Previous ನರರಿಗೆಂತಹುದು ಒಡಲು ಹಿಡಿದ ಜಡನು ನಾನು Next

ಎಂದಿಗಹುದೋ

ಭಾಮಿನಿಷಟ್ಪದಿ

ಎಂದಿಗಹುದೊ ನಿಮ್ಮ ನೆನಹು
ಎಂದಿಗಹುದೊ ನಿಮ್ಮ ನಿಜವು
ಎಂದಿಗಹುದೊ ನಿಮ್ಮ ಪೂಜೆಯ ಮಾಳ ಸುಖವದು || ಪ ||

ಕಂಡ ಬಳಿಯ ನದಿಯು ಕೊಳನು
ಕಂಡ ಬಳಿಯ ಪತ್ರೆ ಪುಷ್ಪ
ಕಂಡ ಬಳಿಯ ನಿಮ್ಮ ಪೂಜೆ ಮಾಡಲೊಲ್ಲದೆ
ಕಂಡ ಕಂಡ ಊರ ತಿರುಗಿ
ಕಂಡ ಕಂಡ ಮನೆಯ ಹೊಕ್ಕು
ತುಂಡ ನಾಯ ಹಾಗೆ ತಿರಿಗಿ ಕೆಟ್ಟೆನಕ್ಕಟಾ || ೧ |

ಶೂಲಧರನ ಚರಣಯುಗವ
ಲೀಲೆಯಿಂದ ನೆನೆದು ನೆನೆದು
ಕಾಲಕಾಮರುಗಳಗೆದ್ದು ಮುಕ್ತಿ ಪಡೆಯದೆ
ಮಲವ ನರಸಿ ತಿರುಗುತಿರ್ಪಾ
ಮೂಳ ಹಂದಿಯಂತೆ ಮೂರು
ಮಲವ ನೆಚ್ಚಿ ನಿಮ್ಮ ನಿಜವ ಮರೆದೆನಕ್ಕಟಾ || ೨ ||

ಎಳೆಯ ಚಂದ್ರಧರನಿಗೊಲಿದು
ಎಳಸದನ್ಯಸುಖವನಂಗ
ಕಳೆಗಳರತು ನಿತ್ಯ ಸುಖವ ಪಡೆಯಲೊಲ್ಲದೆ
ಎಲುವು ನರವು ತೊಗಲು ಪುದಿದ
ಹಳಗವನ್ನು ಹೊತ್ತು ನಾನು
ಹೊಲಯರಂತೆ ನಿಮ್ಮ ಮರದು ಕೆಟ್ಟೆನಕ್ಕಟಾ || ೩ ||

ಸತ್ಯರುಗಳ ಕೂಡಲಾಡಿ
ನಿತ್ಯ ಶಿವನ ಭಜಿಸಿ ನುತಿಸಿ
ಮರ್ತ್ಯದತ್ತ ಬಾರದಂತೆ ಮಾಡಿಕೊಳ್ಳದೆ
ವ್ಯರ್ಥವಾಗಿ ಕೆಡುವ ಹೆಣ್ಣು
ವಿತ್ತ ಭೂಮಿಗಳನ್ನು ಕಚ್ಚಿ
ಕತ್ತೆ ಹೊಲೆಯ ನಾನು ನಿಮ್ಮ ಮರೆದೆನಕ್ಕಟಾ || ೪ ||

ಸೃಷ್ಟಿಯೊಳಗೆ ಉದಿಸಿ ನಾನು
ಶ್ರೇಷ್ಠನಲ್ಲ ಹಿರಿಯರೊಳಗೆ
ನಿಷ್ಠೆಯಿಲ್ಲ ಲಿಂಗದಲ್ಲಿ ಭಕ್ತ ನಾನಲ್ಲ
ಕಷ್ಟತನವ ಮರೆಸಿ ನಿಮ್ಮ
ನಿಷ್ಠೆ ನಿಜವನಿತ್ತು ಕರುಣ
ದೃಷ್ಟಿಯಲ್ಲಿ ನೋಡು ಷಡಕ್ಷರಿಯ ಲಿಂಗವೇ || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ನರರಿಗೆಂತಹುದು ಒಡಲು ಹಿಡಿದ ಜಡನು ನಾನು Next