ಭಾಮಿನಿಷಟ್ಪದಿ
ಹಾಡಿದವರಿಗೆ ಬೈದಡವರಿಗೆ
ಕಾಡಿದವರಿಗೆ ಕೊಂದಡವರಿಗೆ
ಬೇಡಿದಿಷ್ಟವ ಕೊಡುವ ದಯನಿಧಿ ಎಂದಿಗೊಲಿದಪನೋ || ಪ ||
ಕಲ್ಲಿಲಿಟ್ಟಂಥವರಿಗೊಲಿದನು
ಬಿಲ್ಲಿನಲಿ ಹೊಯ್ದವರಿಗೊಲಿದನು
ಫುಲ್ಲಶರನ ವಿಕಾರಿಯೆನಿಸಿದ ಶ್ವೇತನಿಗೆ ಒಲಿದ
ಸಲ್ಲದುದನೇ ನುಡಿದು ನಗಿಸಿದ
ಗಲ್ಲಿಯಾಕ್ಷಣ ಒಲಿದ ದೇವನು
ಒಳ್ಳಿದನು ಇಂತಪ್ಪ ದಯನಿಧಿ ಎಂದಿಗೊಲಿದಪನೋ || ೧ ||
ಮರೆದು ಈಶನ ನೆನೆದರಾದಡೆ
ಸುರರ ಪದವಿಗಳಾಗುತಿರ್ಪವು
ಅರಿದು ಈಶನ ನೆನೆದರಾದಡೆ ತನ್ನ ಪದವೀವ
ದುರುಳನಾದೆನು ಮೊದಲೆ ಭಜಿಸದೆ
ಮರುಳನಾದನ ಘನವನರಿಯದ
ಹರಹರಾ ಇಂತಪ್ಪ.ದಯನಿಧಿ ಎಂದಿಗೊಲಿದಪನೋ || ೨ ||
ಬಿದಿರಿದುದಕಕೆ ಹರಿದ ಎಸಳಿಗೆ
ಪದಪಿನಿಂದಲಿ ಇಂದ್ರಪದವಿಯ
ನೊದಗಿಸಿಯೆ ತಾನವರಿಗಿತ್ತನು ಮುದದಿಯೆನ್ನಾಳ್ದ
ಪದುಳದಿಂ ಪೂಜಿಸದ ಕೆಟ್ಟೆನು
ಮುದದಿ ಮುನ್ನವೆ ಹೊಗಳದಾದೆನು
ಸದಮಲಾತ್ಮಕನಾದ ದಯನಿಧಿ ಎಂದಿಗೊಲಿದಪನೊ || ೩ ||
ಸಟೆಗಳಿಂದಲಿ ಪೂಜಿಸಲು ತಾ
ದಿಟಗಳಿಂದಲಿ ಪೂಜಿಸಲು ತಾ
ನಟಮಟವ್ಯಾಪಾರದಿಂದಲಿ ಪೂಜಿಸಲು ಬಳಿಕ
ಕುಟಿಲದಿಂದಲಿ ಪೂಜಿಸಿದೊಡಂ
ನಿಟಿಲನೇತ್ರನು ತನ್ನ ಪದವಿಯ
ಘಟಿಸಿ ಕೊಡುವಿಂತಿಪ್ಪ ದಯನಿಧಿ ಎಂದಿಗೊಲಿದಪನೋ || ೪ ||
ದುರುಳನಾದೆನು ಮೊದಲೆ ಭಜಿಸದೆ
ಮರುಳನಾದೆನು ಘನವನರಿಯದೆ
ಹರಹರಾ ಇಂತಪ್ಪ ಹರನೇ ನಿಮ್ಮನೊಲಿಸಿಹರ
ಚರಣರಕ್ಷೆಗೆ ಸರಿಯನಾಹನ
ಬಿರುದುನಿಂದೆನಗಿಲ್ಲ ಕೊರತೆಯು
ಬಿರುದಿನ ಷಡಕ್ಷರಿಯ ಲಿಂಗವೆ ಒಲಿದು ಕೃಪೆಯಾಗು || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ