ಭೋಗಷಟ್ಪದಿ
ಎನ್ನ ಆಳ್ದ ಇಷ್ಟಲಿಂಗ
ನಿನ್ನ ಪಾದಪದ್ಮವನ್ನು
ಎನ್ನ ಮನವು ಮಚ್ಚುವಂತೆ ಎಂದಿಗುದೊ || ಪಲ್ಲವಿ ||
ಬಡವಗೆ ಭಾಗ್ಯದ ಪ್ರೀತಿ
ಒಡಲ ಅಸುವಿಗನ್ನ ಪ್ರೀತಿ
ಕಡುಚಲುವ ಪುರುಷನ ಪ್ರೀತಿ ಮಡದಿಗಿರ್ಪಂತೆ
ಮೃಡನೆ ನಿಮ್ಮ ಪಾದಪ್ರೀತಿ
ಬಿಡದೆ ಚಿತ್ತಶುದ್ಧದಿಂದ
ಒಡನೆ ನಂಬುವಂತೆ ಮನವು ಎಂದಿಗಪ್ಪುದೊ || ೧ |
ನಲ್ಲನ ಮತ್ತೊಬ್ಬ ಸತಿಯು
ನಿಲ್ಲದೆ ಕಂದರ್ಪನ ಬಾಣ
ದಲ್ಲಿ ಭ್ರಮಿಸಿದಶದವಸ್ಥೆ ನೋಡುತಿರುವೊಲು
ಎಲ್ಲ ದೇವದೇವಗೆಲ್ಲ
ನಲ್ಲ ನಿಮ್ಮ ಪಾದಪದ್ಮ
ದಲ್ಲಿ ಮನವು ಮೆಚ್ಚುವಂತೆ ಎಂದಿಗಪ್ಪುದೊ || ೨ ||
ದೂರದಲ್ಲಿ ಪತಿಯು ಇರಲು
ನಾರಿ ಪುರುಷ ಸಂಗ ನೆನೆದು
ಮಾರಬಯಕೆಯಲ್ಲಿ ಮನವನೊಪ್ಪಿಸುವೊಲು
ಮಾರಹರನ ನಿಮ್ಮ ಪಾದ
ವಾರಿಜಕ್ಕೆ ಎನ್ನ ಮನವು
ಸೂರೆಗೊಂಬುವಂತೆ ಬುದ್ದಿ ಎಂದಿಗಪ್ಪುದು || ೪ ||
ತಾಯ ತಪ್ಪಿ ಕರುಳ ಶಿಶುವು
ಸಾಯುತಿರಲು ದರ್ಪಗುಂದಿ
ಮಾಯೆ ಹುಟ್ಟಿ ಮಾತೆ ಬಂದು ಮೊಲೆಯ ಕೊಡುವೊಲು
ಕಾಯಜಾರಿ ದೇವ ನಿಮ್ಮ
ಪ್ರೀಯ ಕರುಣದಿಂದಲೆನ್ನ
ಕಾಯ್ದು ರಕ್ಷಿಪಂತ ಮನವು ಎಂದಿಗಪ್ಪುದೊ || ೩ ||
ಹರನೆ ಎನ್ನ ಕರಕಮಲಕೆ
ಸ್ಥಿರವಾಗಿ ಬಂದು ನಿಂದು
ದುರಿತ ಭವದ ಬಾಧೆಗಳನ್ನು ಬಿಡಿಸಿದೊಂದನು
ಹರನೆ ನೀನು ಪಾಲಿಸಯ್ಯ
ಸೆರಗನೊಡ್ಡಿ ಬೇಡಿಕೊಂಬೆ
ಪರಮ ಷಡಕ್ಷರಿಯ ಲಿಂಗ ಪೊರೆದು ಸಲಹಯ್ಯಾ || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ
ಉಲ್ಲೇಖ ಟಿಪ್ಪಣಿ: ಮುಪ್ಪಿನ ಷಡಕ್ಷರಿಗಳ ಹೆಚ್ಚಿನ ಪದಗಳು