ಭಾಮಿನಿಷಟ್ಪದಿ
ಆವ ಪರಿಯಲಿ ತಿಳಿಯಬಾರದು
ದೇವ ನಿಮ್ಮಯ ಶರಣರಿರವನು
ಭಾವದೊಳು ನಾ ತಿಳಿವ ಲಿಂಗವು ಇರಲು ಶಿವನೆಂದು || ಪ ||
ಧಾರುಣಿಯೊಳಾ ಉದ್ಭಟಯ್ಯನು
ಚಾರಮಾಂಕನು ಚೋಳರಾಯನು
ಮಾರವೈರಿಯ ಬೆರಸಲಿಲ್ಲವ ಅವರ ಪರಿಯಂತೆ
ಧಾರುಣಿಯ ಪಾಲಿಸುತ ಗುಪ್ತ ಉ
ದಾರಭಕ್ತಿಯ ಮಾಡುತಿಹರೋ
ಆರು ಬಲ್ಲರು ನಿಮ್ಮ ಶರಣರ ತಿಳಿಯಲೆಂತಹುದೋ || ೧ ||
ಬಸವರಾಜನು ಚೊಕ್ಕನೈನಾ
ರಸಮ ಕೇಶಿಯ ರಾಜರಿವರುಗ
ಳೊಸದು ಶಿವನೊಳು ಬೆರೆದರಲ್ಲವೆ ಅವರ ಪರಿಯಂತೆ
ವಸುಧೆಯೊಳು ಮಂತ್ರಪ್ರಭಾವದಿ
ಎಸೆವ ಶಿವನೊಳು ಗುಪ್ತಭಕ್ತಿಯ
ಬೆಸಗೆಯೊಳಗಿರುತಿಹರು ಶರಣರ ತಿಳಿಯಲೆಂತಹುದೋ || ೨ ||
ಧಾರುಣಿಯೊಳಾ ಮಲುಹಣಯ್ಯನು
ದಾರಸೌಂದರ ಮಿಂಡ ಜಂಗಮ
ವಾರವಧುಗಳ ಬೆರಸಲಿಲ್ಲವೆ ಅವರ ಪರಿಯಂತೆ
ಆರು ಬಲ್ಲರು ವಿಟರ ತೆರದಿಂ
ಮಾರ ವೈರಿಯ ಗುಪ್ತಭಕ್ತಿಯ
ನಾರ ಪರಿಯಲಿ ಮಾಡುತಿಹರೋ ತಿಳಿಯಲೆಂತಹುದೋ || ೩ ||
ಮೇದಿನಿಯೊಳಾ ಮಲ್ಲಶೆಟ್ಟಿಯು
ಆದಿಮೈಯನು ಶಂಕರೇಶನು
ಸಾಧಿಸುತ್ತಲೆ ವ್ಯವಹರಂಗಳಲಿರ್ದರವರಂತೆ
ಆದಿವಿಡಿದೊಂದುದ್ಯಮಂಗಳ
ಆದಿಲಿಂಗದ ಗುಪ್ತಭಕ್ತಿಯ
ವೇದಿಸಿಹರೋ ನಿಮ್ಮ ಶರಣರು ತಿಳಿಯಲೆಂತಹುದೋ || ೪ ||
ಪೊಡವಿಯೊಳಗೆಲ್ಲರಿವ ತೆರದಿಂ
ಮಡಿವಳನು ಯಂಕಾಳಿಗಳು ಪುಲಿ
ಯುಡುವರೆಂಬರು ದುಪಟಿ ತೊಳೆವುತಲಿರ್ದರವರಂತೆ
ಮಡಿಯ ಮಾಡುತ ಭಕ್ತವಸ್ತ್ರವ
ಅಡಗಿ ಶಿವನೊಳು ಗುಪ್ತಭಕ್ತಿಯ
ನಡೆಸುತಿಹರೋ ನಿಮ್ಮ ಶರಣರು ತಿಳಿಯಲೆಂತಹುದೋ || ೫ ||
ಧಾರುಣಿಯೊಳಾ ಅಮುಗಿದೇವನು
ದಾರಜೇಡರದಾಸನು ಸಂ
ಸಾರದೊಳಗಿರುತಿರ್ದುದಿಲ್ಲವೆ ಅವರ ಪರಿಯಂತೆ
ಆರು ಬಲ್ಲರು ಶರಣರನು ಸಂ
ಸಾರವನು ಮರೆಗೊಂಡು ಗುಪ್ತದಿ
ಮಾರವೈರಿಯ ಬೆರಸುತಿಹರೋ ತಿಳಿಯಲೆಂತಹುದೋ || ೬ ||
ಇಲ್ಲಿ ಚೆನ್ನಯ್ಯಗಳು ಲದ್ದೆಯ
ಹುಲ್ಲು ಸೋಮಯ್ಯಗಳು ಬಡತನ
ದಲ್ಲಿ ಶಿವನೊಳು ಬೆರಸಲಿಲ್ಲವೆ ಅವರ ಪರಿಯಂತೆ
ಹುಲ್ಲು ಮಾರುತ ಬಡವರಂದದಿ
ಖುಲ್ಲ ಮಾನವರರಿಯದೊಳ್ ಶಿವ
ನಲ್ಲಿ ಗುಪ್ತದಿ ಬೆರಸುತಿಹರೋ ತಿಳಿಯಲೆಂತಹುದೋ || ೭ ||
ಕುರಿಯ ಕಾಯುತ ಗೊಲ್ಲಳಯ್ಯನು
ತುರುವ ಕಾಯುವ ಚಂಡಿದೇವನು
ಪರಮತಿರುಮೂಲಯ್ಯಗಳು ಇರುತಿರ್ದರವರಂತೆ
ಕುರಿಯ ತುರುವಂ ಕಾಯ್ದು ಗುಪ್ತದಿ
ಹರನ ಭಕ್ತಿಯ ಮಾಡುತಿಹರೋ
ಶರಣರಿರವನು ನರರಭಾವಕೆ ತಿಳಿಯಲೆಂತಹುದೋ || ೮ ||
ಉದಿಸಿ ಧರೆಯೊಳು ಹಲವು ಪರಿಯಲಿ
ಹುದುಗಿ ಲಿಂಗದಿ ಗುಪ್ತಭಕ್ತಿಯ
ಪದುಳದಿಂದಲಿ ಮಾಡುತಿಹರೋ ತಿಳಿಯಲೆಂತಹುದು
ಅದರ ದೆಸೆಯಿಂದರಿಯಬಾರದು
ಸದಮಲಾತ್ಮಕ ಲಿಂಗವಿದ್ದರ
ಮುದದಿ ಶಿವಷಡಕ್ಷರಿಯ ವರ ನೀನೆಂಬೆನದರಿಂದ || ೯ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ