ಭಾಮಿನಿಷಟ್ಪದಿ
ಎಲ್ಲ ವರಗಳ ಕೊಡುವ ದೇವನು
ಇಲ್ಲಿ ಕರಪೀಠದೊಳು ಬಂದಿರೆ
ಖುಲ್ಲ ಮನವೇ ನಿತ್ಯ ಪದವಿಯ ಪಡೆದು ಸುಖಿಯಾಗು || ಪ ||
ಸೂಳೆ ನಂಬಿಗೆ ಹೊನ್ನ ಮಳೆಯನು
ಚೋಳರಾಯ್ಗೆ ಕನಕವೃಷ್ಟಿಯ
ಹೇಳಲಾಕ್ಷಣ ಕರೆಸಿದಾತನು ಹಸ್ತದೊಳಗಿರಲು
ಖೂಳಮನವೇ ನಿತ್ಯ ಪೂಜಿಸಿ
ಕಾಲಕಾಮರ ಗೆಲಿದು ಶಿವಗಣ
ಮೇಳದೊಳಗಿರುತಿರ್ಪ ಪದವಿಯ ಪಡೆದು ಸುಖಿಯಾಗು || ೧ |
ನಂದಿಯುಂಡಿಗೆ ಹೊನ್ನಪಡಿಯಂ
ಒಂದುನುಳಿಯದೆ ನಂಬಿಯಣ್ಣಗೆ
ತಂದು ಕೊಡುವಾ ದೇವ ನಿನ್ನಯ ಹಸ್ತದೊಳಗಿರಲು
ಬೆಂದಮನವೇ ಬೇಡಿಕೊಂಬೆನು
ಕುಂದದಿಳೆಯೊಳು ಭಜಿಸಿ ಸುಖರಸ
ಸಿಂಧುತೆರೆಯೊಳಗಾಳುತಿರು ನೀ ನಿತ್ಯ ಸುಖಿಯಾಗು || ೨ ||
ಬಾಣ ಮಾಯೂರರಿಗೆ ಇಷ್ಟವ
ನೂಣೆಯಾಗದ ಹಾಂಗೆ ಕೊಟ್ಟಿಹ
ಜಾಣ ಬಂದು ಒಲಿದು ನಿನ್ನಯ ಹಸ್ತದೊಳಗಿರಲು
ಹೀನ ಮನವೇ ನಿತ್ಯ ಪೂಜಿಸು
ಏನುವನು ಪಡಿಯದೆಲೆ ಭಕ್ತಿ
ಜ್ಞಾನವೈರಾಗ್ಯವನ್ನು ಪಡೆಯುತ ನಿತ್ಯ ಸುಖಿಯಾಗು || ೩ ||
ಕಾಳಿದಾಸಂಗೊಲಿದು ಮೂಗಳು
ಲೋಲಲೋಚನಗಳನ್ನು ಕೊಟ್ಟಾ
ಭಾಳನೇತ್ರನು ಬಂದು ನಿನ್ನಯ ಹಸ್ತದೊಳಗಿರಲು
ಮೇಲುಗತಿ ಮತಿಯನ್ನು ಬಯಸುತ
ಲೀಲೆಯಿಂದಲಿ ನಿತ್ಯ ಪೂಜಿಸು
ನಾಳೆಗಿಂದಿಗೆ ಎನ್ನದೇ ನೀ ನಿತ್ಯ ಸುಖಿಯಾಗು || ೪ ||
ದಾಸಿಮಯ್ಯನಿಗೊಲಿದು ತವನಿಧಿ
ಏಸುಕಾಲಕೆ ಸವೆಯದಂದದಿ
ದೇಶವರಿಯಲು ಕೊಟ್ಟ ದೇವನು ಹಸ್ತದೊಳಗಿರಲು
ಘಾಸಿಯಾಗದೆ ಯಮನ ದೂತರ
ಪಾಶಕಾಗದೆ ನಿತ್ಯ ಪೂಜಿಸು
ಮೋಸಹೋಗದೆ ಈಶಪದವಿಯ ಪಡೆದು ಸುಖಿಯಾಗು || ೫ ||
ಸಿಂಧುಬಲ್ಲಾಳನಿಗೆ ಕರುಣಿಸಿ
ಕುಂದದಿಳೆಯೊಳು ಲಿಂಗಪದವಿಯ
ಚೆಂದದಿಂದಲಿ ಕೊಟ್ಟ ದೇವನು ಹಸ್ತದೊಳಗಿರಲು
ಮಂದಮತಿಯಲಿ ಕೆಡುವ ಮನವೇ
ಹೊಂದಿಯಡಿಗಳ ನುತಿಸಿ ಪೂಜಿಸಿ
ಮುಂದೆ ಸದ್ಗತಿ ಪಡೆದು ಶಿವನೊಳು ನಿತ್ಯ ಸುಖಿಯಾಗು || ೬ ||
ಮಲ್ಲಿಕಾರ್ಜುನ ಪಂಡಿತರಿಗಾ
ಖುಲ್ಲ ಜೈನನು ಕಣ್ಣು ಕೀಳಿಸೆ
ಒಳ್ಳಿತಾಗಿಯೇ ಕಣ್ಣ ಕೊಟ್ಟವ ಹಸ್ತದೊಳಗಿರಲು
ಖುಲ್ಲ ಮನವೇ ನಿತ್ಯ ಪೂಜಿಸಿ
ಒಳ್ಳಿತೆನಿಸುವ ಮಾರ್ಗದಿಂದಲಿ
ಎಲ್ಲರಹುದನ ನಡೆದು ಶಿವನೊಳು ನಿತ್ಯ ಸುಖಿಯಾಗು || ೭ ||
ಲೋಲ ಶಂಕರದಾಸಿಮಯ್ಯಗೆ
ಕಾಳುದೈವವ ಸುಡಲಿಗೋಸುಗ
ಭಾಳನೇತ್ರವ ಕೊಟ್ಟ ದೇವನು ಹಸ್ತದೊಳಗಿರಲು
ಕೋಳುಹೋಗದೆ ನಿತ್ಯ ಪೂಜಿಸಿ
ಲೀಲೆಯಿಂದಲಿ ಹಾಡಿ ಹೊಗಳನು
ಕೂಲವಾಗಿರು ಶರಣರಿಗೆ ಶಿವನೊಳಗೆ ಸುಖಿಯಾಗು || ೮ ||
ಭೂಮಿಯೊಳಗಾ ಮಲುಹಣಯ್ಯಗೆ
ಕಾಮಿತಾರ್ಥವನಿತ್ತ ದೇವನು
ಪ್ರೇಮದಿಂದಲಿ ಬಂದು ನಿನ್ನಯ ಹಸ್ತದೊಳಗಿರಲು
ಸೋಮಧರನೊಳು ಬೆರಸಬಲ್ಲೊಡೆ
ಕಾಮ ಕ್ರೋಧಗಳಳಿದು ಪೂಜಿಸು
ಆ ಮಹಾ ಶಿವಶರಣರೊಳು ನೀ ನಿತ್ಯ ಸುಖಿಯಾಗು || ೯ ||
ಧರೆಯೊಳೆಲ್ಲರು ಅರಿಯೆ ಬಾಣಾ
ಸುರಗೆ ಸಾಸಿರತೋಳ ಕೊಟ್ಟವ
ಕರುಣದಿಂದಲಿ ಬಂದು ನಿನ್ನಯ ಹಸ್ತದೊಳಗಿರಲು
ಮರೆಯದೆ ಅಷ್ಟ ವಿಧದ ಪೂಜೆಯ
ಹರುಷದಿಂದಲಿ ಮಾಡಿ ಸುಖರಸ
ಶರಧಿ ತೆರೆಯೊಳಗಾಳುತಿರು ನೀ ನಿತ್ಯ ಸುಖಿಯಾಗು || ೧೦ ||
ಎಲ್ಲ ಮುನಿಗಳು ಎಲ್ಲ ಮನುಗಳು
ಎಲ್ಲ ಸಿದ್ದರು ಎಲ್ಲ ಸಾಧ್ಯರು
ಇಲ್ಲಿ ಪಡೆದರು ನಿನ್ನ ಹಸ್ತದ ಲಿಂಗವನು ಭಜಿಸಿ
ಅಲ್ಲಿಗಲ್ಲಿಗೆ ಹರಿವ ಬುದ್ದಿಯ
ಸಲ್ಲವಿಡು ನೀ ನಿತ್ಯ ಪೂಜಿಸು
ಇಲ್ಲಿರುವ ಶಿವಷಡಕ್ಷರಿವರನಲ್ಲಿ ಸುಖಿಯಾಗು || ೧೧ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ