Previous ಒಲ್ಲೆ ಗಂಡನ ಕೂಟ ಏನೇನೆಂಬೆ ಎನ್ನೊಗೆತನವ Next

ಆಪತ್ತಿಗೊಳಗಾದೆನಮ್ಮಯ್ಯ

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ


ಆಪತ್ತಿಗೊಳಗಾದೆನಮ್ಮಯ್ಯ, ನಾ
ನಾಪತ್ತಿಗೊಳಗಾದೆ |ಪಲ್ಲವಿ|

ಪಡುವಣ ದೇಶದಿ ಹುಟ್ಟಿದೆನಮ್ಮ
ಬಡಗಣ ದೇಶದಿ ಬೆಳೆದೆ
ಆಗರದ ನಾಡಿಗೆ ಇತ್ತರೆನ್ನನು
ದೂರದ ನೀರ ನಾ ಹೊರಲಾರೆನಮ್ಮ |೧|

ಕೂಳಿಲ್ಲ ಹೊಟ್ತೆಗೆ, ತಲೆ ಬತ್ತಿಗಟ್ಟಿತು
ಬಲ್ಮೊಲೆಗಳು ಬತ್ತಿ ಬಡವಾದೆ
ಒಲ್ಲದ ಗಂಡನ ಒಲಿಸಿಹೆನೆಂದಡೆ
ಬಲ್ಲವರೊಂದು ಮದ್ದ ಹೇಳಿರಮ್ಮ |೨|

ಆರೂ ಬಾರದ ತವರೂರ ದಾರಿಯಲಿ
ಬಾರದ ಭವದಲಿ ಬಂದೆನು
ಊರ ಕಡೆಗೆ ನೋಡಿ ಕಣ್ಣೆಲ್ಲ ಕೆಟ್ಟವು
ನೀರ ಹೊಳೆಗೆ ಹೋಗಿ ಅತ್ತೆನಮ್ಮ |೩|

ಅತ್ತೆಯ ಲೇಸುಂಟೆ? ಮಾವನ ಲೇಸುಂಟೆ?
ಗಂಡನ ಲೇಸುಂಟೆಂಬುದನರಿಯೆ
ಆಸತ್ತು ಬೇಸತ್ತು ಒಲೆಯ ಮುಂದೆ ಕುಳಿತರೆ
ಪಾಪಿ ಗಂಡ ಕಾಲೊಳೊದ್ದನಮ್ಮ |೪|

ಉನ್ನತ ಶ್ರೀಶೈಲ ಚೆನ್ನಮಲ್ಲಿಕಾರ್ಜುನ
ನಿನ್ನ ನಂಬಿದ ಭಕ್ತೆ ನಾನೆಯಲ್ಲಾ!
ಮುನ್ನಿನ ಶರಣರ ಸಲಹಿದಂದದಿ ಬೇಗ
ಎನ್ನ ಸಲಹೊ ದೇವರ ದೇವ |೫|

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಒಲ್ಲೆ ಗಂಡನ ಕೂಟ ಏನೇನೆಂಬೆ ಎನ್ನೊಗೆತನವ Next