Previous ಎಂದಿಗೆ ದೊರಕುವುದು ಶಿವಯೋಗದೊಳೆಂದಿಹೆನೋ Next

ಏತರ ಭಯವೆಮಗೆ

ಪರಿವರ್ಧಿನಿಷಟ್ಪದಿ

ಕಂಗೆಡಲೇತಕೆ ಕಳವಳಿಸಿಯೇ ನಾ
ನಂಗಜಮಾಯೆಯ ಮನದಬ್ಬರಕಂ
ಲಿಂಗದ ಸೂತ್ರವ ಕರದಲಿ ಪಿಡಿದಿರಲೇತರ ಭಯವಮಗೆ || ಪ ||

ಅಂಧಕನಿಗೆ ಸತ್ಪಥವನು ತೋರುವ
ಚಂದದಿ ಮೂಕಗೆ ಮಾತುಂ ಜೀವಿತ
ಸಿಂಧುವಿನೊಳಗಣ ಹೊಳವನು ತಪ್ಪಿಸಿ ಪಥವನು ತೋರ್ಪ೦ತೆ
ಹಿಂದಣ ವಾಸನೆಯನು ಪರಿಹರಿಸುವ
ಮುಂದಣ ಸದ್ಗತಿಯನ್ನು ತೋರುವ ಘನ
ಸಂದ ಪುರಾತರ ವಚನಗಳಿರುತಿರೆ ಏತರ ಭಯವೆಮಗೆ || ೧ ||

ವರಸಂಜೀವನದೌಷಧವಿರುತಿರೆ
ಮರಣದ ಭೀತಿಗೆ ಅಂಜಲದೇತಕೆ
ಪರುಷದ ಖಣಿ ತಾ ಮನೆಯೊಳಗಿರುತಿರೆ ಬಡತನ ಕಂಜುವರೇ || ೨ ||
ಶರಣರ ನಿಧಿಯೆಂದೆನಿಸುವ ಪಂಚಾ
ಕ್ಷರಿಜಿಹ್ವಾಗ್ರದ ಕೊನೆಯೊಳಗಿರುತಿರೆ

ದುರಿತಕ್ಕಂಜುವರೇ ಬಡ ಮನವೇ ನಂಬಿರು ಭಯ ಬೇಡ
ಅಮೃತಾಂಬುಧಿಯಿರೆ ಹಸಿವಿನ ಭಯವೇ
ದ್ಯುಮಣಿಯು ತಾನಿರೆ ತಿಮಿರದ ಭಯವೇ
ಹಿಮಭಯವೇತಕೆ ತಾನಗ್ನಿಯ ಸನ್ನಿಧಿಯಲಿ ಮೂರ್ತವ ಮಾಡಿ
ಕ್ರಮಗಡಲೇತಕೆ ಚಿದ್ಘನಮೂರುತಿ
ಅಮಲನಿರಾಮಯ ನಿರ್ಗುಣ ನಿಷ್ಕಲ
ಅಮಮ ಷಡಕ್ಷರಿ ಲಿಂಗವು ಇರುತಿರಲೇತರ ಭಯ ನಮಗೆ || ೩ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಎಂದಿಗೆ ದೊರಕುವುದು ಶಿವಯೋಗದೊಳೆಂದಿಹೆನೋ Next