Previous ತ್ರಿಭುವನ ಹೆಂಡಿರ ನೀರ ಹೊಳೆಯಲ್ಲಿರಿಸಿತ್ತು ಎನಗೆ ಬಂದ ಬವರಕೇಕೆ ನಿಮಗೆ ಬಂಧನ? Next

ಮದನನೆಸುಗೆಯಿಂದ ಮುನ್ನ ಚೆನ್ನಮಲ್ಲನ

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ


ಮದನನೆಸುಗೆಯಿಂದ ಮುನ್ನ ಚೆನ್ನಮಲ್ಲನ
ಮದನಗಿತ್ತಿಯಾದೆ! ಮಿಕ್ಕಿ
ನಧಮರೇತಕವ್ವಗಳಿರ?
ಮದುವೆಯಹರೆ ಮಗುಳೆ ಕಂಡ ಕಂಡ ಗಂಡರ? |೧|

ಸಾವು ಸಂಕಟಳಿವುಪಳಿವು
ನೋವು ದುಃಖ ದುರಿತರಕ್ತ
ಮಾವುಸಸ್ಠಿ ಬಾಲಜಾಡ್ಯ ಜರೆ ರುಜಾನಿಶಂ
ಬೇವಸಂಗಳಿಲ್ಲದುರೆ ಸ-
ದಾ ವಯಸ್ಸಿನಿಂದಲೆಸವ
ಕೋವಿದಂಗೆ ಪೆತ್ತರಿತ್ತರೆನ್ನ |೨|

ಮಾತೆ ಮುಕುತಿದೆರಹನಾಂತು,
ರೀತಿಗೊಲ್ಲು ತಂದೆ, ಬಂಧು-
ವ್ರಾತವವನ ಕುಲವನೊಪ್ಪಿ ಕೊಟ್ಟರೆನ್ನನು
ಆತಗೊಲ್ಲು ಮದುವೆಯಾದೆ
ನಾ ತಳೋದರಿಯರಿರೆಲೆಲೆ
ಆತನರಸುತನದ ಘನದ ಬಿನದವೆಂತೆನೆ |೩|

ಆಳುವವನಿಯವನಿಗಿದೀ
ರೇಳು ಲೋಕ, ದುರ್ಗ-ರಜತ
ಶೈಳ, ಹರಿವಿರಿಂಚಿ ಸುರಪ ಮುಖವಜೀರರು,
ಆಳು ದುನುಜ ಮನುಜ ದಿವಿಜ
ವ್ಯಾಳರುಗ್ಘಡಿಸುವ ಭಟ್ಟ
ಜಾಳಿ ಚಂಡಕೀರ್ತಿಗಳ್, ಪ್ರಧಾನಿ ಸುರಗುರು |೪|

ಮಿತ್ರ ಧನದರಾಪ್ತರೇ
ಮಿತ್ರ ಗಾತ್ರ ಪ್ರಮಥರತಿ ಕ-
ಳತ್ರವೇ ಭವಾನಿ, ರಾಜವಾಜಿ ನಿಗಮವು
ಪತ್ರಿರಥ-ಗಣೇಶರೆಸೆವ
ಪುತ್ರರಧಿಕಶೈವಧರ್ಮ
ಗಾತ್ರ ಲಿಂಗವೀವನಾವ ಪದವನೆಳಸಲು |೫|

ದಶಭುಜಂಗಳೈದು ವಕ್ತ್ರ
ವಸವವಖಿಳ ಕಕುಭ, ಮುಡಿವ
ಕುಸುಮ ತಾರೆ, ತುಂಬುರಾದಿಗಳ್ ಸುಗಾಯಕರ್,
ಎಸೆವ ಜಗದ ವಾರ್ತೆಗಳನು
ಬೆಸಸುವಾತ ನಾರದ ಶ್ರಿ-
ದಶವಧೂಕದಂಬ ಓಲಯಿಸುವರಾತನ |೬|

ಹಸನಿಸುವನೆ ಭೃಂಗಿಯೂರು-
ವಸಿ ತಿಲೋತ್ತಮಾದಿ ದಿವಿಜ
ಕುಸುಮಗಂಧಿನಿಯರೆ ನಚ್ಚಣಿಯರು, ಪಿಡಿವಡೆ
ತಿಸುಳ ಸಬಳ, ಚಾಪ ತ್ರಿದಶ
ರೆಸವ ನಿಳಯ, ನಾರಿ ಭುಜಗ,
ವಿಶಿಖ ವಿಷ್ಣುವಿಂದು ಭಾಸ್ಕರಾಗ್ನಿ ನೇತ್ರವೂ |೭|

ಮಲೆವ ಕಾಲ ಕಾಮದನುಜ
ಕುಲವನಟ್ಟಿ ಕುಟ್ಟಿ ಭಕ್ತ
ರೊಲವನೀವ ಸಕಲದೇವ ಚಕ್ರವರ್ತಿಗೆ
ಒಳಿದೆನೊಲಿವೆನೆಂತು ಪೇಳಿ
ರೆಲೆಲೆಯಕ್ಕಗಳಿರ ಬದ್ಧ
ಮಲಮಯಾಂಗಿಯಾದ ಹೀನಮಾನಸಾತ್ಮಗೆ? |೮|

ಗಿರಿಯ ತೊರೆದು ಬಱಿ ಪುಲ್ಲ
ಮೊರಡಿಗೆಳಸಿ ಬಹುದೆ? ಅಂಚೆ
ಸರಸಿಯನ್ನು ಸಡಿಲಿ ಪಲ್ವಲಕ್ಕೆ ಪಾಯ್ವುದೇ?
ಎರಪದೇ ಪರಾಗವಿಲ್ಲ-
ದರಳಿಗಲಿ? ಮಹೇಶಗೊಲ್ದು
ನರಕಿಗೊಲಿಯ ಬಲ್ಲುದೇ ಮದೀಯ ಚಿತ್ತವು? |೯|

ಮೇರುಗಿರಿಯಿರಲ್ಕೆ ರಜವ[=ಜರಗ?]
ತೂರಲೇಕೆ? ಕ್ಷ್ರೀರವಾರ್ಧಿ
ಸಾರಿರಲ್ಕೆ [ಓರೆಪಶುವದೇಕೆ]? ತತ್ತದ
ದಾರಿಗಳಲಲೇಕೆ ಗುರುವ
ಸಾರಿ ಸುಪ್ರಸಿದ್ಧವಿದ್ದು?
ಹಾರಲೇಕೆ ಪದವೆ ಲಿಂಗ ಕರದೊಳಿರುತಿರೆ? |೧೦|

ಆವ ಚಿಂತೆಯೇಕೆ ಮನದ
ದಾವತಿಯನು ತೀರ್ಚುವೆನ್ನ
ಜೀವದೆರೆಯ ಚೆನ್ನಮಲ್ಲಿಕಾರ್ಜುನಯ್ಯನ
ಭಾವೆಯಾನು! ಬಳಿಕ ನರಕಿ
ಜೀವಿಗೆನ್ನ ಕೇಳ್ದರಿನ್ನು
ನೋವಿರಿ.... |೧೧|

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ತ್ರಿಭುವನ ಹೆಂಡಿರ ನೀರ ಹೊಳೆಯಲ್ಲಿರಿಸಿತ್ತು ಎನಗೆ ಬಂದ ಬವರಕೇಕೆ ನಿಮಗೆ ಬಂಧನ? Next