ಭೋಗಷಟ್ಪದಿ
ಗುರುವೆ ಎನಗೆ ಮೋಕ್ಷಮಾರ್ಗ
ದಿರವು ದೊರೆವ ಪರಿಯ ಹೇಳಿ
ಅರಿಯಬಾರದೆನಗೆ ಇದರ ತೆರನ ಕರುಣಿಸು || ಪಲ್ಲವಿ ||
ಗುರುವ ಜಯತು ಎನ್ನ ಕಲ್ಪ
ತರುವೆ ಜಯತು ಎನ್ನ ಭಾಗ್ಯ
ದಿರುವೆ ಜಯತು ಜಯತು ಎನ್ನ ಒಳಗಳರುಹಿನ
ತರುವೆ ಜಯತು ಎನ್ನ ಪರಮ
ಚರವೆ ಜಯತು ಎನ್ನೊಳಿರುವ
ಮರವೆಯನ್ನು ಪೊರಡಗುಟ್ಟಿ ದೇವ ರಕ್ಷಿಸು || ೧ |
ಮಗನೆ ಕೇಳು ಮೋಕ್ಷಮಾರ್ಗ
ಜಗದಿ ನಿನಗೆ ದೊರೆವ ಪರಿಯ
ಅಗಜೆಯಾಣ್ಮನಂಘ್ರಿಯುಗಳ ವಾರಿರುಹವನು
ಹಗಲು ಇರುಳು ಜಪಿಸುತಿರಲು
ವಿಗಡಮಾಯೆಯನ್ನು ಗೆಲಿದು
ಅಗಲಲೀಯದಿರ್ಪೆ ನಿನಗೆ ಮೋಕ್ಷ ದೊರೆವುದು || ೨ ||
ದಾನಗುಣವ ಮರೆಯಬೇಡ
ದೀನತನವ ಮಾಡಬೇಡ
ಹಾನಿ ಮಾಡಬೇಡ ನಿನ್ನ ಜ್ಞಾನವೃತ್ತಿಯ
ಹೀನವಿಷಯಕಳಸಬೇಡ
ನಾನೆ ಎಂದು ಮೆರೆಯಬೇಡ
ನೀನು ಇದನು ತಿಳಿದು ನೋಡು ಮೋಕ್ಷ ಮಾರ್ಗವ || ೩ ||
ಯತಿಗಳೊಳಗೆ ಮಥನ ಬೇಡ
ಮತಿಯ ಗತವ ಮಾಡಬೇಡ
ಕ್ಷಿತಿಯ ಭೋಗವನ್ನು ನಚ್ಚಿ ಮರೆಯಬೇಡವೈ
ವ್ರತವ ತಪ್ಪಿ ನಡೆಯಬೇಡ
ಪತಿಯರುಳ್ಳ ಸತಿಯರುಗಳ
ರತಿಯ ಕೇಳಿಗೆಳಸಬೇಡ ನಿನ್ನ ಮನವನು || ೪ ||
ನೋಡು ನೀನು ಬಂದ ಪಥವ
ಮಾಡು ಮನವು ಮುಟ್ಟಿ ತಪವ
ಪಾಡು ನಿನ್ನ ಜಿಹ್ವೆ ತುಂಬಿ ಶಿವನ ಪಾದವ
ಬೇಡು ಮುಕ್ತಿಯನ್ನು ಮೃಡನ
ಲಾಡು ಎಲ್ಲಿ ನಿಲ್ಲದಘಕೆ
ಕೂಡು ಲಿಂಗದಲ್ಲಿ ಮನವ ಮಗನೆ ಸಂತತ || ೫ ||
ಒರೆಸು ಅಜನು ಬರೆದ ಲಿಪಿಯ
ಸ್ಮರಿಸು ನೀನು ಪಂಚಾಕ್ಷರಿಯ
ತರಿಸು ಮನದ ವಿಷಯವನ್ನು ಬೇರು ಸಹಿತಲಿ
ಹರಿಸು ಬರ್ಪ ಪಾಪ ಲತೆಯ
ತೊರೆಸು ಮನದ ಕಾಂಕ್ಷೆಗಳನು
ಮುರಿದು ಬಿಸುಡು ಕಾಡುತಿಪ್ಪ ಮನದಬಾಣವ || ೬ ||
ಬಿಡಿಸು ಮನದ ರೋಷಗಳನು
ನಡೆಸು ಹಿಡಿದ ಛಲಗಳನ್ನು
ಉಡಿಸು ಶಾಂತಿಯೆಂಬ ವಸ್ತ್ರವನ್ನು ಮನಸಿಗೆ
ನಡೆಸು ಸತ್ಯವೆಂಬ ವಾಕ್ಯ
ಕೆಡಿಸು ಪರ್ಬಿ ಬರುವ ಪುಸಿಯ
ಬಿಡಿಸು ಆಸೆಯೆಂಬದೊಂದು ಧರಣಿರುಹವನು || ೭ ||
ಸಂಗ ಬೇಡ ಜೀವರುಗಳ
ಹಿಂಗ ಬೇಡ ಶರಣತತಿಯ
ಲಿಂಗದೊಳಗೆ ಸಾವಧಾನಿಯಾಗಿರಲಸದೆ
ನುಂಗ ಬೇಡ ಲೇಸ ಪರರ
ಭಂಗ ಬೇಡ ಮುಂದಲಾಗ
ಕಂಗಳೊಡವೆ ಮೋಸ ನಾಶ ಮೋಕ್ಷವಾಗದು || ೯ ||
ಕುಂದು ಹೆಚ್ಚಿ ನುಡಿಯಬೇಡ
ನಿಂದಕೋಡಿ ಹೋಗಬೇಡ
ಹೊಂದಬೇಡ ಮಾಯೆ ಭೋಗವನ್ನು ಪರಶಿವ
ಕಂದ ಎಡರಿಗಂಜಬೇಡ
ಸಂದ ಶರಣರಡಿಯ ನೆನಹ
ಕಂದ ನೀನು ಮರೆಯಬೇಡ ಮೋಕ್ಷ ದೊರೆವುದು || ೯ ||
ಹಾರಬೇಡ ಅನ್ಯರುಗಳ
ಹೋರಬೇಡ ಹಿರಿಯರೊಡನೆ
ಮೀರಬೇಡ ದೇಶಿಕೇಂದ್ರ ವರದ ವಚನವ
ಆರ ಜರಿಯಬೇಡ ನೀನು
ಭೂರಿ ದೈವಕರಗಬೇಡ
ಊರ ಸೇರಿ ನಿಲ್ಲಬೇಡ ಯತಿಯು ಆದಡೆ || ೧೦ ||
ತೋರಿ ಹಾರಿ ಕೆಡುವ ತನುವ
ಹಾರಬೇಡ ನಿತ್ಯವೆಂದು
ಊರಬೇಡ ಯೋನಿಮುಖದಿ ಬಿಂದು ಬ್ರಹ್ಮವ
ಧಾರುಣಿಯೊಳು ಸಕಲರೊಡನೆ
ಕ್ರೂರವೆನಿಸಿ ನಡೆಯಬೇಡ
ಗೌರಿಯರಸನಡಿಯ ಹೃದಯದಲ್ಲಿ ನೆನವುದು || ೧೧ ||
ಸತಿಯರುಗಳ ಭಕ್ತಿಯನ್ನು
ಹಿತವಿದೆಂದು ನಂಬ ಬೇಡ
ಅತಿ ವಿಚಿತ್ರದನ್ನವಿಕ್ಕಿ ಕ್ರಮುಕ ಪರ್ನವ
ಹಿತದಿಂದಲಿಯಿತ್ತು ನಿಮ್ಮ
ಯತಿತನಕ್ಕೆ ಕೇಡ ತಹರು
ಕ್ಷಿತಿಯೊಳಿದರ ಬೆಡಗ ತಿಳಿದು ನಡೆವುದೈ ಮಿತ್ರ || ೧೨ ||
ಕೆಲರು ನಿನ್ನ ಹಳಿದರೆಂದು
ಕಲಹ ಬೇಡ ಅವರ ಕೂಡೆ
ಹಲವು ಕಡೆಗೆ ಹಾಯಬೇಡ ಮನಸಿನಿಚ್ಚೆಗೆ
ಕುಲವನೆತ್ತಿ ನುಡಿಯಬೇಡ
ಚೆಲುವ ಶಿವನ ಶರಣರುಗಳ
ತೊಲಗದಿರು ಶಿವಾನುಭಾವಿಗಳನು ನಂದನಾ || ೧೩ ||
ಕೊಡುವರೆಡೆಗೆ ಆಸೆಬಟ್ಟು
ನಡೆಯಬೇಡ ಒಡಲಿಗನ್ನ
ಮೃಡನು ಕೊಟ್ಟ ಪಡಿಯನುಣಲು ಅದು ಗುರುತ್ವವು
ಉಡುಪಧರನು ಕೋಪಗೊಂಬ
ಹಿಡಿಯಬೇಡ ವರ್ಗದವರ
ಜಡನು ನೀನು ಆಗಬೇಡ ಮೋಕ್ಷ ದೊರೆಯದು || ೧೪ ||
ಕುವರ ಜಿಹ್ವೆ ಗುಹ್ಯ ಲಂಪ
ಟವನು ಒಮ್ಮೆ ನೆನೆಯಬೇಡ
ಶಿವನ ದೂಷಣೆಗಳ ಮಾಳ್ವ ನರರ ವಾಕ್ಯವ
ಕಿವಿಯೊಳಾಂತು ಕೇಳಬೇಡ
ಭವಿಯ ಸಂಗ ಬೇಡ ದೋಷ
ಶಿವನ ಶರಣರಡಿಗೆ ಭೃತ್ಯಭಾವದಿಂದಿರು || ೧೫ ||
ಬಲ್ಲೆನೆಂದು ಬೆರೆಯಬೇಡ
ಎಲ್ಲರೊಳಗೆ ಕಲಹ ಬೇಡ
ನಿಲ್ಲಬೇಡ ಕುಟಿಲ ಕುಹಕರಿರ್ದ ಬಳಿಯಲಿ
ಅಲ್ಲದಾಟವಾಡಬೇಡ
ಕಳ್ಳತನವ ನೆನಸಬೇಡ
ಫುಲ್ಲಶರನ ದಹನನ ನೆನಹ ಮರೆಯದಿರುವುದೆ || ೧೬ ||
ರಾಗವನ್ನು ತೊರೆಯಬೇಕು
ನೀಗಬೇಕು ವ್ಯಸನ ವ್ಯಾಪ್ತಿ
ಸಾಗಲೊದೆಯಬೇಕು ಅಷ್ಟಮದಗಳೆಲ್ಲವ
ಭೋಗವನ್ನು ಮಾಜಬೇಕು
ಬಾಗಬೇಕು ಪರಮಶಿವನ
ಯೋಗಿಗಳಿಗೆ ಎನ್ನ ಕಂದ ಗರ್ವವಿಲ್ಲದೆ || ೧೭ ||
ತರಳಬುದ್ದಿಯಿಂದ ಮಾಯೆ
ಉರುಳಿನೊಳಗೆ ಸಿಲ್ಕಿ ನಿನ್ನ
ಶರಿರಕಡರ ತರಲಿಬೇಡ ಅಂಗಭೋಗಕೆ
ಮರುಗಬೇಡ ಶಿವಕುಮಾರ
ಪರಕೆ ದೂರನಾಗಬೇಡ
ಅರಿದು ನೋಡು ನಿನ್ನ ಆದಿ ಮಧ್ಯ ಅಂತ್ಯವ || ೧೮ ||
ಅರುಹುದೋರಿತೆಂದು ಮತ್ತೆ
ನರರ ಒಳಗೆ ಬೆರೆಯಬೇಡ
ಕರದೊಳಿರುವ ಲಿಂಗ ಮೆಚ್ಚನಾ ಚರಿತ್ರಕೆ
ಗುರುವಿನೊಳಗೆ ಇರುವನರಿದು
ಹರನ ಧ್ಯಾನ ಅಗಲದಿಹುದು
ಅರಿದು ಮೂರು ಲಿಂಗ ಒಂದೆಯೆಂದು ಭಜಿಪುದು || ೧೯ ||
ಅಂಗಗುಣವನಳಿದು ಇಷ್ಟ
ಲಿಂಗವನ್ನು ಒಳಗೆ ಹೊರಗೆ
ಹಿಂಗದೆ ನೀ ಭಜಿಸು ಭಾವದಿಂದ ಮನದೊಳು
ಲಿಂಗ ಬೇರೆ ಮತ್ತೆ ನಿನ್ನ
ಅಂಗ ಬೇರೆ ಎನ್ನದಿಹುದು
ಲಿಂಗ ಅಂಗ ಒಂದೆಯೆಂಬ ಭಾವದಿಂದಿರು || ೨೦ ||
ಲಿಂಗವಿತ್ತುದುಂಡು ಮರಳಿ
ಲಿಂಗ ಕೊಟ್ಟುದುದನೆ ಹೊದೆದು
ಲಿಂಗ ತೋರಿದಲ್ಲಿ ಶಯನವನ್ನು ಮಾಡುತ
ಲಿಂಗ ನಡೆಸಿದಂತೆ ನಡೆದು
ಲಿಂಗ ನುಡಿಸಿದಂತೆ ನುಡಿದು
ಲಿಂಗದಲ್ಲಿ ಲೀಯವಾಗಿ ಬೆರೆದಡುತ್ತಮ || ೨೧ ||
ಭವದಿ ಸುಖವು ದುಃಖ ಬರಲು
ದೇವಗಿತ್ತು ತಾನು ಸಲಿಸಿ
ಸಾವಧಾನದಿಂದಲಿದ್ದು ಜನರ ಕಾಡದೆ
ಕಾವನಿರುವ ಠಾವ ಗೆಲಿದು
ಜೀವ ಜೀವನ್ಮುಕ್ತಿಯಾದ
ಭಾವೆಯನ್ನು ನೆರೆವುದಯ್ಯಾ ಮಗನೆ ಸಂತತ || ೨೨ ||
ಆರು ನಾನು ಎಂದು ನೋಡು
ಮಾರ ಶಿವನನ್ನು ಕೂಡು
ಸಾರಹೃದಯರೊಳಗೆ ಆಡು ನಿನ್ನ ರಕ್ಷಿಪ
ಮೂರು ಲಿಂಗವನ್ನು ಪಾಡು
ಸೇರು ನೀನು ಬಂದ ಠಾವ
ಮಾರಹರನು ತೋರ್ಪ ನಿನಗೆ ಮೋಕ್ಷಮಾರ್ಗವ || ೨೩ ||
ಅಂತರಂಗ ಬಾಹ್ಯರಂಗ
ಇಂತಿವೆರಡನೊಂದುಮಾಡು
ಭ್ರಾಂತಿ ಭ್ರಮೆಗಳೆಲ್ಲವನ್ನು ಸುಟ್ಟು ನಿಲಿಸಿಯೆ
ಕಾಂತನೊಳಗೆ ಸಮರಸೈಕ್ಯ
ವಾಂತು ನಿಲ್ಲಲಾಗಿ ಮೋಕ್ಷ
ಕಾಂತೆಯನ್ನು ಮದುವೆಯಾಗಿ ಸುಖದೊಳಿರ್ಪುದು || ೨೪ ||
ದೀಕ್ಷಮೋಕ್ಷವನ್ನು ಮಾಡಿ
ತ್ರ್ಯಕ್ಷನನ್ನು ಕರದಲಿಟ್ಟು
ಲಕ್ಷದಿಂದ ಭಸಿತವಿಟ್ಟು ಗುರುವರೇಣ್ಯ ಪ್ರ
ತ್ಯಕ್ಷವಾಗಿಯಿರಲು ಮುಂದೆ
ಮೋಕ್ಷದೊರೆಯದನ್ನ ಬೇಡ
ಈಕ್ಷಿಸಯ್ಯ ಕಂದ ನೀನು ಗರ್ವವಿಲ್ಲದೆ || ೨೫ ||
ಕರಣ ಗುಣಗಳೆಲ್ಲ ಬಿಟ್ಟು
ಬರಿಯವು ಮಾಯೆಗಳ ಮೆಟ್ಟು
ತ್ವರಿತದಿಂದ ದುರಿತ ಲತೆಯ ಹರಿಯ ಹೊಯ್ದಿಡು
ಹರಿವ ಮನವ ಹರನೊಳಿಟ್ಟು
ತುರಿಯ ಮೋಹವನ್ನು ಬಿಟ್ಟು
ಚರಿಸಲಿಂತು ಮುಕ್ತಿವನಿತೆ ಬಹಳು ನಿನ್ನೊಳು || ೨೬ ||
ಹೃದಯ ಶಾಂತನಾಗಬೇಕು
ಪದುಳದಿಂದ ಚರಿಸಬೇಕು
ಮಧುರವಚನವಾಡಬೇಕು ಜಿಹ್ವೆಯಾಗ್ರದಿ
ಕದನವನ್ನು ತೊರೆಯಬೇಕು
ಕದಡದಿರಲುಬೇಕು ಚಿತ್ತ
ಮದನಹರನು ತೋರ್ಪ ನಿನಗೆ ಮೋಕ್ಷ ಮಾರ್ಗವ || ೨೭ ||
ಕಾಯದೊಳಗೆ ಜೀವ ಸಿಲ್ಕಿ
ಮಾಯಪಾಶದೊಳಗೆ ಬಿದ್ದು
ಬಾಯ ಬಿಡುತಲಿರ್ಪವಂಗೆ ನಿಮ್ಮ ಪಾದದ
ತೋಯವನ್ನು ಜಿಹ್ವೆಗೆರೆದು
ಸಾಯಸಂಗಳನ್ನು ಕಳೆದು
ಕಾಯಜಾರಿ ಬೆರೆವನಯ್ಯಾ ಆ ಮಹಾತ್ಮನ || ೨೮ ||
ಮರನ ವಟ್ಟಲುಗಳ ಬೊಂಬೆ
ಎರಡು ಪಾದ ಪಾಣಿ ವದನ
ಉರಗಳನ್ನು ಮಾಡಿ ಸೂತ್ರ ಹೂಡಿಯಾಡಿಪ
ತೆರದಿ ಗುರುವೆ ಎನ್ನ ನೀವು
ಕರದಿ ಪಿಡಿದು ಬುದ್ದಿಗಲಿಸಿ
ಶರಣು ಹೊಗಿಸಿಕೊಳ್ಳಲಾನು ಕಂಡ ನಿಮ್ಮುವ || ೨೯ ||
ಮತ್ತ ಮದದ ಮರುಳ ಕರುಳ
ಹೊತ್ತು ಹೊತ್ತ ಕೂರ ನರನ
ಚಿತ್ತಜಾರಿಯಲ್ಲಿ ಮನವು ಇಲ್ಲದಧಮನ
ಹತ್ತೆಗರೆದು ಹರುಷದಿಂದ
ಚಿತ್ರವನ್ನು ನೆಲೆಗೆ ನಿಲ್ಲಿಸಿ
ಕರ್ತೃ ನೀವು ಪೊರೆದಿರೆನ್ನ ಕರುಣದಿಂದಲಿ || ೩೦ ||
ಮರವೆಯೊಡನೆ ಮಂದನಾಗಿ
ಅರುವ ಮರವ ತರಳಗೊರೆದು
ಹರುಷದಿಂದ ಮೋಕ್ಷಮಾರ್ಗದಿರವ ತೋರಿಸಿ
ಇರದೆ ಇಹಪರಂಗಳೆರಡ
ನುರುಹಿ ಪರಮಪದವನಿತ್ತ
ಗುರುವೆ ನಿಮಗೆ ಸರಿಯೆ ಹರನು ತಿಳಿದು ನೋಡಲು || ೩೧ ||
ಗುರುವೆ ಎನ್ನ ಬಯಸಿದಿಷ್ಟ
ದೊರಕಿತೆಂದು ಧನ್ಯನಾದೆ
ಶರಿರ ವಚನ ಮನವು ನಿಮ್ಮ ಪಾದಕಮಲದ
ಸ್ಮರಣೆಗೊಂಡು ನಿಂದುದೀಗ
ಕರಸರೋಜ ಬೇಸರಿಸದೆ
ಶರಣಗಣ್ಯ ನಿಮ್ಮ ಪುಣ್ಯ ಕರುಣಬೋಧೆಯಿಂ || ೩೨ ||
ಶರಣು ಪಾಪನಾಶ ಶರಣು
ಶರಣು ಚಿತ್ಪ್ರಕಾಶ ಶರಣು
ಶರಣು ಮನ್ಮನಾಂಬುಜಾರ್ಕ ಶರಣು ಸಂತತಾ
ಶರಣು ಶರಣು ಭಕ್ತಸ್ತೋತ್ರ
ಶರಣು ಶರಣು ಘನಚರಿತ್ರ
ಶರಣು ಶರಣು ಷಟ್‌ಸ್ಥಲದ ಷಡಾಕ್ಷರಾಂಕನೆ || ೩೩ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ
ಉಲ್ಲೇಖ ಟಿಪ್ಪಣಿ: ಮುಪ್ಪಿನ ಷಡಕ್ಷರಿಗಳ ಹೆಚ್ಚಿನ ಪದಗಳು