Previous ನಾನು ಒಲಿದು ಫಲವದೇನು ಭೋಗ ಹರಿದು ಹೋಗಲಿ Next

ಕೊಟ್ಟು ಹುಟ್ಟಿ ಪಡೆಯಲಿಲ್ಲ

ರಚನೆ: ಶ್ರೀ ಮುಪ್ಪಿನ ಷಡಕ್ಷರಿ


ಕೊಟ್ಟು ಹುಟ್ಟಿ ಪಡೆಯಲಿಲ್ಲ
ಮುಟ್ಟಿ ಶಿವನ ನೆನೆಯಲಿಲ್ಲ
ಭ್ರಷ್ಟಮನುಜ ನಿನಗೆ ಪದವಿ ಹೇಗೆ ದೊರೆವುದು || ಪ ||

ಶಿವನ ಪೂಜೆ ಮಾಡಲಿಲ್ಲ.
ಗುರುವಿಗಿನ್ನು ಎರಗಲಿಲ್ಲ
ಶರಣರುಗಳ ಪಾದವನ್ನು ಸ್ಮರಿಸಲಿಲ್ಲವು
ಧರೆಯ ದಾತರುಗಳ ಕಂಡು
ಹರುಷದಿಂದ ನೋಡಲಿಲ್ಲ
ದುರುಳಮನುಜ ನಿನಗೆ ಪದವಿ ಹೇಗೆ ದೊರೆವುದು || ೧ ||

ದಾನಧರ್ಮ ಮಾಡಲಿಲ್ಲ
ಜ್ಞಾನವಂತರ ಸಂಗವಿಲ್ಲ
ಮಾನಿನಿಯರ ಕಂಡು ಮನ ಸೈರಿಸಲಿಲ್ಲವು
ಧ್ಯಾನ ಮೌನ ವ್ರತವು ಇಲ್ಲ
ತಾನು ಪರರಿಗಿಕ್ಕಲಿಲ್ಲ
ಹೀನಮನುಜ ನಿನಗೆ ಪದವಿ ಹೇಗೆ ದೊರೆವುದು || ೨ ||

ಸತ್ಯವಂತನಾಗಲಿಲ್ಲ
ಮತ್ತೆ ಒಂದು ಕ್ರಿಯಾವಿಲ್ಲ
ಉತ್ತಮರನು ಕಂಡು ಶಿರವು ಬಾಗಲಿಲ್ಲವು
ಪೃಥ್ವಿಯೊಳಗೆ ಕೆರೆಯು ಬಾವಿ
ಮತ್ತೆ ನೀನು ತೆಗೆಸಲಿಲ್ಲ
ಕತ್ತೆಮನುಜ ನಿನಗೆ ಪದವಿ ಹೇಗೆ ದೊರೆವುದು || ೩ ||

ಅನ್ನದಾನ ಮಾಡಲಿಲ್ಲ
ಹೊನ್ನು ದಾನ ಮಾಡಲಿಲ್ಲ
ಅನ್ಯ ದೈವಭಜನೆ ಬಿಟ್ಟು ನಡೆಯಲಿಲ್ಲವು
ಹೊನ್ನು ಹೆಣ್ಣು ನಚ್ಚಿ ನೀನು
ಚನ್ನ ಶಿವನ ನೆನೆಯಲಿಲ್ಲ
ಕುನ್ನಿಮನುಜ ನಿನಗೆ ಪದವಿ ಹೇಗೆ ದೊರೆವುದು || ೪ ||

ಹರನ ಪೂಜೆ ಮಾಡಲಿಲ್ಲ
ಶರಣರುಗಳ ಪಾಡಲಿಲ್ಲ
ಮರಣಗಾಲದಲ್ಲಿ ಶಿವನ ನೆನೆಯಲಿಲ್ಲವು
ಶರೀರವನ್ನು ತೊರೆಯಲಿಲ್ಲ
ಪರಮ ಷಡಾಕ್ಷರನನಲ್ಲಿ
ಎರದು ಬೆರೆದು ಏಕವಾಗೆ ಪರಮ ಮುಕ್ತಿಯ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ನಾನು ಒಲಿದು ಫಲವದೇನು ಭೋಗ ಹರಿದು ಹೋಗಲಿ Next