ಬಿಡುವ ಸಮಯದಲ್ಲಿ ಶಿವನ
ಬಿಡದೆ ನೆನೆವ ಮನದ ಬಲುಮೆಯೆಂದಿಗಪ್ಪುದೋ || ೫ ||

ಜ್ವರಗಳಡಸಿ ತನುವ ಸುಟ್ಟು
ಕರಿಯ ಮುರಿಯ ಮಾಡುತಿರಲು
ಬಿರಿದು ತನುವು ಹೃದಯವೆರಡು ಭಾಗದಿಂದಲಿ
ಚರಿಸದಂತೆ ಏಳದಂತೆ
ಉರುಳದಂತೆ ಮಾಡುವಾಗ
ಹರನ ನೆನವ ಮನದ ಬಲುಮೆಯೆಂದಿಗಪ್ಪುದೋ || ೬ ||

ನಡೆವ ನುಡಿವ ಕೊಡುವ ಉಂಬ
ಉಡುವ ತೊಡುವ ನಿದ್ರೆ ಪ್ರಾಣ
ಬಿಡುವ ಸಮಯದಲ್ಲಿ ಶಿವನ ನೆನೆವ ಮನವನು
ಮೃಡ ಷಡಕ್ಷರಾಂಕ ನಿಮ್ಮ
ಬಿಡದೆ ಬೇಡುತಿಹೆನು ನಾನು
ಕೆಡುವ ಸಕಲವಾದ ಪದಗಳನ್ನು ಒಲ್ಲೆನು || ೭ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಭಜತಿಯರರೆ ಕಿವಿಯನೊಡ್ಡಿ ಕೇಳಲಾಗದು Next